ಗುರುಮಾರ್ಗದಲ್ಲಿ ಸಾಗಿದರೆ ಜೀವನ ಪಾವನ: ಡಾ. ಶಿವಯೋಗಿ ದೇವರು

| Published : Jul 09 2025, 12:18 AM IST

ಗುರುಮಾರ್ಗದಲ್ಲಿ ಸಾಗಿದರೆ ಜೀವನ ಪಾವನ: ಡಾ. ಶಿವಯೋಗಿ ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಕಣ್ಣಿಗೆ ಕಾಣುವ ಗುರುಗಳನ್ನೇ ಭಕ್ತಿಯಿಂದ ನಮಿಸಿ, ಪೂಜಿಸಿ ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು.

ರಾಣಿಬೆನ್ನೂರು: ಭೂಮಿ ಮೇಲೆ ದೇವರ ಅಸ್ತಿತ್ವದ ವಿಚಾರ ಅವರವರ ಭಾವನೆಗಳಿಗೆ ಬಿಟ್ಟಿದೆ. ಆದರೆ ಎಲ್ಲರಿಗೂ ಗುರುಗಳಿದ್ದು, ಅವರನ್ನೇ ದೇವರುಗಳೆಂದು ನಂಬಿ ಅವರ ಮಾರ್ಗದರ್ಶನದಲ್ಲಿ ಸಾಗಿ ನಿಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಬೆಳಗಾವಿ ಕಾರಂಜಿಮಠದ ಡಾ. ಶಿವಯೋಗಿ ದೇವರು ನುಡಿದರು. ಸ್ಥಳೀಯ ಕೊಟ್ಟೂರೇಶ್ವರ ನಗರದ ಶ್ರೀ ಗುರು ಕೊಟ್ಟೂರೇಶ್ವರ ಮಠದಲ್ಲಿ ಏರ್ಪಡಿಸಿದ್ದ ಬಸವಾದಿ ಶಿವಶರಣರ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಣ್ಣಿಗೆ ಕಾಣುವ ಗುರುಗಳನ್ನೇ ಭಕ್ತಿಯಿಂದ ನಮಿಸಿ, ಪೂಜಿಸಿ ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. 12ನೇ ಶತಮಾನದ ಶರಣ, ಶರಣೆಯರ ಆದರ್ಶಗಳು, ತತ್ವಗಳು, ಸಿದ್ಧಾಂತಗಳು, ನುಡಿಗಳು ಇಂದಿಗೂ ಜನಮಾನಸದಲ್ಲಿ ಬೇರೂರಿವೆ. ಅಂತಹ ಮಹಾತ್ಮರ ಮಾರ್ಗದರ್ಶನದಲ್ಲಿ ಸರ್ವಧರ್ಮಿಯರು ಮುನ್ನಡೆಯಬೇಕು. ಭವ್ಯ ಪರಂಪರೆ, ಸಂಸ್ಕೃತಿ, ಇತಿಹಾಸ, ಸಂಸ್ಕಾರ, ಐತಿಹ್ಯ ಹೊಂದಿರುವ ನಾಡಿನಲ್ಲಿ ಜನಿಸಿ ಸಮಾಜ ಸೇವೆಗೈದು ದೇವರುಗಳೆಂದು ಹೆಸರಾಗಿರುವ ಮಹನೀಯರನ್ನು ನಾವಿಂದು ಸ್ಮರಣೆ ಮಾಡಲೇಬೇಕಾಗಿದೆ ಎಂದರು.ಈರಣ್ಣ ಅಜ್ಜೇವಡಿಮಠ, ಶಾಂತಯ್ಯ ಶಾಸ್ತ್ರೀಗಳು, ಬಿದ್ದಾಡೆಪ್ಪ ಚಕ್ರಸಾಲಿ, ಸರೋಜಾ ಅಜ್ಜೇವಡಿಮಠ, ಅರವಿಂದ ಅಜ್ಜೇವಡಿಮಠ, ಪ್ರಭು ಹನುಮಸಾಗರ, ವಿಶ್ವನಾಥ ಕೋಡದ, ಮಹೇಶ ಶೆಟ್ಟರ, ಪರಮೇಶ ಯಡಿಯಾಪುರ, ಸತೀಶ ಅಜ್ಜೇವಡಿಮಠ, ಗಿರೀಶ ಮಾಗನೂರ, ಪ್ರಭಾವತಿ ನಿಡಗುಂದಿ, ಆನಂದ ಪಾಟೀಲ, ಮಹಾಂತೇಶಸ್ವಾಮಿ ಚಿಕ್ಕಮಠ, ಬಸವರಾಜ ಹುಚಗೊಂಡರ, ಅಮೃತಗೌಡ ಪಾಟೀಲ, ಮಂಜುಳಾ, ಉಮಾ, ಲಲಿತವ್ವ, ರತ್ನವ್ವ, ಷಣ್ಮುಖಪ್ಪ, ವಸಂತ, ಶ್ರುತಿ, ಜಾಹ್ನವಿ, ಕೊಟ್ರೇಶ್, ಚನ್ನಯ್ಯ, ಶಿವು ಶಾಸ್ತ್ರಿ ಮತ್ತಿತರರಿದ್ದರು.ಇಂದು, ನಾಳೆ ಗುರುಪೂರ್ಣಿಮಾ ಕಾರ್ಯಕ್ರಮ

