ಹುಟ್ಟುಮತ್ತು ಸಾವು ನಡುವಿನ ಕ್ಷಣವೇ ಬದುಕು: ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

| Published : Jan 29 2024, 01:30 AM IST

ಹುಟ್ಟುಮತ್ತು ಸಾವು ನಡುವಿನ ಕ್ಷಣವೇ ಬದುಕು: ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯದಲ್ಲಿ ಹಣ್ಣು, ಯೌವನದಲ್ಲಿ ಹೆಣ್ಣು, ಮುಪ್ಪಿನಲ್ಲಿ ಮಣ್ಣು ಎಂದು ಜೀವನ ಮುಗಿಯುತ್ತದೆ. ದೇಶದ ಋಷಿಗಳು ಬದುಕಿನ ಬಗ್ಗೆ ಸಂಶೋಧಿಸಿದರು. ಬದುಕನ್ನು ಜಗತ್ತು ಅಂದ ಮೇಲೆ ತಿಪ್ಪೆನೂ ಇರುತ್ತದೆ. ಹೂವನ್ನು ಕಾಣುತ್ತದೆ.

ಕೊಪ್ಪಳ: ಹುಟ್ಟು ಮತ್ತು ಸಾವಿನ ಮಧ್ಯೆದ ಕ್ಷಣವೇ ಬದುಕು ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಕಣ್ಣಿಗೆ ಕಾಣುವ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿಗೂ ಆರಂಭವಿದೆ; ಅಂತ್ಯವೂ ಇದೆ. ಆರಂಭ ಮತ್ತು ಅಂತ್ಯದ ನಡುವೆ ಇರುವುದೇ ಬದುಕು. ಹುಟ್ಟು ಮತ್ತು ಸಾವಿನ ಮಧ್ಯೆದ ಕ್ಷಣ ಬದುಕು. ಬೆಳಗ್ಗೆ ಅರಳುವ ಹೂವು ಸಂಜೆ ಬಾಡುತ್ತದೆ. ಭಾರತದ ಹೂವು, ಅಮೆರಿಕದ ಹೂವು ಸಹ ಬಾಡುತ್ತವೆ. ತಾಯಿ ಗರ್ಭದಿಂದ ಬಂದಿರುವ ನಮ್ಮ ದೇಹ ಅಂತ್ಯ ಆಗುತ್ತದೆ. ತಲೆಗೂದಲಿಗೆ ಹಚ್ಚಿರುವ ಬಣ್ಣ ಶಾಶ್ವತವಲ್ಲ. ನಾವು ಮುಖಕ್ಕೆ ಮೇಕಪ್ ಮಾಡಿದರೂ ಅದು ವಯಸ್ಸಾಗದೆ ಇರುತ್ತದೆಯೇ? ಮುಖದ ಮೇಲಿನ ರಿಂಕಲ್ ಕಾಣಬಾರದು ಎಂದು ಎಷ್ಟು ಮೇಕಪ್ ಮಾಡಿದರೂ ಅಷ್ಟೇ, ಅದು ಬಾಡುತ್ತದೆ. ಹುಟ್ಟಿದ ದೇಹ ಬಾಡುತ್ತದೆ ಎಂಬ ಭಾವ ಗೊತ್ತಿರಬೇಕು. ಹುಟ್ಟು ಹಬ್ಬಕ್ಕೆ ಕಟ್ಟಿದ ಬಲೂನ್ ಟಬ್ ಅನ್ನುತ್ತದೆ. ಅಳಿದು ಹೋಗುವ ಜೀವ ಸಹ ಆಸೆ ಬಿಡುವುದಿಲ್ಲ ಎಂದರು.ಬಾಲ್ಯದಲ್ಲಿ ಹಣ್ಣು, ಯೌವನದಲ್ಲಿ ಹೆಣ್ಣು, ಮುಪ್ಪಿನಲ್ಲಿ ಮಣ್ಣು ಎಂದು ಜೀವನ ಮುಗಿಯುತ್ತದೆ. ದೇಶದ ಋಷಿಗಳು ಬದುಕಿನ ಬಗ್ಗೆ ಸಂಶೋಧಿಸಿದರು. ಬದುಕನ್ನು ಜಗತ್ತು ಅಂದ ಮೇಲೆ ತಿಪ್ಪೆನೂ ಇರುತ್ತದೆ. ಹೂವನ್ನು ಕಾಣುತ್ತದೆ. ಊರು ಬಿಟ್ಟು ಹೋಗುವಾಗ ತಿಪ್ಪೆ ಪ್ರಚಾರ ಮಾಡಬಾರದು. ಹೂವನ್ನು ಪ್ರಚಾರ ಮಾಡಬೇಕು. ಜೀವನದಲ್ಲಿ ಒಂದಿಷ್ಟು ರಾಡಿ ಇರುವುದೇ. ಹಾಗೆ ಬದುಕಿನಲ್ಲಿರುವ ರಾಡಿ ತಗಿದು ನಮಗೆ ಬೇಕಾದಷ್ಟು ನೀರನ್ನು ಸೋಸಿ ಕುಡಿಯಬೇಕು. ನಾವು ಜಗತ್ತಿನಲ್ಲಿ ನನ್ನ ದಾರಿಯಲ್ಲಿರುವ ಜಾಲಿ ಮುಳ್ಳನ್ನು ತೆಗೆದು ಬದುಕುವುದನ್ನು ರೂಢಿಸಿಕೊಳ್ಳಬೇಕು. ಕತ್ತಲೆಯನ್ನು ಬೈಯ್ಯುವುದರಿಂದ, ಬಡಿಯುವುದರಿಂದ ಕತ್ತಲೆ ಹೋಗುವುದಿಲ್ಲ. ಕತ್ತಲೆ ಅಂದರೆ ಬೆಳಕಿನ ಅಭಾವ ಅಷ್ಟೆ. ಕತ್ತಲೆ ಹೋಗಲಾಡಿಸಲು ಒಂದು ದೀಪ ಸಾಕು. ಸುಮ್ಮನೆ ದೀಪ ಹಚ್ಚುತ್ತಾ ಹೋಗಬೇಕು. ಕೆಟ್ಟದರ ಮಧ್ಯೆ ದಿವ್ಯತೆ ಕಾಣುವ ಕಣ್ಣು ಬೇಕು. ಕೆಟ್ಟವರ ವ್ಯಕ್ತಿ, ಜನರ ಮಧ್ಯೆ ಒಳ್ಳೆಯದನ್ನೇ ಕಲಿಯಬೇಕು ಎಂದರು.ಸಾಯುವಾಗ ಸಾಕ್ರೇಟಿಸ್ ನಗುತ್ತಿದ್ದ. ಏಕೆಂದರೆ ಬದುಕಿದ್ದಾಗ ಸಾವು ಅಂದರೆ ಏನು ಅಂತ ತಿಳಿಯುತ್ತಿದ್ದೇನೆ ಎಂದು ಹೇಳಿದ್ದ. ಸಾವಿನ ಮಧ್ಯೆಯೂ ನಗುವಿನ ಹಾದಿ ಸೃಷ್ಟಿಸಿಕೊಳ್ಳಬೇಕು. ಸಸಿ ತುಳಿದರೂ ಹೂ ನೀಡುತ್ತದೆ. ಬೆಳೆದವರನ್ನು ತುಳಿಯುವುದು ಮನುಷ್ಯನ ಚಾಳಿ. ತುಳಿದರವನ್ನು ತಲೆಯೊಳಗೆ ಇಟ್ಟುಕೊಂಡಿದ್ದರೆ ನನ್ನಿಂದ ಹೂವು ಹೇಗೆ ಅರಳುತ್ತಿತ್ತು ಅನ್ನುವ ಸಸಿ ಮುಂದೆ ಮನುಷ್ಯ ಕಲಿಯಬೇಕಾಗಿದೆ. ಸ್ನಾನ ಮಾಡಿದ ನೀರಿನಿಂದ ಕಲ್ಪವೃಕ್ಷ ತಿಳಿನೀರು ನೀಡುತ್ತದೆ. ಹಾಗೆ ಮನುಷ್ಯ ಸ್ವಚ್ಛ ಬದುಕಬೇಕು ಎಂದರು.ಗವಿಸಿದ್ದಪ್ಪಜ್ಜನ ಕಳಸಕ್ಕೆ ಬಂಗಾರದ ಕಳಸ ಕೊಡಿಸಿದವನ ಭಕ್ತಿ ಮೇಲು ಅಂತಲ್ಲ, ದಾಸೋಹದಲ್ಲಿ ಸ್ವಚ್ಛತೆ ಮಾಡಿದವನ ಭಕ್ತಿ ಸಹ ಶ್ರೇಷ್ಠ. ಸುಗರ್ ಇರುವ ಮನುಷ್ಯ ಶ್ರೀಮಂತನಲ್ಲ. ಕೈ ಕಾಲು ಗಟ್ಟಿ ಇರುವ, ದುಡಿಯುವವನೇ ಶ್ರೀಮಂತ ಎಂದರು.ನಿಮ್ಮಂತ ಭಕ್ತರು ಇದ್ದರೆ ಮಠ ದೊಡ್ಡದಾಗುತ್ತದೆ.ಈ ಸಣ್ಣ ಸ್ವಾಮೀಜಿಗೆ ನಿಮ್ಮ ಹೃದಯಲ್ಲಿ ಜಾಗ ಕೊಟ್ಟಿದ್ದೀರಲ್ಲ, ಇದಕ್ಕೆಬೆಲೆ ಕಟ್ಟಲು ಆಗುವುದಿಲ್ಲ. ದೇವರು ಭಕ್ತನಲ್ಲಿ ಇದ್ದಾನೆ. ದುಡಿದದ್ದನ್ನು ಹಂಚಿ ಸಂತೋಷ ಪಡುವ ವ್ಯಕ್ತಿಯಲ್ಲಿ ದೇವರಿದ್ದಾನೆ ಎಂದರು. ನೀವು ಸಂತೋಷ ಪಟ್ಟರೆ ಅದುವೇ ನನಗೆ ಜಾತ್ರೆ ಎಂದರು.