ಸಾರಾಂಶ
ಜೀವಕ್ಕೆ ಅಪಾಯಕಾರಿಯಾದ ಅನೇಕ ಕಡಜಗಳ ಕುಟುಕಿಗೆ ಗುರಿಯಾಗಿ ಕಿಡ್ನಿ ವೈಫಲ್ಯದ ಅಪಾಯದಲ್ಲಿದ್ದ 10 ವರ್ಷದ ಬಾಲಕನಿಗೆ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಜೀವಕ್ಕೆ ಅಪಾಯಕಾರಿಯಾದ ಅನೇಕ ಕಡಜಗಳ ಕುಟುಕಿಗೆ ಗುರಿಯಾಗಿ ಕಿಡ್ನಿ ವೈಫಲ್ಯದ ಅಪಾಯದಲ್ಲಿದ್ದ 10 ವರ್ಷದ ಬಾಲಕನಿಗೆ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ವಿಶ್ವಾಸ್ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕ ಆಸ್ಪತ್ರೆಗೆ ಬಂದಾಗ 5 ರಿಂದ 8 ಹಳದಿ ಕಡಜದ ಕುಟುಕಿನಿಂದ ತೀವು ಸೋಂಕಿಗೆ ಗುರಿಯಾಗಿದ್ದು ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳು ಗೋಚರಿಸಿದವು. ತಕ್ಷಣ ಚಿಕಿತ್ಸೆ ಆರಂಭಿಸಿದ ಆಸ್ಪತ್ರೆಯ ಕನ್ಸಲೆಂಟ್ ಪಿಡಿಯಾಟ್ರಿಕ್ ಇನ್‌ಟೆನ್ಸಿವಿಸ್ಟ್ ಡಾ. ಸ್ವಾತಿ ರಾವ್, ನೆಪ್ರೊಲಾಜಿಸ್ಟ್ ಗಳಾದ ಡಾ. ಮಯೂರ್ ಪ್ರಭು ಮತ್ತು ಡಾ. ದುಷ್ಯಂತ್, ಕಾರ್ಡಿಯಾಲಾಜಿಸ್ಟ್ ಡಾ. ರಾಜೇಶ್ ಭಟ್ ಮತ್ತವರ ತಂಡ ಬಾಲಕನ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಕುರಿತು ಮಾತನಾಡಿದ ಡಾ. ಸ್ವಾತಿ ರಾವ್, ಮಕ್ಕಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಬಹು ಕಡಜ ( ಪಿಲಿಕುಡೋಲು) ಕುಟುಕಿಗೆ ಗುರಿಯಾದಾಗ ಹೇಗೆ ವಿವಿಧ (ಮಲ್ಟಿ ಸ್ಪೆಷಾಲಿಟಿ) ತಜ್ಞರ ಚಿಕಿತ್ಸೆಯು ರೋಗಿಯ ಜೀವ ಉಳಿಸುವಲ್ಲಿ ಮುಖ್ಯವಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆತಂದಾಗ ದೇಹದಲ್ಲಿ ವಿಷ ಹರಡಿರುವುದು ಪತ್ತೆಯಾಗಿತ್ತು. ಜೊತೆಗೆ ಏರಿದ ಎದೆ ಬಡಿತ, ಕೈ ಕಾಲು ತಣ್ಣಗಾಗುವುದು (ಕೋಲ್ಡ್ ಎಕ್ಸ್‌ಟ್ರಿಮಿಟಿಸ್), ಉಸಿರಾಟದಲ್ಲಿ ಸಮಸ್ಯೆ ಊತ ( ಜನರಲೈಸ್ಟ್ ಎಡಿಮಾ) ಲಕ್ಷಣಗಳು ಕಂಡು ಬಂದಿದ್ದವು. ಜೊತೆಗೆ ಮೂತ್ರ ಕೂಡ ಕೆಂಪು ಬಣ್ಣಕ್ಕೆ ತಿರುಗಿದ್ದು ಕಿಡ್ನಿ ಕಾರ್ಯದ ಮೇಲೆ ಪರಿಣಾಮ ಬೀರಿರುವುದು ಖಚಿತವಾಗಿತ್ತು. ಹೀಗಾಗಿ ತಕ್ಷಣ ಬಾಲಕನಿಗೆ ಡಿಟಾಕ್ಸಿಫಿಕೇಶನ್ (ವಿಷ ಹೊರತೆಗೆಯುವ ಕಾರ್ಯ) ಮತ್ತು ಅಂಗಾಂಗ ರಕ್ಷಣೆ ಥೆರಪಿ ಆರಂಭಿಸಲಾಯಿತು. ಈ ಮೂಲಕ ಬಹು ಅಂಗಾಗ ವೈಫಲ್ಯವಾಗದಂತೆ ತಡೆಯಲಾಯಿತು.++++++