ರಾಣಿಬೆನ್ನೂರು: ಇಲ್ಲಿನ ಶ್ರೀರಾಮ ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮಾ ಅಂಗವಾಗಿ ಜು. 9, 10ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜು. 9ರಂದು ಬೆಳಗ್ಗೆ 5.15ಕ್ಕೆ ಕಾಕಡಾರತಿ, 6ಕ್ಕೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ,7ಕ್ಕೆ ಆರತಿ, 7.30ಕ್ಕೆ ದತ್ತಾತ್ರೇಯ ಹೋಮ ನೆರವೇರುವುದು. 9ಕ್ಕೆ ನಗರದ ಸಿದ್ದೇಶ್ವರ ದೇವಸ್ಥಾನ ಬಳಿಯಿಂದ ಸಾಯಿಬಾಬಾ ಉತ್ಸವ ಮೂರ್ತಿ ಹಾಗೂ ಸಾಯಿ ಸಚ್ಚರಿತ ಪದ್ಯ ಕೋಶ ಗ್ರಂಥದ ಮೆರವಣಿಗೆ ಪ್ರಾರಂಭವಾಗಿ ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಪೋಸ್ಟ್ ಸರ್ಕಲ್, ಬಸ್‌ ನಿಲ್ದಾಣ ರಸ್ತೆ, ಪುನಿತ್ ರಾಜಕುಮಾರ ಸರ್ಕಲ್, ಕೋರ್ಟ್ ಸರ್ಕಲ್, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ದೇವಸ್ಥಾನಕ್ಕೆ ಬಂದು ಸೇರುವುದು.

ಜು. 10ರಂದು ಬೆಳಗ್ಗೆ 5.15ಕ್ಕೆ ಕಾಕಡಾರತಿ, 6ಕ್ಕೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಂಗಲ ಸ್ನಾನ, 6ಕ್ಕೆ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, 10.30ಕ್ಕೆ ಶ್ರೀ ಸಾಯಿ ಅಷ್ಟೋತ್ತರ ಪುಷ್ಪಾರ್ಚನೆ, ಮಧ್ಯಾಹ್ನ 12ಕ್ಕೆ ನೈವೇದ್ಯ ಆರತಿ, 1ಕ್ಕೆ ಪ್ರಸಾದ, ಸಂಜೆ 6.30ಕ್ಕೆ ಧೂಪಾರತಿ, 7.30ಕ್ಕೆ ಪಾಲಕಿ ಮೆರವಣಿಗೆ, ರಾತ್ರಿ 9.30ಕ್ಕೆ ಶೇಜಾರತಿ ಜರುಗುವುದು ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.