ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಸುಡು ಬಿಸಿಲಲ್ಲಿ ಸುಣ್ಣದ ಚೀಲದ ರಾಶಿ ಹಾಕಿಕೊಂಡು ಕುಳಿತ ಸುಣ್ಣ ಮಾರುವವರು ವ್ಯಾಪಾರವಿಲ್ಲದೆ ಬಸವಳಿದಿದ್ದಾರೆ. ಯುಗಾದಿ ಹಬ್ಬದ ವೇಳೆ ಭರಪೂರ ವ್ಯಾಪಾರವಾಗುತ್ತಿದ್ದ ಸುಣ್ಣ ಇದೀಗ ಬಣ್ಣದ ಹಾವಳಿಗೆ ಸಿಕ್ಕು ಕಣ್ಮರೆಯಾಗುತ್ತಿದೆ. ನಗರದ ತುಂಬಾ ಸುಮಾರು 10 ರಿಂದ 12ಕಡೆ ಯುಗಾದಿ ಹಬ್ಬದ ಪ್ರಯುಕ್ತ ಸುಣ್ಣದ ಚೀಲಗಳ ರಾಶಿ ಹಾಕಿಕೊಂಡು ಕುಳಿತ ಸುಣ್ಣಗಾರರು ವ್ಯಾಪಾರವಿಲ್ಲದೇ ಮುಗಿಲು ನೋಡುತ್ತಿದ್ದಾರೆ.

ನಗರವೂ ಸೇರಿದಂತೆ ಹಳ್ಳಿಯ ಮನೆಗಳೆಲ್ಲಾ ದಿನೇ ದಿನೇ ಬಣ್ಣದ ಮನೆಗಳಾಗುತ್ತಾ ಸಾಗಿದ್ದು ಸುಣ್ಣ ಕೊಳ್ಳುವವರ ಸಂಖ್ಯೆಯೇ ಕಡಿಮೆಯಾಗಿದೆ. ಅದರಲ್ಲೂ ಹಿರಿಯೂರು ಸುಣ್ಣಗಾರರ ಬದುಕಂತೂ ತೀರಾ ದುಸ್ತರ ಎಂಬಂತಾಗಿದೆ. ಸರ್ಕಾರದ ನೆರವಿಲ್ಲ. ಸ್ಥಳೀಯವಾಗಿ ಸಾಲ ಸಿಗುತ್ತಿಲ್ಲ. ಮೊದಲಿನ ವ್ಯಾಪಾರವಿಲ್ಲ, ಸ್ವಂತಕ್ಕೆ ಅಂತ ಅಂಗೈ ಅಗಲ ಜಾಗವಿಲ್ಲ. ಇದೆಲ್ಲದರ ಜತೆಗೆ ಜನಾಂಗಕ್ಕೆ ಅಂತ ಒಂದು ರುದ್ರಭೂಮಿಯೂ ಇಲ್ಲ. ಸುಣ್ಣ ಮಾರುವ ಹತ್ತಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿವೆ. ಸರ್ಕಾರದ ಯಾವ ಸೌಲಭ್ಯವೂ ಇಲ್ಲದೆ, ಬ್ಯಾಂಕುಗಳಿಂದ ಸಾಲವೂ ಸಿಗದೇ ಕೊನೆಗೆ ಬಣ್ಣದ ಹಾವಳಿಗೆ ಸಿಕ್ಕು ವ್ಯಾಪಾರವೇ ಕಡಿಮೆಯಾಗಿದೆ.

ನಗರದ ಹೊರಗಿನ ನದಿ ತಟದಲ್ಲಿ 15ಕ್ಕೂ ಹೆಚ್ಚು ಸುಣ್ಣದ ಗುಮ್ಮಿ ನಿರ್ಮಿಸಿಕೊಂಡಿರುವ ಸುಮಾರು 30-40 ಕುಟುಂಬಗಳು ಸೇರಿದಂತೆ ಸುಣ್ಣಗಾರರ ನೂರು ಕುಟುಂಬಗಳಿವೆ.


ಮನೆಗೆ ಬಳಿಯಲು, ಎಲೆ ಅಡಕೆಗೆ ಬಳಕೆಯಾಗುತ್ತಿದ್ದ ಸುಣ್ಣಕ್ಕೆ ಬಣ್ಣದ ಹಾವಳಿ ಶುರುವಾದ ಮೇಲೆ ವ್ಯಾಪಾರ ಇಳಿಮುಖವಾಗಿದ್ದು, ಅವಸಾನದ ಅಂಚಿಗೆ ಸುಣ್ಣಗಾರರ ವೃತ್ತಿ ಸರಿದು ಬಿಡುತ್ತದೆ ಎಂಬ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ ತಾಲೂಕಿನಲ್ಲಿ ಕಳೆದ ಐದಾರು ವರ್ಷದಿಂದ ಅಡಕೆ ಬೆಳೆ ನಾಟಿ ಸಾವಿರಾರು ಹೆಕ್ಟರ್ ಹೆಚ್ಚಿದ್ದರಿಂದ ಸುಣ್ಣದ ಮಾರಾಟಗಾರರು ಒಂದಿಷ್ಟು ಉಸಿರಾಡುವಂತಾಗಿದೆ. ಅಡಿಕೆ ಮರಗಳ ಬುಡಕ್ಕೆ ಬಿಸಿಲಿನ ತಾಪ ತಗ್ಗಿಸಲು ಸುಣ್ಣ ಬಳಿಯುವುದರಿಂದ ಸುಣ್ಣಗಾರರ ಪಾರಂಪರಿಕ ವೃತ್ತಿ ಒಂದಿಷ್ಟು ಉಸಿರಾಡುತ್ತಿದೆ.

