ಬಡವರ ಭರವಸೆಯ ಬೆಳಕು ಕೆ. ಶಿವರಾಮ್‌ ಇನ್ನು ನೆನಪು ಮಾತ್ರ

| Published : Mar 01 2024, 02:21 AM IST

ಬಡವರ ಭರವಸೆಯ ಬೆಳಕು ಕೆ. ಶಿವರಾಮ್‌ ಇನ್ನು ನೆನಪು ಮಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು ತೇರ್ಗಡೆಯಾದ ಮೊದಲಿಗ ಖ್ಯಾತಿಯ, 37 ವರ್ಷಗಳ ಹಿಂದೆ ಯಾದಗಿರಿ ಬಡವರಿಗೆ ಭರವಸೆಯ ಬೆಳಕಾಗಿ ಕಂಡ, ಬಡಜನರ ಪಾಲಿನ ಆಶಾಕಿರಣ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಂ ಇನ್ನು ನೆನಪು ಮಾತ್ರ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು ತೇರ್ಗಡೆಯಾದ ಮೊದಲಿಗ ಖ್ಯಾತಿಯ, 37 ವರ್ಷಗಳ ಹಿಂದೆ ಯಾದಗಿರಿ ಬಡವರಿಗೆ ಭರವಸೆಯ ಬೆಳಕಾಗಿ ಕಂಡ, ಬಡಜನರ ಪಾಲಿನ ಆಶಾಕಿರಣ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಂ ಇನ್ನು ನೆನಪು ಮಾತ್ರ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತ: ರಾಮನಗರದವರಾಗಿ, ದೂರದ ಬೆಂಗಳೂರಿನಲ್ಲಿ ಅವರು ವಾಸಿಸುತ್ತಿದ್ದರಾದರೂ, ಯಾದಗಿರಿ ಜನರೊಡನೆ ಅವರದ್ದು ಅವಿನಾಭಾವ ಸಂಬಂಧ.

1988ರಲ್ಲಿ, ಆಗ ಅವಿಭಜಿತ ಗುಲ್ಬರ್ಗ (ಈಗಿನ ಕಲಬುರಗಿ) ಜಿಲ್ಲೆಯಲ್ಲಿ ತಾಲೂಕು ಕೇಂದ್ರವಾಗಿದ್ದ ಯಾದಗಿರಿಗೆ ಸಹಾಯಕ ಆಯಕ್ತ (ಅಸ್ಸಿಸ್ಟಂಟ್‌ ಕಮೀಶನರ್‌)ರಾಗಿ ಕಾರ್ಯನಿರ್ವಹಿಸಿದ್ದ ವೇಳೆ ಬಡವರ, ದೀನ ದಲಿತರ ಪಾಲಿನ ಆಶಾಕಿರಣವಾಗಿ ಕಂಡಿದ್ದರು. ಅವರ ಕೆಲಸ ಕಾರ್ಯಗಳು ಜನಸಮೂಹದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದವು.

21 ಸೆಪ್ಟೆಂಬರ್‌ 1988 ರಿಂದ 30 ಜೂನ್‌ 1989 ರವರೆಗೆ, ಕೇವಲ 9 ತಿಂಗಳು 10 ದಿನಗಳ ದಿನಗಳ ಕಾಲ ಅವರಿಲ್ಲಿದ್ದರು. ಈಗಲೂ ಇಲ್ಲಿನ ಜನಮಾನಸದಲ್ಲಿ "ಎಸಿ ಶಿವರಾಮ್‌ " ಎಂದೇ ಫೇಮಸ್ಸು. ಅವರ ಅಗಲಿಕೆ ಅಭಿಮಾನಿಗಳಿಗೆ ಕಣ್ಣೀರಾಗಿಸಿದೆ, ಸ್ಮೃತಿಪಟಲದಲ್ಲಿ ಹಳೆಯ ನೆನಪುಗಳ ಬುತ್ತಿ ಬಿಚ್ಚಿದೆ.

ತೆರಿಗೆ ಸಂಗ್ರಹಿಸಿ ಪುರಸಭೆ ನೌಕರರ ವೇತನ ಕೊಡಿಸಿದ್ದ ಶಿವರಾಮ್‌: 1987ರಲ್ಲಿ ಯಾದಗಿರಿ ಆಗ ಪುರಸಭೆಯಾಗಿತ್ತು. 2 ವರ್ಷಗಳಿಂದ ಸಿಬ್ಬಂದಿಗಳ ವೇತನ ಆಗಿರಲಿಲ್ಲ. ಸ್ಥಳೀಯ ತೆರಿಗೆ ಸಂಗ್ರಹಿಸಿದ ಹಣದಲ್ಲಿ ಸಿಬ್ಬಂದಿಗಳ ವೇತನ ನೀಡುವ ಪದ್ಧತಿ ಆಗಿತ್ತು. ತೆರಿಗೆ ಸಂಗ್ರಹ ಕೊರತೆಯಿಂದ ವೇತನ ಸಿಗದೆ ಕಂಗಾಲಾಗಿದ್ದ ಸಿಬ್ಬಂದಿಗಳು, ಸಾಲ ಮಾಡಿ ಬದುಕು ಸಾಗಿಸುವ ಅನಿವಾರ್ಯತೆ ಇತ್ತು.

