ಸಾರಾಂಶ
ಬಳ್ಳಾರಿ: ತ್ಯಾಗ ಮತ್ತು ಸೇವೆ ಭಾರತದ ಎರಡು ಪ್ರಮುಖ ಆದರ್ಶಗಳಾಗಿದ್ದು, ವಿದ್ಯಾರ್ಥಿ ದಿಸೆಯಲ್ಲಿಯೇ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪ್ರತಿಷ್ಠಿತ ವೀವಿ ಸಂಘದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನೆ ದಿನಾಚರಣೆ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿ-ಯುವಜನರ ಪಾತ್ರ ಮಹತ್ವದ್ದು. ಆದರ್ಶಗಳ ಅರಿವು ಯುವಜನರಿಗೆ ಅಗತ್ಯವಿದೆ. ಸೇವೆಯ ಮಹತ್ವವನ್ನು ಅರಿತಾಗ ಮಾತ್ರ ಬದುಕು ಪಾವನಗೊಳ್ಳುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರೀಯವಾಗುವುದರಿಂದ ವ್ಯಕ್ತಿತ್ವ ವಿಕಸನ ಜೊತೆಗೆ ಸಮಾಜಿಕ ಜವಾಬ್ದಾರಿ ಗೊತ್ತಾಗುತ್ತದೆ. ನಾಯಕತ್ವ ಗುಣ ಬೆಳೆಯುತ್ತದೆ. ನಿಸ್ವಾರ್ಥಸೇವೆಯಲ್ಲಿ ಸಿಗುವ ನಿರಾಳತೆಯ ಅನುಭವ ನಿಮಗಾಗುತ್ತದೆ ಎಂದರು.
ಯುವಕರು ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ. ಪರಿಸರ ಹಾಳಾಗಲು ಬಿಡಬೇಡಿ. ನಿಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಸರ ರಕ್ಷಣೆಯ ಕಾರ್ಯ ಕೈಗೊಳ್ಳಿ. ನೀವಿರುವ ತಾಣಗಳ ಬಳಿಯೇ ಸುಂದರ ಪರಿಸರ ನಿರ್ಮಾಣಕ್ಕೆ ಪ್ರಯತ್ನಿಸಿ. ಬರೀ ಪಠ್ಯ ಅಧ್ಯಯನದಿಂದ ಜ್ಞಾನಾರ್ಜನೆ ಸಾಧ್ಯವಿಲ್ಲ. ಹೆಚ್ಚು ಹೆಚ್ಚು ಅಧ್ಯಯನಶೀಲರಾಗಿ. ಬಿಡುವಿನ ಸಮಯವನ್ನು ವೃಥಾ ಕಳೆಯಬೇಡಿ. ಓದು ಅಥವಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.ಬಳ್ಳಾರಿ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಯೋಜನಾಧಿಕಾರಿ ಡಾ.ಕುಮಾರ್ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅವರು ಮಾತನಾಡಿ, ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಗ್ರಾಮವೊಂದನ್ನು ದತ್ತು ಪಡೆದು ಪರಿಸರ ಕಾಳಜಿಯ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುವಂತಾಗಲಿ ಎಂದು ಆಶಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಸತೀಶ್ ಈ.ಹಿರೇಮಠ್ ಪ್ರಾಸ್ತಾವಿಕ ಮಾತನಾಡಿದರು. ವಿಶ್ವವಿದ್ಯಾಲಯದ ಮುಖ್ಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಂ. ಪ್ರಶಾಂತಕುಮಾರ್, ಡಾ.ಮೋಹನ್ ದಾಸ್, ಕಾಲೇಜಿನಎನ್ಎಸ್ಎಸ್ ಅಧಿಕಾರಿ ಡಾ.ಎಸ್. ಮಲ್ಲಿಕಾರ್ಜುನ್, ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಅಶ್ವರಾಮು, ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ದ್ವಿತೀಯ ವರ್ಷದ ಎಲ್ಲ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.
ಬಳ್ಳಾರಿಯ ವೀವಿ ಸಂಘದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕಕ್ಕೆ ಬಳ್ಳಾರಿ ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಚಾಲನೆ ನೀಡಿದರು.