ಸುಣ್ಣ ಸುಡುವುದು, ಮೀನು ಹಿಡಿಯುವುದನ್ನು ವೃತ್ತಿಯಾಗಿಸಿಕೊಂಡ ಬೆಸ್ತರಿಗೆ ಇದೀಗ ಉಳ್ಳವರು, ಅನ್ಯ ಜಾತಿಯವರು ಸಹ ಕೆರೆಗಳ ಗುತ್ತಿಗೆ ಪಡೆಯುವುದರಿಂದ ಮೀನಿನ ವ್ಯಾಪಾರದಲ್ಲೂ ಅವರ ಬದುಕು ಮೂರಾಬಟ್ಟೆಯಾಗಿದೆ. ಇಲ್ಲಿರುವ ಸುಮಾರು 100 ಕುಟುಂಬಗಳಿಗೆ ಯಾರಿಗೂ ಒಂದು ಅಂಗೈ ಅಗಲ ಜಮೀನಿಲ್ಲ. ಬಂದವರೆಲ್ಲಾ ನೆರವು ನೀಡುವ ಭರವಸೆ ನೀಡಿದರೆ ಹೊರತು ಸಮಸ್ಯೆಗಳನ್ನು ಪರಿಹರಿಸುವ ಗೋಜಿಗೆ ಹೋಗಲಿಲ್ಲ. ಸ್ವಂತ ಜಾಗದಲ್ಲಿ ಇಲ್ಲದ್ದರಿಂದ ನದಿಯಲ್ಲಿ ನೀರು ಹರಿದು ಗುಮ್ಮಿಗಳು ನೀರಲ್ಲಿ ಮುಳುಗಿದಾಗಲೂ ಪರಿಹಾರ ಸಿಗಲಿಲ್ಲ. ಹೋಗಲಿ ನೆಮ್ಮದಿಯಾಗಿ ವ್ಯಾಪಾರ ಮಾಡಿಕೊಂಡು ದುಡಿದು ಬದುಕು ಸಾಗಿಸೋಣವೆಂದರೆ ಮೊದಲಿನಂತೆ ಮನೆಗಳಲ್ಲಿ ಇದ್ದಿಲು ಸಿಗುತ್ತಿಲ್ಲ. ಎಲ್ಲಾ ಮನೆಗಳವರು ಗ್ಯಾಸ್ ಒಲೆಗಳ ಮೊರೆ ಹೋದ ಮೇಲೆ ಇದ್ದಿಲು ಉತ್ಪಾದನೆಯೇ ನಿಂತಿದೆ. ಸುಣ್ಣ ಸುಡಲು ಭಟ್ಟಿ ಇದ್ದಿಲು ತರಲು ಹೋದರೆ ಅದು ತುಂಬಾ ದುಬಾರಿ.ಹಾಗಾಗಿ ಈಗ ತೆಂಗಿನಕಾಯಿಯ ಸಿಪ್ಪೆ,ಚಿಪ್ಪು ಮುಂತಾದ ಪರಿಕರಗಳನ್ನು ಉಪಯೋಗಿಸಿಕೊಂಡು ಸುಣ್ಣ ಸುಡಬೇಕಿದೆ. ವರ್ಷವೆಲ್ಲಾ ನಗರದಲ್ಲಿ 4-5 ಕಡೆ ಸುಣ್ಣ ಮಾರಾಟ ನಡೆಯುತ್ತದೆ. ಯುಗಾದಿ ಹಬ್ಬದ ತಿಂಗಳಲ್ಲಿ ಅವುಗಳ ಸಂಖ್ಯೆ 10-12 ಆಗುತ್ತದೆ.ಸುಣ್ಣ ಬಳಿಯುವ ಮನೆಗಳೇ ಇಲ್ಲವಾಗುತ್ತಿರುವುದರಿಂದ ಸುಣ್ಣಗಾರರನ್ನು ಆ ಭಗವಂತನೇ ಕಾಪಾಡಬೇಕು.

ಹಿರಿಯೂರು ನಗರದ ಪ್ರಧಾನ ರಸ್ತೆಯ ಪೆಟ್ರೋಲ್ ಬಂಕ್ ಪಕ್ಕದ ಸುಣ್ಣದ ವ್ಯಾಪಾರಿ ಕರಿಯಮ್ಮ ಮಾತನಾಡಿ, ಮೊದಲಿನ ವ್ಯಾಪಾರವಿಲ್ಲ. ಇದನ್ನು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ವರ್ಷವೆಲ್ಲಾ 5 ಅಂಗಡಿಗಳಿದ್ದು ಹಬ್ಬದಲ್ಲಿ 12 ಅಂಗಡಿ ಆಗಿವೆ. ವರ್ಷದಲ್ಲಿ ಮೂರು ತಿಂಗಳು ವ್ಯಾಪಾರ ನಡೆಯುತ್ತದೆ. ಇನ್ನು 9 ತಿಂಗಳು ನಷ್ಟ ಅನುಭವಿಸುವ ಸ್ಥಿತಿ. ಸುಣ್ಣ ಸುಡುವವರ ಮತ್ತು ಮಾರುವವರ ಬದುಕಿಗೆ ಸರ್ಕಾರ ಆಸರೆಯಾಗಬೇಕು. ನಮ್ಮ ವೃತ್ತಿ ಉಳಿಯಲು ಸಹಾಯ ಧನ ನೀಡುವ ಯೋಜನೆ ಜಾರಿಗೆ ತರಬೇಕು ಎಂದರು.