ಮಂಗಳಾದೇವಿ ಜಾತ್ರೆಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ- ವಿಹಿಂಪ, ಬಹಿಷ್ಕಾರ ಕರೆಗೆ ಸಮಾನ ಮನಸ್ಕರ ವಿರೋಧ
KannadaprabhaNewsNetwork | Published : Oct 18 2023, 01:00 AM IST
ಮಂಗಳಾದೇವಿ ಜಾತ್ರೆಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ- ವಿಹಿಂಪ, ಬಹಿಷ್ಕಾರ ಕರೆಗೆ ಸಮಾನ ಮನಸ್ಕರ ವಿರೋಧ
ಸಾರಾಂಶ
ಮಂಗಳಾದೇವಿ ಉತ್ಸವದಲ್ಲಿ ಹಿಂದೂ ವ್ಯಾಪಾರಿಗಳಿ ಅವಕಾಶಕ್ಕೆ ವಿಎಚ್ಚ್‌ಪಿ, ಭಜರಂಗದಳ ಆಗ್ರಹ, ಸಮಾನ ಮನಸ್ಕ ಸಂಘಟನೆ ವಿರೋಧ
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಿರುವ ವಿವಾದ ಮುಂದುವರಿದಿದೆ. ದೇವಸ್ಥಾನದ ಆಡಳಿತ ಮಂಡಳಿ ಏಲಂ ನಡೆಸಿ ಜಾತ್ರಾ ಸಂದರ್ಭದಲ್ಲಿ ಹಿಂದುಯೇತರರಿಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ವಿಶ್ವಹಿಂದು ಪರಿಷತ್ ಭಕ್ತಜನತೆಯನ್ನು ಆಗ್ರಹಿಸಿದೆ. ಮಂಗಳವಾರ ಮಂಗಳಾದೇವಿ ದೇವಸ್ಥಾನದಲ್ಲಿ ಜಾತ್ರೆಯ ಹಿಂದು ಅಂಗಡಿಗಳಿಗೆ ಕೇಸರಿ ಧ್ವಜ ಹಸ್ತಾಂತರ ವೇಳೆ ವಿಹಿಂಪ ಮುಖಂಡರು ಈ ಮಾತು ಹೇಳಿದ್ದಾರೆ. ಈ ಸಂದರ್ಭ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ಭುಜಂಗ ಕುಲಾಲ್ ಮತ್ತಿತರರು ಇದ್ದರು. ದ.ಕ. ಜಿಲ್ಲೆಯ ಎಲ್ಲ ದೇವಸ್ಥಾನಗಳು ಮುಂಜರಾಯಿ ಇಲಾಖೆಯ ಕಾನೂನಿನ ಅನ್ವಯ ಜಾತ್ರಾ ಸಂದರ್ಭದಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಆದರೆ ಮಂಗಳಾದೇವಿ ದೇವಸ್ಥಾನದಲ್ಲಿ ಜಿಲ್ಲಾಡಳಿತ ಎರಡನೇ ಬಾರಿ ಏಲಂ ಕರೆದು ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದು ಸರಿಯಲ್ಲ, ಮುಜರಾಯಿ ಇಲಾಖೆಯ ಕಾನೂನಿನ ಅನ್ವಯ ರಥ ಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಬಡ ಹಿಂದೂ ವ್ಯಾಪಾರಸ್ಥರು ಈ ಜಾತ್ರೆ ವ್ಯಾಪಾರ ನಂಬಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಭಕ್ತರು ಕೇಸರಿ ಧ್ವಜ ಹಾಕಿರುವ ಬಳಿ ವ್ಯಾಪಾರ ಮಾಡುವಂತೆ ವಿಹಿಂಪ ಮುಖಂಡರು ವಿನಂತಿಸಿದ್ದಾರೆ. ಬಡ ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ವಿರೋಧ ಇಲ್ಲ, ಧಾರ್ಮಿಕ ಕ್ಷೇತ್ರ ನಮ್ಮ ಹಕ್ಕು, ಹಾಗಾಗಿ ದತ್ತಿ ಇಲಾಖೆ ಕಾನೂನು ಅನ್ವಯ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ. ಹಿಂದುಯೇತರರು ರಥಬೀದಿ ಬಿಟ್ಟು ಬೇರೆಕಡೆ ವ್ಯಾಪಾರ ಮಾಡಲಿ, ನಮ್ಮ ಅಭ್ಯಂತರವಿಲ್ಲ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ ತಿಳಿಸಿದ್ದಾರೆ. ಮುಸ್ಲಿಂ ವ್ಯಾಪಾರ ಬಹಿಷ್ಕಾರಕ್ಕೆ ವಿರೋಧ: ಮುಸ್ಲಿಂ ವ್ಯಾಪಾರಿಗಳಿಂದ ದಸರಾ ಸಂತೆಯಲ್ಲಿ ಖರೀದಿ ನಡೆಸದಂತೆ ಹಿಂದು ಅಂಗಡಿಗಳಿಗೆ ಕೇಸರಿ ಬಾವುಟ ಹಾಕಿರುವ ಹಿಂದು ಸಂಘಟನೆಗಳ ಕ್ರಮ ಹತಾಶೆಯ ಪ್ರತಿಬಿಂಬವಾಗಿದೆ. ಹೋರಾಟ ನಡೆಸಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಮರು ಏಲಂ ಮಾಡಿಸಿ ಅವಕಾಶ ಪಡೆದಿರುವುದರಿಂದ ಕೋಮು ಶಕ್ತಿಗಳು ಹತಾಶರಾಗಿದ್ದಾರೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವಂತೆ ಕರೆ ನೀಡಿರುವ ಹಿಂದು ಸಂಘಟನೆ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ಬಂಧಿಸುವಂತೆ ಸಮಾನ ಮನಸ್ಕರ ಜಂಟಿ ವೇದಿಕೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.