ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇಂದಿನ ಯುವ ಪೀಳಿಗೆ ಸಾಧ್ಯವಾದಷ್ಟು ಮೊಬೈಲ್ ಬಳಕೆಗೆ ಮಿತಿ ಹೇರಬೇಕು, ಓದುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು,ವಿಶೇಷ ಚೇತನನಾದ ನನಗೆ ರೇಡಿಯೋ ಪಾಠ ಆಲಿಸಿ 10ನೇ ತರಗತಿ ಪರೀಕ್ಷೆ ಬರೆಯಲು ಪ್ರೇರಣೆ ದಕ್ಕಿತು ಎಂದು ಮೈಸೂರಿನ ಮಾನಸ ಗಂಗೋತ್ರಿ ಸಂಸ್ಥೆಯ ಸಂಶೋಧಕಿ ಡಾ. ಬಿ.ಎಂ. ಮಾಲಾ ಅವರು ತಿಳಿಸಿದರು.
ಅವರು ಮಾನಸ ಕಾಲೇಜಿನಲ್ಲಿ ಜನಪರ ಸಾಹಿತ್ಯ ಪರಿಷತ್, ಹಳೆ ವಿದ್ಯಾರ್ಥಿಗಳ ಸಂಘ, ನಿಸರ್ಗ ಕಾಲೇಜಿನ ಆಶ್ರಯದಲ್ಲಿಆಯೋಜಿಸಲಾಗಿದ್ದ ಸಾಹಿತಿ ಕುಮಾರ್ ಮನಿಯಶೆಟ್ಟಿ ರಚಿತ ಈ ಭೂಮಿಯ ಕೊನೆಹಾಡು ಕಾದಂಬರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪರ ಸಾಹಿತ್ಯ ಪರಿಷತ್ ಅನೇಕ ಜನಪರವಾದ ಸಮಾಜ ಮುಖಿ ಕೆಲಸ ಮಾಡುತ್ತಿದೆ. ಶಿಕ್ಷಕರು ಮಕ್ಕಳ ಮನಸ್ಸು ಗೆಲ್ಲುವ ಗುರುಗಳಾಗಿ ಮಾರ್ಗದರ್ಶನ ಮಾಡುವಂತಾಗಬೇಕು, ಕಥೆ, ಕಾದಂಬರಿಗಳನ್ನು ಓದಿ, ಪ್ರೋತ್ಸಾಹಿಸಿ ಎಂದರು.
ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕರು ಡಾ. ನಾಗರಾಜು ಪಿ.ವಿ. ಮಾತನಾಡಿ, 228 ಪುಟಗಳ ಈ ಭೂಮಿಯ ಕೊನೆ ಹಾಡು ಕಾದಂಬರಿ ಉತ್ತಮ ಕಥಾ ಹಂದರವಿದ್ದು, ಈಗಿನ ಕಾಲಘಟ್ಟಕ್ಕೆ ಅನುಗುಣವಾಗಿ ಕಾದಂಬರಿ ರಚಿತವಾಗಿದೆ, ಇದೊಂದು ಮೌಲ್ಯಯುತ ಕೖತಿ ಎಂದರು.
