ಮನುಷ್ಯನ ಜೀವನ ಈಗ ಆಧುನಿಕ ಜೈಲಿನಂತಾಗಿದೆ. ನಿತ್ಯವೂ ಒತ್ತಡ, ಆತಂಕದ ಜೈಲಿನಿಂದ ಬಿಡುಗಡೆ ಆಗಬೇಕಾದರೆ ಪುಸ್ತಕ ಓದುವಿಕೆ ಬಹಳ ಮುಖ್ಯ. ಪುಸ್ತಕ ಎಂಬುದು ನಮಗೆ ಗೊತ್ತಿಲ್ಲದಂತೆ ಹೃದಯ ಬೆಸೆಯುವ ಕೆಲಸ ಮಾಡುತ್ತದೆ. ಆದ್ದರಿಂದ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ‘ಕನ್ನಡಪ್ರಭ’ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್(ಜೋಗಿ) ಹೇಳಿದರು.
ಮಂಗಳೂರು : ಮನುಷ್ಯನ ಜೀವನ ಈಗ ಆಧುನಿಕ ಜೈಲಿನಂತಾಗಿದೆ. ನಿತ್ಯವೂ ಒತ್ತಡ, ಆತಂಕದ ಜೈಲಿನಿಂದ ಬಿಡುಗಡೆ ಆಗಬೇಕಾದರೆ ಪುಸ್ತಕ ಓದುವಿಕೆ ಬಹಳ ಮುಖ್ಯ. ಪುಸ್ತಕ ಎಂಬುದು ನಮಗೆ ಗೊತ್ತಿಲ್ಲದಂತೆ ಹೃದಯ ಬೆಸೆಯುವ ಕೆಲಸ ಮಾಡುತ್ತದೆ. ಆದ್ದರಿಂದ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ‘ಕನ್ನಡಪ್ರಭ’ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್(ಜೋಗಿ) ಹೇಳಿದರು.
ಸಾಹಿತ್ಯ ಕೇಂದ್ರ ಮಂಗಳೂರು ವತಿಯಿಂದ, ಕೇಶವ ಸ್ಮೃತಿ ಸಂವರ್ಧನ ಸಮಿತಿ ಸಹಯೋಗದಲ್ಲಿ ನಗರದ ಸಂಘನಿಕೇತನದಲ್ಲಿ ಭಾನುವಾರ ಆರಂಭವಾದ ಮೂರು ದಿನಗಳ ‘ಪುಸ್ತಕ ಹಬ್ಬ-2026’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯನ ಜೀವನವನ್ನು ಪರಿವರ್ತಿಸುವ ಶಕ್ತಿ ಪುಸ್ತಕಕ್ಕೆ ಇದೆ. ಅದಕ್ಕಾಗಿ ಪುಸ್ತಕವನ್ನು ಸರಸ್ವತಿ ಎನ್ನುತ್ತಾರೆ. ಪುಸ್ತಕವನ್ನು ತುಳಿದರೆ ಅದನ್ನು ನಮಸ್ಕಾರ ಮಾಡುತ್ತೇವೆ. ಪುಸ್ತಕದ ಬಗ್ಗೆ ಇಂತಹ ಪೂಜನೀಯ ಕ್ರಮವನ್ನು ಭಾರತದಲ್ಲಿ ಮಾತ್ರ ಕಾಣಬಹುದು. ಹಣಕಾಸಿನ ಲಭ್ಯತೆ ಇಲ್ಲದ ಕಾಲೇಜು ದಿನಗಳಲ್ಲಿ ಅಂಚೆ ಕಾರ್ಡ್ ಬರೆದು ಸಾಹಿತಿಗಳಿಂದ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದ ಸನ್ನಿವೇಶವನ್ನು ಮರೆಯುವಂತಿಲ್ಲ ಎಂದರು.
