ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲ ಹಿಂದೂಗಳು ಒಗ್ಗೂಡಿ ಹಿಂದೂ ಸಮಾಜವನ್ನು ಕಟ್ಟಬೇಕು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.
ಗುಬ್ಬಿ : ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲ ಹಿಂದೂಗಳು ಒಗ್ಗೂಡಿ ಹಿಂದೂ ಸಮಾಜವನ್ನು ಕಟ್ಟಬೇಕು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.
ಹಿಂದೂ ಸಮಾಜೋತ್ಸವ
ಪಟ್ಟಣದ ಚನ್ನಬಸವೇಶ್ವರಸ್ವಾಮಿ ತೇರು ಬೀದಿಯಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೊಂದಿಗೆ ಬೆರೆಯುವಂತಹ ಎಲ್ಲವನ್ನು ಒಪ್ಪಿಕೊಳ್ಳುವಂತಹ ಧರ್ಮವೇ ಹಿಂದೂ ಧರ್ಮ. ಪುರಾತನ ಕಾಲದ ಇತಿಹಾಸವನ್ನು ಹೊಂದಿರುವ ಮಾನವೀಯತೆಯ ಧರ್ಮ ಯಾವುದಾದರೂ ಇದ್ದರೆ ಅದು ಹಿಂದೂ ಧರ್ಮ ಮಾತ್ರವೇ ಆಗಿದೆ. ಸನಾತನ ಧರ್ಮ ಪರಂಪರೆ ಹಾಗೂ ಭಾರತೀಯತೆಯ ಉಳಿಸಿ ಬೆಳೆಸುವ ಧ್ಯೇಯದಿಂದ ಪ್ರಾರಂಭಗೊಂಡ ಆರ್ ಎಸ್ ಎಸ್ ಗೆ ಈಗ 100ರ ಹರೆಯ. ಈ ಹಿನ್ನೆಲೆಯಲ್ಲಿ ಹಿಂದೂಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ಲಕ್ಷ ಸ್ಥಳಗಳಲ್ಲಿ ಇಂದು ಸಮಾವೇಶ ನಡೆಯುತ್ತಿದೆ ಎಂದರು.
ಭಾರತೀಯ ಸಂಸ್ಕೃತಿ ತ್ಯಾಗದ ಯೋಗದ ಮಹಾಸಂಸ್ಕೃತಿ
ಬೆಟ್ಟದಲ್ಲಿ ಗವಿಮಠದ ಮಠ ಅಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ತ್ಯಾಗದ ಯೋಗದ ಮಹಾಸಂಸ್ಕೃತಿಯಿಂದ ಬೆಳೆದು ಬಂದಿದೆ. ಈ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು. ಹಿಂದೂ ಧರ್ಮ ಬಲಿಷ್ಠವಾಗಬೇಕಾದರೆ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಸಬಲರಾಗಬೇಕು. ಆಗ ಮಾತ್ರ ಹಿಂದೂ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಮಾತನಾಡಿ ಹಿಂದೂ ಧರ್ಮಕ್ಕೆ ಯಾರು ಸಂಸ್ಥಾಪಕರು ಇಲ್ಲ, ಹಲವು ಧರ್ಮಗಳಿಗೆ ಸಂಸ್ಥಾಪಕರು ಇದ್ದಾರೆ. ಆದರೆ ಹಿಂದೂ ಧರ್ಮಕ್ಕೆ ಮಾತ್ರ ಯಾರು ಇಲ್ಲ ಹಿಂದೂ ಧರ್ಮವನ್ನು ಪ್ರತಿಯೊಬ್ಬ ಸಂತರು ಕೂಡ ಒಪ್ಪಿಕೊಂಡಿದ್ದಾರೆ. ಎಲ್ಲ ಜಾತಿ ಧರ್ಮಗಳಿಗೂ ಒಂದೇ ರೀತಿಯಾಗಿ ನಡೆದುಕೊಳುತ್ತದೆ. ನಾವೆಲ್ಲರೂ ಹಿಂದೂಗಳೆಂಬ ಭಾವನೆಯೊಂದಿಗೆ ಇದ್ದಾರೆ ದೇಶ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಕೈಗಾರಿಕೋದ್ಯಮಿ ರುದ್ರೇಶ್ ಮಾತನಾಡಿ, ನಾವೆಲ್ಲರೂ ಸೇರಿಕೊಂಡು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಸಮಾಜದಲ್ಲಿ ಹೆಚ್ಚೆಚ್ಚು ಧರ್ಮದ ವಿಚಾರಗಳನ್ನು ಉಳಿಸು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಹಿಂದೂ ಸಮಾಜೋತ್ಸವ ಸಮಾವೇಶದ ಅಂಗವಾಗಿ ಶ್ರೀ ನಾಗಲಿಂಗೇಶ್ವರ ದೇವಸ್ಥಾನದಿಂದ ಚನ್ನಬಸವೇಶ್ವರ ದೇವಸ್ಥಾನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಹಾಗೂ ನಂದಿ ಧ್ವಜದೊಂದಿಗೆ ಕುಣಿತ, ವೀರಗಾಸೆ ಕುಣಿತ ಹಾಗೂ ದೇವರುಗಳ ಉತ್ಸವ ದೊಂದಿಗೆ ಶೋಭೆ ಯಾತ್ರೆಯನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದ ಯೋಗ ತರಬೇತಿದಾರರಾದ ಸೌಭಾಗ್ಯ, ನರಸಿಂಹಮೂರ್ತಿ, ರವೀಶ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಸಲ ಚನ್ನಬಸವೇಶ್ವರಶಿವಚಾರ್ಯ, ಸ್ವಾಮೀಜಿ, ಆದಿಜಾಂಬವ ಮಠದ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಬಿ.ಕೋಡಿಹಳ್ಳಿಯ ಬಸವ ಬೃಂಗೇಶ್ವರ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರದೇಶಿಕೇಂದ್ರ ಸ್ವಾಮೀಜಿ, ತೊರೆಮಠದ ಆಟವಿ ಚನ್ನಬಸವ ಸ್ವಾಮಿಗಳು, ಮುಖಂಡರಾದ ಎಸ್.ಡಿ ದಿಲೀಪ್ ಕುಮಾರ್, ಬಿಎಸ್ ನಾಗರಾಜು, ಚಂದ್ರಶೇಖರ ಬಾಬು, ಕಳ್ಳಿಪಾಳ್ಯ ಲೋಕೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮಯ್ಯ, ಉದ್ದೇಹೊಸಕೆರೆ ಶಿವಕುಮಾರ್, ಎಚ್.ಟಿ ಭೈರಪ್ಪ, ಕವಿತ, ಆರ್ ಎಸ್ ಎಸ್ ಸಂಘಟನೆಯ ದಯಾನಂದ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಹದಿನೆಂಟು ಕೋಮಿನ ಮುಖಂಡರು, ಸಾರ್ವಜನಿಕರು ಭಾಗಿಯಾಗಿದ್ದರು.