ಡಾ. ಬಿ ಆರ್ ಅಂಬೇಡ್ಕರ್ ಅವರಂತೆ ಪುಸ್ತಕ ಓದಿ, ಜ್ಞಾನಿಗಳಾಗಿ:ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಬಾಬಾ ಸಾಹೇಬರು ಜ್ಞಾನದ ಭಂಡಾರ, ಅವರು ಓದಿನಿಂದಲೇ ಜ್ಞಾನಿಗಳಾದರೂ ಎಂಬುದನ್ನು ಯುವ ಪೀಳಿಗೆ ಅರ್ಥೈಸಿಕೊಳ್ಳಬೇಕು, ಅವರು 50 ಸಾವಿರ ಕೖತಿಗಳನ್ನು ಅಧ್ಯಯನ ಮಾಡಿದ್ದರಿಂದಲೇ ವಿಶ್ವಜ್ಞಾನಿ, ವಿಶ್ವರತ್ನರಾಗಿ ರೂಪುಗೊಂಡರು ಎಂದು ಹೇಳಿದರು
ಮಾನಸ ಸಂಸ್ಥೆ ಜ್ಞಾನದ ಬೆಳಕಾಗಿ ಮೌಲ್ಯಯುತ ಶಿಕ್ಷಣ ನೀಡುವ ಏಕೈಕ ವಿದ್ಯಾಸಂಸ್ಥೆಯಾಗಿದೆ. ಚಾ.ನಗರ ಜಿಲ್ಲೆ ಅತ್ಯಂತಸಂಪದ್ಬರಿತ ಜಿಲ್ಲೆ, ಯುವ ಕವಿಗಳು, ಕಥೆಗಾರರನ್ನು ಯುವ ಪೀಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು, ಯುವ ಪೀಳಿಗೆ ಪುಸ್ತಕ, ದಿನ ಪತ್ರಿಕೆ, ಕಥೆ, ಕಾದಂಬರಿಗಳನ್ನು ಕೊಂಡು ಓದುವುದರಿಂದ ಹಾಗೂ ಸತತ ಅದ್ಯಯನದಿಂದ ಜ್ಞಾನಾರ್ಜನೆ
ವೃದ್ಧಿಗೂ, ಸೃಜನಾತ್ಮಕ ಬರವಣಿಗೆಗೂ ಸಹಕಾರಿಯಾಗಲಿದೆ ಎಂದರು.ವಿಶೇಷ ಚೇತನರು,ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆ ಸಾಕ್ಷಿ.!ಈ ಭೂಮಿಯ ಕೊನೆ ಹಾಡು ಕಾದಂಬರಿ ಬಿಡುಗಡೆ ಸಮಾರಂಭ ವಿಶೇಷ ಚೇತನರ ಸಮಾಗಮ, ಗುರುಶಿಷ್ಯರ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು ಕೃತಿ ಬಿಡುಗಡೆಗೊಳಿಸಿ, ಈ ಸಮಾರಂಭ ವಿಭಿನ್ನ, ವಿಶಿಷ್ಟ ಹಾಗೂ ಗುರು- ಶಿಷ್ಯರುಗಳ ಸಮಾಗಮದ ವೇದಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಮಗೆ ನೆರವಾದ ಮಾನಸ ಸಂಸ್ಥೆಯ ಕುರಿತು ಮೆಚ್ಚುಗೆ ಮಾತನಾಡುವ ಮೂಲಕ ತಮಗೆ ವಿದ್ಯೆ ಕಲಿಸಿದ ನಾಗಭೂಷಣ್, ಜಗದೀಶ್, ಡಾ.ಚನ್ನಶೆಟ್ಟಿ ಹಾಗೂ ಸಂಸ್ಥೆಯ ಡಾ. ದತ್ತೇಶ್ ಕುಮಾರ್ ಅವರ ಸಹಾಯವನ್ನು ಸ್ಮರಿಸಿದ್ದು ವಿಶೇಷವಾಗಿತ್ತು.
ಮಾನಸ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಸಂಯೋಜನಾಧಿಕಾರಿ ಡಾ. ನಾಗಭೂಷಣ್, ಕಾದಂಬರಿ ರಚಿತ ಸಾಹಿತಿ ಕುಮಾರ್ ಮನಿಯಶೆಟ್ಟಿ,ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಎಂ. ಚಿಕ್ಕಲ್ಲೂರು, ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ನಿಸರ್ಗ ಕಾಲೇಜಿನ ಪ್ರಾಂಶುಪಾಲ ಈ. ಜಗದೀಶ್, ಡಾ. ವಿ.ಯೋಗೀಂದ್ರ, ಶಿಕ್ಷಕ ಮಂಟೇಸ್ವಾಮಿ, ಸುಶ್ಮಿತ, ಚಂದನ , ಮೇಘನ, ಯೋಗೀಂದ್ರ ಇನ್ನಿತರರಿದ್ದರು.