32 ಬೋಧಕೇತರ ಸಿಬ್ಬಂದಿ ಬದುಕು ಈಗ ಅತಂತ್ರ..!

| Published : Feb 13 2024, 12:45 AM IST

ಸಾರಾಂಶ

ಮಂಡ್ಯ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಅವಾಂತರ, ಮೈಸೂರು ವಿವಿಗೆ ಸೇರಿದ್ದ ಕೇಂದ್ರ ಮಂಡ್ಯ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ, ಮಂಡ್ಯ ವಿವಿಯೊಳಗೆ ಸಿಬ್ಬಂದಿ ಮುಂದುವರೆಸಲು ನಕಾರ, ಕಳೆದ ಐದಾರು ತಿಂಗಳಿಂದ ಸಂಬಳವಿಲ್ಲದೆ ಬೋಧಕೇತರ ಸಿಬ್ಬಂದಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಐದಾರು ತಿಂಗಳು ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಗೆ ವೇತನ ಪಾವತಿಸದೆ ಮಂಡ್ಯ ವಿವಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರು ವಿಶ್ವವಿದ್ಯಾಲಯದಿಂದ ಮಂಡ್ಯ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಗೊಂಡ ಬಳಿಕ ತಾಲೂಕಿನ ತೂಬಿನಕೆರೆ ಸ್ನಾತಕೋತ್ತರ ಕೇಂದ್ರದ ೩೨ ಬೋಧಕೇತರ ಸಿಬ್ಬಂದಿ ಅತಂತ್ರರಾಗಿದ್ದಾರೆ. ಉದ್ಯೋಗವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ನ್ಯಾಯಕ್ಕಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಸುಮಾರು ೪ ವರ್ಷದಿಂದ ೧೬ ವರ್ಷದವರೆಗೆ ಮೈಸೂರು ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ೩೨ ಮಂದಿ ಬೋಧಕೇತರ ಸಿಬ್ಬಂದಿ ಸಂಚಿತ ವೇತನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಕಚೇರಿ, ಗ್ರಂಥಾಲಯ, ವಸತಿ ನಿಲಯ, ಪ್ರಯೋಗಾಲಯಗಳಲ್ಲಿ ಈ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದರು.

ರಾಜ್ಯ ಸರ್ಕಾರದಿಂದ ಮಂಡ್ಯ ವಿಶ್ವವಿದ್ಯಾಲಯ ಘೋಷಣೆಯಾದ ಬಳಿಕ ೨೦೨೩-೨೪ನೇ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಕೇಂದ್ರವು ಮೈಸೂರು ವಿಶ್ವವಿದ್ಯಾಲಯದಿಂದ ಮಂಡ್ಯ ವಿವಿ ಸುಪರ್ದಿಗೆ ಬಂದಿತು. ಮೈಸೂರು ವಿಶ್ವ ವಿದ್ಯಾಲಯವು ೩೨ ಬೋಧಕೇತರ ಸಿಬ್ಬಂದಿ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಇವರನ್ನು ಮುಂದುವರೆಸುವಂತೆ ಕೋರಿರುತ್ತಾರೆ.

ಆದರೆ, ಮಂಡ್ಯ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸೆಪ್ಟೆಂಬರ್-೨೦೨೩ರ ಮಾಹೆಯಿಂದ ಕೇಂದ್ರವನ್ನು ಹಸ್ತಾಂತರಿಸಿಕೊಳ್ಳದೆ, ೨೯ ಜನವರಿ ೨೦೨೪ರಂದು ಕೇಂದ್ರಕ್ಕೆ ಬೋಧಕೇತರ ಸಿಬ್ಬಂದಿಯ ಅವಶ್ಯಕತೆ ಇಲ್ಲವೆಂದು ಏಕಾಏಕಿ ಕೇಂದ್ರದಿಂದ ಅವರನ್ನು ಹೊರಹಾಕಿ ಕಚೇರಿಗೆ ಬೀಗ ಹಾಕಿದ್ದಾರೆ. ವಿಶ್ವ ವಿದ್ಯಾಲಯದ ಕೆಲಸಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಸೆಪ್ಟೆಂಬರ್-೨೦೨೩ರಿಂದ ಇಲ್ಲಿವರೆಗೆ ವೇತನವಿಲ್ಲದೆ ಕೆಲಸವನ್ನು ನಿರ್ವಹಿಸುತ್ತಾ ಬಂದಿರುವುದಾಗಿ ಬೋಧಕೇತರ ಸಿಬ್ಬಂದಿ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.

ಕಳೆದ ಐದಾರು ತಿಂಗಳಿಂದ ಸಂಬಳವಿಲ್ಲದೆ ಬೋಧಕೇತರ ಸಿಬ್ಬಂದಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಐದಾರು ತಿಂಗಳು ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಗೆ ವೇತನ ಪಾವತಿಸದೆ ಮಂಡ್ಯ ವಿವಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮಂಡ್ಯ ವಿವಿಯವರನ್ನ ಕೇಳಿದರೆ ಮೈಸೂರು ವಿವಿ ಮೇಲೆ. ಮೈಸೂರು ವಿವಿಯವರನ್ನು ಕೇಳಿದರೆ ಮಂಡ್ಯ ವಿವಿಯವರ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಹಲವು ಬಾರಿ ಕುಲಪತಿಗಳಿಗೆ ಮನವಿ ಕೊಟ್ಟರೂ ಬಗೆಹರಿಯದ ಸಮಸ್ಯೆ ಬಗೆಹರಿದಿಲ್ಲವೆಂದು ಬೋಧಕೇತರ ಸಿಬ್ಬಂದಿ ಗೋಳಿಡುತ್ತಿದ್ದಾರೆ.

