ಮಿಂಚು ಹುಳುವಿನ ಬೆಳಕಿನಂತೆ ದಲಿತರ ಬದುಕು: ಡಿ.ಶಿವಶಂಕರ್‌

| Published : Feb 14 2025, 12:33 AM IST

ಸಾರಾಂಶ

ಇತ್ತೀಚೆಗೆ ಅಗಲಿದ ದಲಿತ ಹೋರಾಟಗಾರರ ಕುಟುಂಬದ ಸದಸ್ಯರನ್ನು ಸಂಬುದ್ಧ ಜನಸೇವಾ ಟ್ರಸ್ಟ್ ಮತ್ತು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಾಗಡಿ

ದಲಿತರು ಇಂದೂ ಕೂಡ ಮಿಂಚು ಹುಳುವಿನ ಬೆಳಕಿನಂತೆ ಸಮಾಜದಲ್ಲಿ ಬದುಕುತ್ತಿದ್ದು, ಅವರಿಗೆ ಸೂರ್ಯನ ಬೆಳಕು ಸಿಗುವ ಕೆಲಸ ಆಗಬೇಕಿದೆ ಎಂದು ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್‌ ಹೇಳಿದರು.

ಪಟ್ಟಣದ ಎನ್ ಇಎಸ್ ಮುಖ್ಯರಸ್ತೆಯ ಎಲ್.ಎನ್.ಆರ್. ಪಾರ್ಟಿ ಹಾಲ್ ನಲ್ಲಿ ಸಂಬುದ್ಧ ಜನಸೇವಾ ಟ್ರಸ್ಟ್ ಮತ್ತು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ ದಲಿತ ಸಂಘರ್ಷ ಸಮಿತಿ ನಾಗವಾರ ರಾಜ್ಯ ಸಂಚಾಲಕರಾದ ದಿ.ಲಕ್ಷ್ಮೀನಾರಾಯಣ, ಮಾಗಡಿ ತಾಲೂಕು ದಲಿತ ಚಳುವಳಿಯ ಹೋರಾಟಗಾರ ದಿ.ಎಸ್.ಎಚ್. ಕುಮಾರಯ್ಯರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ನಮ್ಮ ಸಮಾಜದ ಬಂಧುಗಳಿಗೆ ನ್ಯಾಯ ಕೊಡಿಸಲು ಸಾಧ್ಯ. ನಾವು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬಂದಿದ್ದೇವೆ ಅಂದುಕೊಂಡಿದ್ದೇವೆ, ಈಗಲೂ ಕೂಡ ನಮ್ಮನ್ನು ಕೀಳಾಗಿ ಕಾಣಲಾಗುತ್ತಿದ್ದು, ನಾವು ಸೂರ್ಯನ ಬೆಳಕಿಗೆ ಬರುವ ಕೆಲಸ ಆಗಬೇಕಿದೆ. ಹೋರಾಟದ ಮೂಲಕವೇ ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ, ಇಬ್ಬರೂ ಹೋರಾಟಗಾರರು ನಮ್ಮನ್ನು ಅಗಲಿದ್ದು, ಅವರು ಹೋರಾಟದ ಮೂಲಕ ಸಾಕಷ್ಟು ಜನಗಳಿಗೆ ಅನುಕೂಲತೆ ಮಾಡಿದ್ದಾರೆ. ಅವರ ಕುಟುಂಬಕ್ಕೆ ಧೈರ್ಯ ಕೊಡುವ ಕೆಲಸ ನಾವು ಮಾಡಬೇಕು, ದಲಿತ ಸಂಘಟನೆಗಳು ಒಗ್ಗಟ್ಟಾಗಿ ನಮ್ಮ ಸಮಾಜದ ಜನಗಳನ್ನು ಮುಖ್ಯ ವಾಹಿನಿಗೆ ತಂದಾಗ ಮಾತ್ರ ಹೋರಾಟಕ್ಕೆ ಜಯ ಸಿಗುತ್ತದೆ. ನಾಯಕನಾಗುವುದು ಮುಖ್ಯವಲ್ಲ, ನಾಯಕರನ್ನು ತಯಾರಿ ಮಾಡುವುದು ಮುಖ್ಯ ಎಂದು ತಿಳಿಸಿದರು.

ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ. ಜಯರಾಂ ಮಾತನಾಡಿ, ನಮ್ಮನ್ನು ಅಗಲಿದ್ದ ನಾಯಕರು ಹೋರಾಟದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದು, ನಾವು ಕೂಡ ಹೋರಾಟಗಾರರಿಗೆ ಬೆಂಬಲ ಕೊಡುವ ಕೆಲಸ ಮಾಡೋಣ ಎಂದು ತಿಳಿಸಿದರು.

ಇತ್ತೀಚೆಗೆ ಅಗಲಿದ ದಲಿತ ಹೋರಾಟಗಾರರ ಕುಟುಂಬದ ಸದಸ್ಯರನ್ನು ಸಂಬುದ್ಧ ಜನಸೇವಾ ಟ್ರಸ್ಟ್ ಮತ್ತು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಾಗವಾರ ಡಾ.ಜಾನಕಮ್ಮ ಲಕ್ಷ್ಮೀನಾರಾಯಣ, ಪದ್ಮಾವತಿ ಎಸ್. ಎಚ್. ಕುಮಾರಯ್ಯ, ಹಿರಿಯ ಮುಖಂಡರಾದ ಎಸ್.ಪಿ. ನರಸಿಂಹಯ್ಯ,ನರಸಿಂಹಮೂರ್ತಿಯವರು ತಾಪಂ ಮಾಜಿ ಅಧ್ಯಕ್ಷ ಎಂ. ನಾಗರಾಜು, ಜಿ. ಕೃಷ್ಣ, ಮಾಗಡಿ ಬ್ಲಾಕ್ ಎಸ್ಸಿ/ಎಸ್ಟಿ ಘಟಕ ಚಿಕ್ಕರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬೆಳ್ಳಿಯಪ್ಪ, ಬ್ಲಾಕ್ ಅಧ್ಯಕ್ಷರು, ಕುದೂರು ಬ್ಲಾಕ್ ಎಸ್ಸಿ/ಎಸ್ಟಿ ರವಿಕುಮಾರ್‌, ಎಸ್ಸಿ/ಎಸ್ಟಿ ಕುಂದು ಕೊರತೆ ಸಮಿತಿ ಸದಸ್ಯ ನರಸಿಂಹಮೂರ್ತಿ, ತೋಟದ ಮನೆ ಗಿರೀಶ್‌, ದೊಡ್ಡಿ ಲಕ್ಷಣ್, ಹಕ್ಕಿನಾಳ್ ವೆಂಕಟೇಶ್, ಕಲ್ಲುದೇವನಹಳ್ಳಿ ಮಹದೇವ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.