ಕೊಪ್ಪಳ ತಾಲೂಕಿನ ಚುಕ್ಕನಕಲ್, ಮುದ್ದಾಬಳ್ಳಿ, ಹಳೇ ಗೊಂಡಬಾಳ, ಹೊಸ ಗೊಂಡಬಾಳ, ಹ್ಯಾಟಿ, ಮುಂಡರಗಿ, ಮೆಳ್ಳಿಕೇರಿ, ಹೊಸಳ್ಳಿ, ಬಹದ್ದೂರ್ ಬಂಡಿ ಹಾಗೂ ಹೂವಿನಾಳ ಗ್ರಾಮಗಳಿಗೆ ಬುಧವಾರ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

ಕೊಪ್ಪಳ: ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳ ರೈತರು ನೀರಾವರಿ ಸೌಲಭ್ಯ ಪಡೆದು ಉತ್ತಮ ಬೆಳೆ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಚುಕ್ಕನಕಲ್, ಮುದ್ದಾಬಳ್ಳಿ, ಹಳೇ ಗೊಂಡಬಾಳ, ಹೊಸ ಗೊಂಡಬಾಳ, ಹ್ಯಾಟಿ, ಮುಂಡರಗಿ, ಮೆಳ್ಳಿಕೇರಿ, ಹೊಸಳ್ಳಿ, ಬಹದ್ದೂರ್ ಬಂಡಿ ಹಾಗೂ ಹೂವಿನಾಳ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದರು. ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಕಾಲುವೆಗಳ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲವಾದರೂ ಮೆಳ್ಳಿಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಮುದ್ದಾಬಳ್ಳಿ, ಹ್ಯಾಟಿ, ಮುಂಡರಗಿ, ಬಿ. ಹೊಸಳ್ಳಿ ಹಾಗೂ ಹೂವಿನಾಳ ಗ್ರಾಮದ ರೈತರು ಯೋಜನೆಯ ಏರ್‌ವಾಲ್ವ್‌ಗೆ ಪೈಪ್‌ ಅಳವಡಿಸಿಕೊಂಡು ತಮ್ಮ ಜಮೀನುಗಳಿಗೆ ನೀರು ಹರಿಸಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅಲ್ಲದೆ ಯೋಜನೆಯಡಿ ಹೊಸಳ್ಳಿ ಹಾಗೂ ಕುಣಿಕೇರಿ ಕೆರೆಗಳನ್ನು ತುಂಬಿಸಲಾಗಿದೆ ಎಂದರು.

ಯೋಜನೆಯಡಿ ಕಾಲುವೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಇದಕ್ಕಾಗಿ ₹230 ಕೋಟಿ ಅನುದಾನ ಅಗತ್ಯವಿದ್ದು, ಶೀಘ್ರದಲ್ಲೇ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರ ಅಹವಾಲು ಆಲಿಕೆ: ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಶಾಸಕರು, ಆಯಾ ಗ್ರಾಮಗಳ ಅಭಿವೃದ್ಧಿ ಕುರಿತು ಚರ್ಚಿಸಿದರು. ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.

ನಿವೇಶನ ಸಮಸ್ಯೆ ಬಗೆಹರಿಸುವೆ: ಮುದ್ದಾಬಳ್ಳಿ ಗ್ರಾಮದ ಎಸ್‌ಸಿ ಕಾಲನಿಗೆ ಭೇಟಿ ನೀಡಿದ ಶಾಸಕ ಹಿಟ್ನಾಳ, ನಿವೇಶನ ಹಂಚಿಕೆ ಕುರಿತು ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು.

ಹೈಸ್ಕೂಲ್ ನಿರ್ಮಾಣಕ್ಕೆ 10 ಎಕರೆ ಜಮೀನು ಮೀಸಲಿಡಲಾಗಿದ್ದು, ಅದರಲ್ಲಿ ನಾಲ್ಕು ಎಕರೆ ಜಮೀನನ್ನು ಎಸ್‌ಸಿ ಕಾಲನಿ ನಿವಾಸಿಗಳಿಗೆ ನಿವೇಶನಕ್ಕಾಗಿ ನೀಡಬೇಕು. ಉಳಿದ ಆರು ಎಕರೆ ಜಮೀನಿನಲ್ಲಿ ಹೈಸ್ಕೂಲ್ ನಿರ್ಮಿಸಬೇಕು ಎಂದು ಸಮುದಾಯದ ಮುಖಂಡರು ಶಾಸಕರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಶಾಸಕ ಹಿಟ್ನಾಳ, ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಗುರುವಾರ ಕೊಪ್ಪಳಕ್ಕೆ ಆಗಮಿಸಲಿದ್ದು, ನಿಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತನ್ನಿ. ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಪಂ ಸದಸ್ಯ ಮಾಜಿ ಗೂಳಪ್ಪ ಹಲಿಗೇರಿ, ತೋಟಪ್ಪ ಕಾಮನೂರು, ನಾಗನಗೌಡ ಮುಂಡರಗಿ, ಹನುಮಂತಪ್ಪ ಜಲವರ್ಧನಿ, ಹನುಮೇಶ ಹೊಸಳ್ಳಿ, ಶರಣಪ್ಪ ಸಜ್ಜನ್, ಚಾಂದಪಾಷಾ ಕಿಲ್ಲೆದಾರ್, ಆನಂದ ಕಿನ್ನಾಳ, ಭರಮಪ್ಪ ಹಾಲವರ್ತಿ, ಧರ್ಮರಾಜ ಕಂಪಸಾಗರ, ಮುದಿಯಪ್ಪ ಆದೋನಿ, ಬಸಣ್ಣ ಹ್ಯಾಟಿ, ಪರದಾನಪ್ಪ ಹಂಡಿ, ಗವಿಸಿದ್ದನಗೌಡ, ಗವಿಸಿದ್ದಪ್ಪ ಹುಳ್ಳಿ, ಸಂತೋಷ ಮುದ್ದಾಬಳ್ಳಿ, ಮಲ್ಲು ಪೂಜಾರ್ ಉಪಸ್ಥಿತರಿದ್ದರು.