ಸಾರಾಂಶ
ತಾಲೂಕಿನ ಲಿಂಗನಬಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಬೃಂದಾವನದಂತೆ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯ ಸೆಲೆ । ಶಿಕ್ಷಕ ವೃಂದದಿಂದ ಪರಿಸರದ ಜಾಗೃತಿ ಮೂಡಿಸುವ ಕಾರ್ಯ
ಶಿವಮೂರ್ತಿ ಇಟಗಿ
ಕನ್ನಡಪ್ರಭ ವಾರ್ತೆ ಯಲಬುರ್ಗಾತಾಲೂಕಿನ ಲಿಂಗನಬಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಬೃಂದಾವನದಂತೆ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
೨೦೧೮ರಲ್ಲಿ ಶಾಲಾ ಕಟ್ಟಡ ಉದ್ಘಾಟನೆಗೊಂಡಿದೆ. ನಾಲ್ಕು ವರ್ಷದಲ್ಲಿಯೇ ಹಚ್ಚಹಸಿನಿಂದ ಕಂಗೊಳಿಸುತ್ತಿದೆ. ಆವರಣದ ಸುತ್ತಮುತ್ತಲೂ ನಾನಾ ವಿಧದ ಎರಡು ಸಾವಿರಕ್ಕೂ ಹೆಚ್ಚು ಗಿಡ, ಮರಗಳನ್ನು ನೆಡಲಾಗಿದೆ. ನಾನಾ ಗಿಡಮೂಲಿಕೆಗಳ ಸಸಿಗಳನ್ನು ಸಹ ಬೆಳೆಸಲಾಗಿದೆ. ಶಾಲೆ ಆವರಣ ಹಚ್ಚು ಹಸಿರಿನ ಸ್ವಚ್ಛ ಪರಿಸರ ಓದುವ ಮಕ್ಕಳ ಮನಸ್ಸು ಉಲ್ಲಾಸಗೊಳಿಸುತ್ತಿದೆ. ಶಾಲೆಯ ಆವರಣದಲ್ಲಿ ಬೆಳೆಯುವ ತರಕಾರಿ, ಸೊಪ್ಪುಗಳನ್ನು ಅಡುಗೆಗೆ ಬಳಸುತ್ತಾರೆ.ಇದು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸುವುದರ ಜೊತೆ ನಾನಾ ಕ್ರೀಡಾಕೂಟಕ್ಕೆ ವಿಶಾಲವಾದ ಮೈದಾನವನ್ನು ಹೊಂದಿದ್ದು, ಇದರಿಂದ ಮಕ್ಕಳ ಮನಸ್ಸನ್ನು ಶಾಲೆ ಆಕರ್ಷಿಸುತ್ತಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ.
ಪರಿಸರದ ಜಾಗೃತಿ:ಇಲ್ಲಿ ಮಕ್ಕಳಿಗೆ ಮನವರಿಕೆ ಆಗುವ ಹಾಗೇ ಕಲಿಕೆ ನೀಡುವ ಜತೆಗೆ ಪರಿಸರದ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಶಿಕ್ಷಕ ವೃಂದ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಶಾಲೆ ಆವರಣದಲ್ಲಿ ನಿರ್ಮಿತ ಉದ್ಯಾನ ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯ ಸೆಲೆಯಾಗಿದೆ.ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್, ಸೋಲಾರ್, ಶುದ್ಧ ಕುಡಿಯುವ ನೀರಿನ ಘಟಕ, ಶಾಲೆಗೆ ಪ್ರತ್ಯೇಕವಾಗಿ ಎರಡು ಬೋರವೆಲ್‌ಗಳು ಇವೆ. ಶಾಲೆಯ ಮೈದಾನ ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳ ಭದ್ರತೆ ದೃಷ್ಟಿಯಿಂದ ಶಾಲೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಶಾಲೆಯ ಎಲ್ಲ ದಿನಚರಿಗಳು ದಾಖಲೆಯಾಗುತ್ತವೆ.ಈ ಮೊರಾರ್ಜಿ ಶಾಲೆಗೆ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಅಭ್ಯಾಸಕ್ಕೆ ಬರುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಒಳ್ಳೆಯ ಶಿಕ್ಷಣ ಕೊಟ್ಟು ಮಕ್ಕಳನ್ನು ಸಂಸ್ಕಾರವಂತರನ್ನಾಗಿ, ಪರಿಸರ ಸ್ನೇಹಿಗಳಾಗಿ ಮಾಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಸ್ಥಳೀಯರಾದ ರಾಮಣ್ಣ ಸಾಲಭಾವಿ, ಬಸವರಾಜ ಜಂಬಳಿ.
ಶಾಲಾವರಣದಲ್ಲಿ ಮಕ್ಕಳೊಂದಿಗೆ ಸಸಿ ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕಾಳಜಿ ಬಿತ್ತುವ ಕೆಲಸ ಮಾಡಬೇಕು. ಸಸಿಗಳನ್ನು ಮಕ್ಕಳಂತೆ ಸಂರಕ್ಷಿಸಿ ನೀರುಣಿಸಿ ಬೆಳೆಸಿದರೆ ನಮಗೆಲ್ಲ ಫಲ ಕೊಡುತ್ತದೆ. ಈ ನಿಟ್ಟಿನಲ್ಲಿ ಶಾಲಾ ಸಮಗ್ರ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಪಾಲಕರ ಸಹಕಾರ ಬಹಳಷ್ಟಿದೆ ಎಂದು ಲಿಂಗನಬಂಡಿ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಶ್ರೀಧರ ಮ್ಯಾಗೇರಿ ತಿಳಿಸಿದ್ದಾರೆ.