ಸಾರಾಂಶ
ಕೊಪ್ಪಳ: ನಗರದ ಗವಿಮಠದ ಆವರಣದಲ್ಲಿ ಶುಕ್ರವಾರ ಸಂಜೆ ಲಘು ರಥೋತ್ಸವ (ಉಚ್ಛಾಯ) ಸಾವಿರಾರು ಭಕ್ತರ ನಡುವೆ ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು.ಶನಿವಾರ ನಡೆಯಲಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಮಹಾರಥೋತ್ಸವವು ನಿರ್ವಿಘ್ನವಾಗಿ ಸಾಗಲಿ ಎನ್ನುವ ಉದ್ದೇಶದಿಂದ ಪ್ರತಿವರ್ಷ ಈ ಲಘು ರಥೋತ್ಸವ ಉಚ್ಛಾಯ ಎಳೆಯಲಾಗುತ್ತದೆ. ಈ ವೇಳೆ ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದು ಕೊಟ್ಟವು. ಭಕ್ತರು ಉತ್ತತ್ತಿ ಎಸೆದು ಭಕ್ತಿ ಮೆರೆದರು.ಸಂಗೀತ ಕಾರ್ಯಕ್ರಮ: ಲಘು ರಥೋತ್ಸವದ ನಂತರ ಮಠದ ಕೈಲಾಸ ಮಂಟಪದಲ್ಲಿ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸಂಗೀತ ಪೀಠದ ವಿದ್ಯಾರ್ಥಿಗಳಾದ ವಿನಯ ಶಿರೂರಮಠ, ಐಶ್ವರ್ಯ ಹಿರೇಮಠ ಅವರಿಂದ ಹಾರ್ಮೋನಿಯಂ, ಶ್ರೀನಿವಾಸ ಜೋಷಿ, ಮಹಮದ್ ರಿಜ್ವಾನ್ ಗಂಗಾವತಿ, ಮಧು ಮೋರಗೇರಿ ಇವರಿಂದ ತಬಲಾ, ಕೆ.ಸಾಯಿ ಸಮರ್ಥ, ತೇಜಸ್ಸ ಹಿರೇಮಠ ಇವರಿಂದ ತಂಬೂರಿ, ಜ್ಯೋತಿ ಮಲ್ಲಾಪುರ, ಇಂಚರ, ಎಚ್.ಎಂ. ಅಮೂಲ್ಯ ಕಂಪ್ಲಿ (ಸುಗಮ ಸಂಗೀತ) ಹಾಲಮ್ಮ ಹಾಗೂ ಡಾ.ಮಹಾದೇವಯ್ಯ, ಶಿವಾಜಿ ಬಂಡಿವಡ್ಡರ್ ಹುಬ್ಬಳ್ಳಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೂವಿನ ಹಡಗಲಿಯ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಸಂಸ್ಥಾನ ಮೈನಳ್ಳಿ, ಗುರುಶಾಂತ ಶಿವಾಚಾರ್ಯ ಮಹಾಸ್ವಾಮಿಗಳು ಭೂಕೈಲಾಸ ಮೇಲು ಗದ್ದುಗೆ ಹಿರೇಮಠ ಇಟಗಿ ವಹಿಸಿದ್ದರು. ತೇಜಸ್ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಜನಾ ಹಾಗೂ ಹರ್ಷಿತಾ ಹಿರೇಮಠ ನಿರ್ವಹಿಸಿದರು.