ಇದನ್ನು ಮನಗಂಡ ಕೆ. ಶಿವರಾಮ್‌, ತಾವೇ ಮುಂದಾಗಿ ಮನೆ ಮನೆಗಳಿಗೆ ತೆರಳಿ ತೆರಿಗೆ ಸಂಗ್ರಹ ಅಭಿಯಾನಕ್ಕೆ ಮುಂದಾದರು. ವರ್ಷಾನುಗಟ್ಟಲೇ ತೆರಿಗೆ ಬಾಕಿಯುಳಿಸಿಕೊಂಡಿದ್ದ ಶ್ರೀಮಂತರಿಂದಲೇ ಮೊದಲು ತೆರಿಗೆ ಸಂಗ್ರಹಕ್ಕೆ ಮುಂದಾದ ಕೆ. ಶಿವರಾಂ ಅವರ ಕಾರ್ಯವೈಖರಿ, ಇನ್ನುಳಿದ ಜನಸಾಮಾನ್ಯರಿಗೂ ಪ್ರೇರಣೆಯಾಯಿತು. ಹೀಗೆಯೇ, ಸುಮಾರು 60 - 70 ಜನ ಸಿಬ್ಬಂದಿಗಳ 2 ವರ್ಷಗಳ ವೇತನವನ್ನು ನೀಡಿದ್ದು ಅವರ ಮಾನವೀಯತೆಗೆ ಸಾಕ್ಷಿ ಅಂತಾರೆ ತೀರ ಹತ್ತಿರದಿಂದ ಬಲ್ಲ ನಗರಸಭೆ ಸದಸ್ಯ, ಕಾಂಗ್ರೆಸ್ ವಕ್ತಾರ ಸ್ಯಾಂಸನ್‌ ಮಾಳಿಕೇರಿ ಮೆಲುಕು ಹಾಕಿದರು.

ರಾಜ್ಯೋತ್ಸವ ಸಂಭ್ರಮಕ್ಕೆ ಮುನ್ನುಡಿ ಬರೆದರು: ಕವಿ, ಕಲಾವಿದ ಹಾಗೂ ಗಾಯಕರೂ ಆಗಿದ್ದ ಕೆ. ಶಿವರಾಂ, ಈ ಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವದ ವಿಜೃಂಭಣೆಯ ಆಚರಣೆಗೆ ಮುನ್ನುಡಿ ಬರೆದವರು. ನಾಡು-ನುಡಿ, ಸಾಂಸ್ಕೃತಿಕ- ಕಲೆ ಮುಂತಾದವುಗಳ ಪರಿಚಯಿಸಲು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಕನ್ನಡ ರಾಜ್ಯೋತ್ಸವದ ಘಮಲು ಪಸರಿಸುವಂತೆ ಮಾಡಿ, ಸುಮಾರು 10-15 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ರಾಜ್ಯೋತ್ಸವ ಆಚರಣೆಗೆ ನಾಂದಿ ಹಾಡಿದರು ಎಂದು ಅವರೊಡನೆ ಆತ್ಮೀಯವಾಗಿದ್ದ, ಅವರ ಬೆನ್ನೆಲಬು ಆಗಿದ್ದ ಆರ್‌ಎಸ್‌ಎಸ್‌ ಮುಖಂಡ ಮಹೇಂದ್ರ ಅಳ್ಳೊಳ್ಳಿ, ಹಿಂದಿನ ಘಟನೆಗಳ ಮೆಲುಕು ಹಾಕಿದರು.

ಯಾದಗಿರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿರುವ ಪಂಪ ಮಹಾ ಕವಿ ಮಂಟಪದ ನಿರ್ಮಾತೃ ಅವರೇ ಎನ್ನುವ ಮಹೇಂದ್ರ, ಅಲ್ಲಿನ ಪೊಲೀಸ್‌ ಠಾಣೆಯದುರು ಒತ್ತುವರಿಯಾಗಿದ್ದ ಅನೇಕ ಅಮಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ, ಸುಸ್ಸಜ್ಜಿತ ವೇದಿಕೆ, ಸಾವಿರಾರು ಜನರು ನಿಂತು ನೀಡುವಷ್ಟು ಸ್ಥಳಾವಕಾಶ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇರಣೆಯಾದರು. ಈಗಲೂ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಅದಕ್ಕೆ ಕೆ. ಶಿವರಾಮ್‌ ಅವರ ಪ್ರಯತ್ನವೇ ಕಾರಣ ಅಂತಾರೆ.