ಸಾರಾಂಶ
ಗ್ಯಾರಂಟಿಗಳ ನಡುವೆಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಳೆದ ತಿಂಗಳು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 700 ಕೋಟಿ ರು. ವಿವಿಧ ಸವಲತ್ತುಗಳನ್ನು ನೀಡಿರುವುದೆ ಸಾಕ್ಷಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗ್ಯಾರಂಟಿಗಳ ನಡುವೆಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಳೆದ ತಿಂಗಳು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 700 ಕೋಟಿ ರು. ವಿವಿಧ ಸವಲತ್ತುಗಳನ್ನು ನೀಡಿರುವುದೆ ಸಾಕ್ಷಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ಅವರು ಕೊರಟಗೆರೆ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ 14.5 ಕೋಟಿ ರು.ಗಳ ವೆಚ್ಚದ ಶಾಲಾ ಅಭಿವೃದ್ಧಿಗಳ ಕಾಮಗಾರಿ ಚಾಲನೆ, ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಹಾಗೂ ರೈತರಿಗೆ ವಿವಿಧ ಸವಲತ್ತುಗಳ ವಿತರಿಸಿ ಮಾತನಾಡಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಯಾದ ಭಾರತ ಸರ್ಕಾರದ ನರೇಗಾ ಯೋಜನೆಯು ವಿಶ್ವಸಂಸ್ಥೆ ಮೆಚ್ಚಿಕೊಂಡ ಯೋಜನೆಯಾಗಿದ್ದು, ಈ ಯೋಜನೆ ಯಿಂದ ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಹುದೊಡ್ಡ ಅಭಿವೃದ್ಧಿಯಾಗುತ್ತಿದೆ. ಇಂತಹ ಯೋಜನೆಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮತ್ತಷ್ಟು ಬರಬೇಕಿದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಬಡವರಿಗೆ ಸೂರು ಕಲ್ಪಿಸಲು 2 ಸಾವಿರ ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಅಲ್ಲಿ ಬಡವರಿಗೆ ನಿವೇಶನ ಹಂಚಿ ಮನೆಕಟ್ಟಿಕೊಡುವ ಕೆಲಸ ಮಾಡಲಾಗುವುದು. ಅದೇ ರೀತಿಯಾಗಿ ಕೊರಟಗೆರೆ ತಾಲೂಕಿನಲ್ಲೂ 100 ಎಕರೆ ಜಮೀನನ್ನು ಗುರುತಿಸಲಾಗಿದೆ, ತುಮಕೂರು ಜಿಲ್ಲೆಯಲ್ಲಿ 6.16 ಲಕ್ಷ ಮಹಿಳೆಯರಿಗೆ 561 ಕೋಟಿ ರು.ಗಳ ಗೃಹಭಾಗ್ಯ ಯೋಜನೆ ನೀಡಲಾಗಿದೆ, 9 ತಿಂಗಳಲ್ಲಿ 276 ಕಾಮಗಾರಿಗಳನ್ನು ನರೇಗಾ ಯೋಜನೆಗಳಲ್ಲಿ ಮಾಡಲಾಗುತ್ತಿದ. 5 ಗ್ಯಾರಂಟಿಗಳಿಂದ 1200 ಕೋಟಿ ರು.ಗಳಿಗೂ ಹೆಚ್ಚು ಅನುದಾನವನ್ನು ಮಹಿಳೆಯರಿಗೆ ನೀಡಲಾಗಿದೆ. ಸರ್ಕಾರವು 5 ವರ್ಷದವರೆಗೂ ಅಭಿವೃದ್ಧಿ ಪರ್ವ ಮುಂದುವರೆಸಲಿದ್ದು, ಯಾವುದೇ ಕಾರಣಕ್ಕೂ 5 ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದರು.ಕೊರಟಗೆರೆ ತಾಲೂಕಿನಲ್ಲಿ ಇಂದು 13.5 ಕೋಟಿ ರು.ಗಳ ವೆಚ್ಚದಲ್ಲಿ ಹಲವು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. 20.80 ಲಕ್ಷ ರು. ವೆಚ್ಚದಲ್ಲಿ 16 ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ರೈತರಿಗೆ ವಿವಿಧ ಇಲಾಖೆಗಳಿಂದ 22 ಲಕ್ಷ ರು.ಗಳ ವೆಚ್ಚದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ಈ ಸಂದಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅಶೋಕ್, ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಅಪೂರ್ವ, ಅಧಿಕಾರಿಗಳಾದ ಗುರುಮೂರ್ತಿ, ಮಧುಸೂದನ್, ಪೃದ್ವಿಭಾ, ಸಿಬ್ಬಂದಿ ಬಸವರಾಜು, ಸೌಭಾಗ್ಯ, ಜಗದೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.