ಈ ಏತ ನೀರಾವರಿ ವ್ಯಾಪ್ತಿಯ ಬೆಳೆಗಳಿಗೆ ನೀರು ಹಾಯಿಸಬೇಕೆಂದರೆ ಜಾಕ್‌ವೆಲ್ ಮೂಲಕ ಭೂಮಿಗೆ ನೀರನ್ನು ಲಿಫ್ಟ್‌ ಮಾಡಬೇಕು. ಕಳೆದ ವರ್ಷ 14ನೇ ಹಂಚಿಕೆಯ ಹದಲಿ- ಗಂಗಾಪುರ ಮತ್ತು ಹದಲಿ- ಮದುಗುಣಿಕಿ ಈ ಎರಡು ಏತ ನೀರಾವರಿ ಜಾಕ್‌ವೆಲ್‌ ಬಂದ್ ಆಗಿವೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ಕೆಳಭಾಗದ ರೈತರಿಗೆ ಕಾಲುವೆ ನೀರು ಸಿಗದ ಕಾರಣ ಕೆಲವು ವರ್ಷಗಳ ಹಿಂದೆ 10 ಏತ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಜಾಕ್‌ವೆಲ್‌ಗಳ ನಿರ್ವಹಣೆ ಇಲ್ಲದೇ ಹತ್ತೂ ಏತ ನೀರಾವರಿ ಯೋಜನೆಗಳೂ ಸ್ಥಗಿತಗೊಂಡಿವೆ. ಇದರಿಂದ ಸಾವಿರಾರು ಎಕರೆಯಲ್ಲಿ ಬೆಳೆದಿರುವ ಬೆಳೆಗಳು ಒಣಗಲಾರಂಭಿಸಿವೆ.

ಕೆಲವು ವರ್ಷಗಳ ಹಿಂದೆ ತಾಲೂಕಿನಲ್ಲಿ ಮಲಪ್ರಭಾ ನದಿ ಮತ್ತು ಬೆಣ್ಣಿಹಳ್ಳಕ್ಕೆ ಒಟ್ಟು 10 ಏತ ನೀರಾವರಿ ಯೋಜನೆಗಳನ್ನು ನೂರಾರು ಕೋಟಿ ರು. ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ. ಜಾಕ್‌ವೆಲ್‌ ಕಾಮಗಾರಿಯನ್ನು ಗುತ್ತಿಗೆದಾರರು ಸರಿಯಾಗಿ ಮಾಡಿಲ್ಲ. ಇದರಿಂದ ಒಂದು ದಿನವೂ ಕೆಳಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಬಂದಿಲ್ಲವೆಂಬುದು ರೈತರು ಆರೋಪ.

ಈ ಏತ ನೀರಾವರಿ ವ್ಯಾಪ್ತಿಯ ಬೆಳೆಗಳಿಗೆ ನೀರು ಹಾಯಿಸಬೇಕೆಂದರೆ ಜಾಕ್‌ವೆಲ್ ಮೂಲಕ ಭೂಮಿಗೆ ನೀರನ್ನು ಲಿಫ್ಟ್‌ ಮಾಡಬೇಕು. ಕಳೆದ ವರ್ಷ 14ನೇ ಹಂಚಿಕೆಯ ಹದಲಿ- ಗಂಗಾಪುರ ಮತ್ತು ಹದಲಿ- ಮದುಗುಣಿಕಿ ಈ ಎರಡು ಏತ ನೀರಾವರಿ ಜಾಕ್‌ವೆಲ್‌ ಬಂದ್ ಆಗಿವೆ. ಅಲ್ಲದೇ ಕಳೆದ ವರ್ಷ ಈ ಜಾಕ್‌ವೆಲ್‌ನಲ್ಲಿನ ವೈಂಡಿಂಗ್ ವೈರ್, ಟಿಸಿ ಕಳುವಾಗಿದ್ದವು. ₹25 ಲಕ್ಷ ವೆಚ್ಚದಲ್ಲಿ ಎರಡು ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಬಂದ್ ಆಗಿವೆ. ಹೀಗಾಗಿ ಈ ವರ್ಷ ಜಮೀನುಗಳಿಗೆ ಬರಲೇ ಇಲ್ಲ. ನಿರ್ವಹಣೆಗೆ ಅನುದಾನವೂ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬೆಳೆಗಳು ಒಣಗುವ ಭೀತಿ: ಸಮರ್ಪಕ ನೀರು ಪೂರೈಕೆ ಇಲ್ಲದೇ ಬೆಳೆಗಳು ಒಣಗುತ್ತಿವೆ. ತಾಲೂಕಿನ ಹದಲಿ, ಮುದ್ಗಣಿಕಿ, ಭೈರನಹಟ್ಟಿ, ಗಂಗಾಪುರ, ಖಾನಾಪುರ, ರಡ್ಡೇರ ನಾಗನೂರ ಗ್ರಾಮದ ನೀರಾವರಿ ಜಮೀನುಗಳಿಗೆ ಮುಖ್ಯ ಕಾಲುವೆ ನೀರು ಬರದಿದ್ದರೆ ಬೆಣ್ಣಿಹಳ್ಳದ ಪಕ್ಕ ನಿರ್ಮಾಣ ಮಾಡಿದ ಜಾಕ್‌ವೆಲ್‌ಗಳ ಮುಖಾಂತರ ಜಮೀನುಗಳಿಗೆ ನೀರು ಬರುತ್ತದೆ ಎಂದು ರೈತರು ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಕಡಲೆ, ಗೋವಿನಜೋಳ, ಹತ್ತಿ, ಇತರ ಬೆಳೆಗಳನ್ನು ಹಾಕಿದ್ದರು. ಈ ಏತ ನೀರಾವರಿಯನ್ನೇ ಅವಲಂಬಿಸಿದ ಬೆಳೆಗಳು ಹಾನಿಯಾಗುತ್ತಿವೆ.