ಓದಿಗೆ ಸಮಯ ಕೊಡಿ:
ಜೀವನದಲ್ಲಿ ಎಲ್ಲದಕ್ಕೂ ಸಮಯ ಎಂಬುದು ಇರುತ್ತದೆ. ಆದರೆ ನಾವು ಓದುವಿಕೆಗೆ ಸಮಯ ನಿಗದಿ ಮಾಡುವುದಿಲ್ಲ. ತನಗಿಂತ ಕಷ್ಟದಲ್ಲಿ ಇರುವವರನ್ನು ಪುಸ್ತಕ ಓದುವಿಕೆ ತೋರಿಸಿಕೊಡುತ್ತದೆ. ಈ ಮೂಲಕ ನಮಗೆ ಅರಿವು ಇಲ್ಲದಂತೆಯೇ ಜೀವನ ಪಾಠವನ್ನೂ ಪುಸ್ತಕ ಮಾಡುತ್ತದೆ. ಪುಸ್ತಕದ ಮೂಲಕ ಓರ್ವನ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯ ಎಂದರು. ಅಲ್ಲಲ್ಲಿ ಪುಸ್ತಕ ಹಬ್ಬದ ಅಗತ್ಯತೆ:
ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ಕೃತಕಬುದ್ಧಿ ಮತ್ತೆಯಂತಹ ಈಗಿನ ಯುಗದಲ್ಲಿ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ಆತಂಕದ ಸಂಗತಿ. ಯುವ ಜನತೆಯಲ್ಲಿ ಓದುವಿಕೆಯ ಅಭಿರುಚಿ ಮೂಡಿಸಲು ಇಂತಹ ಪುಸ್ತಕ ಹಬ್ಬಗಳನ್ನು ಅಲ್ಲಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರತಿಯೊಬ್ಬದ ಆತ್ಮಸಂಗಾತಿಯಾಗಿ ಪುಸ್ತಕ ಇರಬೇಕು. ಪುಸ್ತಕದ ಪರಿಚಯ, ಓದುವ ಹವ್ಯಾಸ, ಜಾಗೃತಿ ಮೂಡಿಸುವಿಕೆಯಿಂದ ಅಸಂಖ್ಯ ವಿದ್ಯಾರ್ಥಿಗಳನ್ನು ಪುಸ್ತಕದತ್ತ ಸೆಳೆಯುವಂತೆ ಮಾಡಲು ಸಾಧ್ಯವಿದೆ. ಪುಸ್ತಕದ ಮೂಲಕ ವಿದ್ಯಾರ್ಥಿಗಳ ಮನಸ್ಸು ಕಟ್ಟುವ ಕೆಲಸ ಆಗಬೇಕು. ದೇಶದಲ್ಲಿ 52 ಕೋಟಿ 11 ರಿಂದ 25ರ ವಯೋಮಾನದ ಯುವ ಸಮೂಹವಿದ್ದು, ಓದುವಿಕೆ ಜೊತೆಗೆ ಸಮಾಜಮುಖಿ ಚಿಂತನೆ, ಧಾರ್ಮಿಕ ಪ್ರಜ್ಞೆಸ ದೇಶದ ಬಗ್ಗೆ ಗೌರವ ಸದಾ ಇರಬೇಕು ಎಂದು ಅವರು ಹೇಳಿದರು.
ಪುಸ್ತಕ ನೆನಪು ಚಿರಕಾಲ:
ಆಹಾರ, ಸಿನಿಮಾ ನೆನಪು ಸ್ವಲ್ಪ ದಿನ ಇರಬಹುದು, ಆದರೆ ಪುಸ್ತಕ ಓದಿನ ನೆನಪು ಸದಾ ಕಾಲ ಇರುತ್ತದೆ. ಪ್ರಸ್ತುತ ಓದುವಿಕೆ ಇಳಿಮುಖ ಆಗುತ್ತಿರುವುದರಿಂದ ಪುಸ್ತಕದ ಆಯುಷ್ಯ ಕೂಡ ಕಡಿಮೆ ಆಗುತ್ತಿದೆ. ಇಂದಿನ ದಿನಗಳಲ್ಲಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದನ್ನು ತಹಬದಿಗೆ ತರುವ ಕೆಲಸವನ್ನು ಪುಸ್ತಕ, ಓದುವಿಕೆ ಮಾಡುತ್ತದೆ. ನಮ್ಮನ್ನು ಮನುಷ್ಯನನ್ನಾಗಿ ಮಾಡುವ ಪುಸ್ತಕಗಳನ್ನು ಓದಿದರೆ ಮಾತ್ರ ಅದರ ಆಯುಷ್ಯ ಕೂಡ ವೃದ್ಧಿಯಾಗಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