ಈ ವಿಷಯವಾಗಿ ಮಂಡ್ಯ ವಿಶ್ವವಿದ್ಯಾಲಯದವರನ್ನು ಪ್ರಶ್ನಿಸಿದರೆ, ಬೋಧಕೇತರ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಲಾಗಿತ್ತು. ಅಷ್ಟೊಂದು ಜನರ ಅವಶ್ಯಕತೆ ನಮಗಿಲ್ಲದಿರುವುದರಿಂದ ಅವರಿಗೆ ಬದಲಾಗಿ ಹೊರಗುತ್ತಿಗೆ ಆಧಾರದ ಮೇಲೆ ೧೦ ಮಂದಿಯನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೋಧಕೇತರ ಸಿಬ್ಬಂದಿ ಹೇಳುವ ಪ್ರಕಾರ ಸರ್ಕಾರದ ನಡವಳಿಯಲ್ಲಿ ಮೂಲ ವಿಶ್ವವಿದ್ಯಾಲಯದಲ್ಲಿರುವ ಸಿಬ್ಬಂದಿಯನ್ನೇ ಮುಂದುವರೆಸಬೇಕೆಂದು ಸರ್ಕಾರದ ನಡಾವಳಿಗಳಲ್ಲಿ ದಾಖಲಾಗಿದೆ. ಆದರೂ ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿಯಮಬಾಹಿರವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರವನ್ನು ಮಂಡ್ಯ ವಿಶ್ವವಿದ್ಯಾಲಯ ಹಸ್ತಾಂತರ ಮಾಡಿಕೊಂಡಿದೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೩೨ ಬೋಧಕೇತರ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಲಾಗಿದೆ. ಅವರಿಗೆಲ್ಲಾ ೧೨ ರಿಂದ ೧೫ ಸಾವಿರ ರು.ವರೆಗೆ ವೇತನ ಪಾವತಿಸಲಾಗುತ್ತಿದೆ. ಅಷ್ಟೊಂದು ಹಣ ಭರಿಸಲು ಮಂಡ್ಯ ವಿವಿಯಿಂದ ಸಾಧ್ಯವಾಗುವುದಿಲ್ಲ. ಸರ್ಕಾರದಿಂದ ಅನುದಾನವೂ ಅಷ್ಟೊಂದು ಬರುವುದಿಲ್ಲ. ನಮಗೆ ಅಷ್ಟೊಂದು ಸಿಬ್ಬಂದಿಯ ಅಗತ್ಯತೆಯೂ ಇಲ್ಲದಿರುವುದರಿಂದ ೧೦ ಮಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಕೇಂದ್ರಕ್ಕೆ ನಿಯೋಜಿಸಲಾಗುತ್ತಿದೆ.

- ಡಾ.ಚಂದ್ರಯ್ಯ, ರಿಜಿಸ್ಟ್ರಾರ್, ಮಂಡ್ಯ ವಿಶ್ವವಿದ್ಯಾಲಯ

ಮೈಸೂರು ವಿಶ್ವವಿದ್ಯಾಲಯ ೩೨ ಬೋಧಕೇತರ ಸಿಬ್ಬಂದಿಯನ್ನು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮುಂದುವರೆಸುವಂತೆ ಸರ್ಕಾರಕ್ಕೆ ಪಟ್ಟಿ ಕಳುಹಿಸಿದೆ. ಸರ್ಕಾರದ ನಡವಳಿಯನ್ವಯ ಮೈಸೂರು ವಿಶ್ವವಿದ್ಯಾಲಯ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವಂತಿಲ್ಲ. ಆದರೂ ಗುತ್ತಿಗೆ ನೌಕರರನ್ನು ನೇಮಕಕ್ಕೆ ಮುಂದಾಗಿ ನಮಗೆ ಅನ್ಯಾಯ ಮಾಡುತ್ತಿದೆ. ಈ ವಿಚಾರವಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮೈಸೂರು ವಿವಿ ಬೋಧಕೇತರ ಸಿಬ್ಬಂದಿಯನ್ನೇ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮುಂದುವರೆಸುವಂತೆ ಸೂಚಿಸಬೇಕು. ಮಂಡ್ಯ ವಿವಿ ವ್ಯಾಪ್ತಿಗೆ ಬರುವ ೪೭ ಕಾಲೇಜುಗಳಿಂದ ಸಂಗ್ರಹವಾಗುವ ಅಫಿಲಿಯೇಟೆಡ್ ಶುಲ್ಕದಿಂದ ವೇತನ ಭರಿಸಬಹುದಾಗಿದ್ದರೂ ಮಂಡ್ಯ ವಿವಿ ಆಸಕ್ತಿ ತೋರುತ್ತಿಲ್ಲ.

- ಮಹೇಶ್, ಬೋಧಕೇತರ ಸಿಬ್ಬಂದಿ