ಸಾರಾಂಶ
ಚಾರ್ಮಾಡಿ ಘಾಟಿಯ ಅರಣ್ಯ ವಿಭಾಗದಲ್ಲಿ ಬೆಂಕಿ ಉಂಟಾಗುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳ ವಾತಾವರಣದಲ್ಲಿ ಕೊಂಚ ಏರುಪೇರು ಉಂಟಾಗಿದೆ.
ಬೆಳ್ತಂಗಡಿ: ಚಿಕ್ಕಮಗಳೂರು ವಿಭಾಗದ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದ ಕೆಲವೆಡೆ ಲಘು ಬೆಂಕಿ ಕಾಣಿಸಿಕೊಂಡಿದೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕೊಟ್ಟಿಗೆಹಾರ ಕಡೆ ಸಂಚರಿಸುವಾಗ ವ್ಯೂ ಪಾಯಿಂಟ್ ಕಳೆದ ಬಳಿಕ ಬಲ ಭಾಗದ ಅರಣ್ಯದ ದೂರಪ್ರದೇಶದಲ್ಲಿ ಬೆಂಕಿ ಕಂಡುಬರುತ್ತಿದ್ದು ಘಾಟಿ ವಿಭಾಗದ ಅಲ್ಲಲ್ಲಿ ದಟ್ಟ ಹೊಗೆಯ ವಾತಾವರಣ ಇದೆ ಇದೀಗ ಬಿಸಿಲಿನ ತಾಪವು ಹೆಚ್ಚಿದ್ದು ಅರಣ್ಯ ಭಾಗದಲ್ಲಿ ತರಗಲೆ ಸಹಿತ ಗಿಡ ಮರಗಳು ಒಣಗಿರುವುದು ಬೆಂಕಿ ಹರಡಲು ಕಾರಣವಾಗಬಹುದು.ಘಾಟಿ ಭಾಗದಲ್ಲಿ ಸಂಚರಿಸುವಾಗ ದೂರ ಪ್ರದೇಶದ ಅರಣ್ಯದಲ್ಲಿ ಬೆಂಕಿ ಉಂಟಾಗಿರುವುದು ಸಂಜೆಯ ಬಳಿಕ ದಟ್ಟವಾಗಿ ಗೋಚರಿಸುತ್ತಿದೆ. ಬೆಂಕಿ ಕಂಡುಬಂದಿರುವ ಸ್ಥಳ ರಸ್ತೆಯಿಂದ ದೂರದಲ್ಲಿದ್ದು ಇಲ್ಲಿಗೆ ಹೋಗುವುದು ಸುಲಭದ ಮಾತಲ್ಲ. ಆದರೆ ಬೆಂಕಿ ರಸ್ತೆಯ ಕಡೆ ಪಸರಿಸುವ ಅಪಾಯವೂ ಇದೆ. ಬೆಂಕಿಯಿಂದ ವನ್ಯಜೀವಿಗಳು ದಿಕ್ಕಾಪಾಲಾಗಿರುವ ಸಾಧ್ಯತೆ ಇದೆ. ಬೆಂಕಿ ಲಘು ಪ್ರಮಾಣದಲ್ಲಿ ಕಂಡು ಬರುತ್ತಿದ್ದರು ಅದು ಇನ್ನಷ್ಟು ಪ್ರದೇಶವನ್ನು ವ್ಯಾಪಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹುಲ್ಲು ಕೂಡ ಒಣಗಿರುವುದು ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದು.
ಚಾರ್ಮಾಡಿ ಘಾಟಿಯ ಅರಣ್ಯ ವಿಭಾಗದಲ್ಲಿ ಬೆಂಕಿ ಉಂಟಾಗುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳ ವಾತಾವರಣದಲ್ಲಿ ಕೊಂಚ ಏರುಪೇರು ಉಂಟಾಗಿದೆ.ದ.ಕ. ವಿಭಾಗಕ್ಕೆ ಆತಂಕವಿಲ್ಲ: ಬಹುತೇಕ ಬೆಂಕಿ ನೆರಿಯ ಹೊಳೆಯ ಇನ್ನೊಂದು ಭಾಗದಲ್ಲಿ ಕಂಡು ಬರುತ್ತಿರುವ ಕಾರಣ ದ.ಕ. ಜಿಲ್ಲೆಯ ನೆರಿಯ, ಚಾರ್ಮಾಡಿ ಕಡೆಯ ಅರಣ್ಯಗಳತ್ತ ಪಸರಿಸುವ ಸಾಧ್ಯತೆ ಇಲ್ಲ. ಹೊಳೆ ಅಡ್ಡಲಾಗಿರುವುದು, ಬೆಂಕಿ ರೇಖೆ ನಿರ್ಮಿಸಿರುವುದು ಫಲಕಾರಿಯಾಗಿದೆ. ಆದರೆ ಚಿಕ್ಕಮಗಳೂರು ವಿಭಾಗದ ಅರಣ್ಯದಲ್ಲಿ ಹರಡುವ ಅಪಾಯ ಇದೆ.ಬೆಳ್ತಂಗಡಿ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಬೆಂಕಿ ಪ್ರಕರಣಗಳು ಇಷ್ಟರವರೆಗೆ ಕಂಡುಬಂದಿಲ್ಲ ಕಾಡ್ಗಿಚ್ಚಿನ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಬಿ.ಜಿ. ಮೋಹನ್ ಕುಮಾರ್ ತಿಳಿಸಿದ್ದಾರೆ.