ಮುಖ್ಯಮಂತ್ರಿ ಸ್ವಕ್ಷೇತ್ರ ವರುಣಾದ ಗುಡಮಾದನಹಳ್ಳಿ ಗ್ರಾಮದ ಬಳಿ ಆಸ್ಪತ್ರೆ ನಿರ್ಮಾಣ ನಿಟ್ಟಿನಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗಾಗಿ ತೆರಳಿದ್ದ ಅಧಿಕಾರಿ ಭವ್ಯ ವಿರುದ್ಧ ಸ್ಥಳೀಯ ಪುಡಾರಿಯೊಬ್ಬ ಜಗಳ ತೆಗೆದು ಜೀವ ಬೆದರಿಕೆ ಹಾಕಿದ್ದಾನೆ.

ಧಾರವಾಡ:

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಹಾಗೂ ಪೌರಕಾರ್ಮಿಕರನ್ನು ನಿಂದಿಸಿದ ಕಾಂಗ್ರೆಸ್‌ ಮುಖಂಡ ರಾಜೀವಗೌಡ ಹಾಗೂ ಮುಖ್ಯಮಂತ್ರಿ ಸ್ವಕ್ಷೇತ್ರ ವರುಣಾದಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಪುಡಾರಿ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಿ, ಇಬ್ಬರನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜೀವಗೌಡ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ರಾಜೀವ್‌ಗೌಡ ವಿರುದ್ಧ 2 ಎಫ್ಐಆರ್‌ ದಾಖಲಾಗಿವೆ. ಕೆಲ ಸಚಿವರು ರಾಜೀವ್‌ಗೌಡ ಸೌಮ್ಯ ಸ್ವಭಾವದವರು, ಈ ರೀತಿ ಮಾತನಾಡಿದವರಲ್ಲ ಎಂದು ಸಮರ್ಥರ್ನೆ ಮಾಡಿಕೊಳ್ಳುತ್ತಿದ್ದಾರೆ. ಇದು ಖಂಡನೀಯ ಎಂದರು.

ಮುಖ್ಯಮಂತ್ರಿ ಸ್ವಕ್ಷೇತ್ರ ವರುಣಾದ ಗುಡಮಾದನಹಳ್ಳಿ ಗ್ರಾಮದ ಬಳಿ ಆಸ್ಪತ್ರೆ ನಿರ್ಮಾಣ ನಿಟ್ಟಿನಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗಾಗಿ ತೆರಳಿದ್ದ ಅಧಿಕಾರಿ ಭವ್ಯ ವಿರುದ್ಧ ಸ್ಥಳೀಯ ಪುಡಾರಿಯೊಬ್ಬ ಜಗಳ ತೆಗೆದು ಜೀವ ಬೆದರಿಕೆ ಹಾಕಿದ್ದಾನೆ. ಈ ಘಟನೆಗಳು ಸರ್ಕಾರಿ ನೌಕರರಲ್ಲಿ ಅಭದ್ರತೆಯ ಭಾವ ಉಂಟು ಮಾಡಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ರಾಜಕೀಯ ಪುಡಾರಿಗಳನ್ನು ಪೋಷಿಸುತ್ತಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಲಾಡ್‌, ಸರ್ಕಾರ ಕ್ರಮಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಲಕ್ಷ್ಮಣ ದೊಡ್ಡಮನಿ, ಶ್ರೀನಿವಾಸ ಕೊಠಂಕ, ನಾಗರಾಜ ಕಟ್ಟಿಮನಿ, ವಿಕ್ರಂ ಸನಮನಿ, ಬಸವರಾಜ ಮಾದರ, ರವಿ ಸಿದ್ದಾಟಗಿಮಠ, ಶರೀಫ ಅಮ್ಮಿನಭಾವಿ, ಬಸವರಾಜ ಆನೇಗುಂದಿ, ವಿರೂಪಾಕ್ಷಯ್ಯ ಹುಬ್ಬಳ್ಳಿಮಠ, ಅಲ್ತಾಫ ಮಾಲಿ, ನಾರಾಯಣ ಮಾದರ, ಶಬ್ಬೀರ ಅತ್ತಾರ, ಹನುಮಂತ ಮೊರಬ, ರಮೇಶ ಅರಳಿಕಟ್ಟಿ, ಅಲ್ತಾಫ ಜಾಲೇಗಾರ, ಚಂದ್ರು ಅಂಗಡಿ, ಮಂಜುನಾಥ ಸುತಗಟ್ಟಿ, ಮುತ್ತು ಕುಲಕರ್ಣಿ ಸೇರಿದಂತೆ ಹಲವರಿದ್ದರು.