3 ಸಾವಿರ ಎಕರೆ ಬೆಳೆಹಾನಿ: ಜಾಕ್‌ವೆಲ್ ನೀರನ್ನೇ ಅವಲಂಬಿಸಿದ 3 ಸಾವಿರ ಎಕರೆ ಭೂಮಿಯಲ್ಲಿನ ಬೆಳೆಗಳು ನೀರಿಲ್ಲದೇ ನಾಶವಾಗುವ ಸಂಭವವಿದೆ ಎಂದು ಹದಲಿ ಗ್ರಾಮದ ರೈತ ಬಸವಣ್ಣಪ್ಪ ಸುಂಕದ ಆತಂಕ ವ್ಯಕ್ತಪಡಿಸಿದರು. ಹದಲಿ- ಮದುಗುಣಿಕಿ ಜಾಕ್‌ವೆಲ್‌, ಹದಲಿ- ಗಂಗಾಪುರ ಜಾಕ್‌ವೆಲ್ ನಿರ್ವಹಣೆಗೆ ಸರ್ಕಾರದಿಂದ ಅನುದಾನದ ಕೊರತೆ ಇದೆ. ಜತೆಗೆ ಉಳಿದ ಎಂಟು ಜಾಕ್‌ವೆಲ್‌ಗಳ ಪೈಪ್‌ಲೈನ್ ಸಂಪೂರ್ಣ ಬದಲಾವಣೆಗಾಗಿ ₹80 ಕೋಟಿ ಅನುದಾನ ಇದೆ. ಆದರೆ ಯಾವ ಗುತ್ತಿಗೆದಾರರು ಕಾಮಗಾರಿ ಮಾಡಲು, ಟೆಂಡರ್ ಹಾಕಲು ಮುಂದೆ ಬಾರದಿರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಉಗ್ರ ಹೋರಾಟ:

ತಾಲೂಕಿನಲ್ಲಿ ಸಾಕಷ್ಟು ಫಲವತ್ತಾದ ಭೂಮಿ ಇದೆ. ಆದರೆ ಹೆಸರಿಗೆ ಮಾತ್ರ ನೀರಾವರಿ ಜಮೀನುಗಳಾಗಿವೆ. ಆದರೆ ಈ ಜಮೀನುಗಳಿಗೆ ಕಾಲುವೆ ನೀರು ಸಿಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ ಅನುದಾನ ನೀಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ಉಮೇಶ ಮರ್ಚಪ್ಪನವರ ತಿಳಿಸಿದರು.

ಅನುದಾನದ ಕೊರತೆ: ತಾಲೂಕಿನ 8 ಜಾಕ್‌ವೆಲ್‌ಗಳ ಮರು ಪೈಪ್‌ಲೈನ್‌ ನಿರ್ಮಾಣ ಕಾಮಗಾರಿಗೆ ₹80 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಯಾವ ಗುತ್ತಿಗೆದಾರರು ಕಾಮಗಾರಿಗೆ ಟೆಂಡರ್ ಹಾಕುತ್ತಿಲ್ಲ. ಇನ್ನು ಉಳಿದ ಎರಡು ಜಾಕ್‌ವೆಲ್‌ಗಳನ್ನು ನಿರ್ವಹಣೆಗೆ ಅನುದಾನದ ಕೊರತೆಯಿದೆ ಎಂದು ಕರ್ನಾಟಕ ನೀರಾವರಿ ನಿಗಮದ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ಓಲೇಕಾರ ತಿಳಿಸಿದರು.