ಸಾರಾಂಶ
ಭಟ್ಕಳ: ಇಲ್ಲಿನ ಕಾನೂನು ಸೇವಾ ಸಮಿತಿ, ಭಟ್ಕಳ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ದೇವಡಿಗ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೀವನದ ಪ್ರತಿ ಕ್ಷಣದಲ್ಲಿಯೂ ಮಹಿಳೆಯ ಪಾತ್ರ ಬಹುದೊಡ್ಡದು. ಮಹಿಳೆಯಿಲ್ಲದ ಜೀವನ ಕಲ್ಪನೆಗೂ ಅಸಾಧ್ಯವಾದುದು ಎಂದರಲ್ಲದೇ ಪ್ರತಿದಿನವನ್ನು ಮಹಿಳಾ ದಿನವನ್ನಾಗಿ ಆಚರಿಸೋಣ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಮಹಿಳೆಯರಿಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದು, ಸಮಾನ ಅವಕಾಶ ದೊರೆಯುತ್ತಿದೆ. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಎಲ್ಲ ರಂಗದಲ್ಲಿಯೂ ಮಹಿಳೆಯರಿಗೆ ಅವಕಾಶ ಇದೆ. ಕುಟುಂಬದಲ್ಲಿಯೂ ಮಹಿಳೆ ಸಮಾನವಾದ ಹಕ್ಕನ್ನು ಹೊಂದಿರುತ್ತಾಳೆ ಎಂದರಲ್ಲದೇ ಸಂವಿಧಾನ ಎಲ್ಲರಿಗೂ ಸಮಾನವಾದ ಹಕ್ಕನ್ನು ನೀಡಿದೆ ಎಂದರು.
ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ಧನವತಿ ಮಾತನಾಡಿ, ಮಹಿಳೆಯೆಂದರೆ ಅಡುಗೆ ಮನೆಗಷ್ಟೇ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ ಸ್ವಾತಂತ್ರ್ಯಾನಂತರ, ನಮ್ಮ ಸಂವಿಧಾನ ರಚನೆಯಾದ ನಂತರ ಮಹಿಳೆಯರು ಗೌರವದ ಸ್ಥಾನ ಹೊಂದುವುದರೊಂದಿಗೆ ಎಲ್ಲ ರಂಗದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮನೆಯಿಂದಲೇ ಮಹಿಳೆಯನ್ನು ಗೌರವಿಸುವುದನ್ನು ಕಲಿಯಬೇಕು. ಆಗ ಸ್ವಸ್ಥ ಸಮಾಜವನ್ನು ಹೊಂದಲು ಸಾಧ್ಯ ಎಂದರು.ಮಹಿಳಾ ದಿನಾಚರಣೆ ಕುರಿತು ನಾಗರತ್ನಾ ನಾಯ್ಕ ಉಪನ್ಯಾಸ ನೀಡಿದರು. ಹಿರಿಯ ನ್ಯಾಯವಾದಿ ಆರ್.ಆರ್. ಶ್ರೇಷ್ಟಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ ನಾಯ್ಕ, ಸಹಾಯಕ ಸರ್ಕಾರಿ ಅಭಿಯೋಜಕರಾದ ವಿವೇಕ ಆರ್. ನಾಯ್ಕ, ಸೀತಾರಾಮ ಹರಿಕಾಂತ, ಶಿರಸ್ತೇದಾರ ಮಹಾದೇವಿ ಉಪಸ್ಥಿತರಿದ್ದರು. ನ್ಯಾಯವಾದಿ ಶಂಕರ ಕೆ. ನಾಯ್ಕ ಅಮ್ಮನ ಕುರಿತ ಸ್ವರಚಿತ ಕವನ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶ್ವೇತಾ ಆರ್. ಪ್ರಾರ್ಥಿಸಿದರು. ಸುವರ್ಣಿತಾ ಎಸ್.ಎಂ. ಸ್ವಾಗತಿಸಿದರು. ನಾಗರತ್ನಾ ವಂದಿಸಿದರು.