ಲಿಂಗೈಕ್ಯ ಶಿವಕುಮಾರ ಶ್ರೀಗಳು ದೇಶ ಕಂಡ ಶ್ರೇಷ್ಠ ಸಂತ: ಬಾಬಾ ರಾಮದೇವ್

| Published : Apr 02 2024, 01:02 AM IST

ಲಿಂಗೈಕ್ಯ ಶಿವಕುಮಾರ ಶ್ರೀಗಳು ದೇಶ ಕಂಡ ಶ್ರೇಷ್ಠ ಸಂತ: ಬಾಬಾ ರಾಮದೇವ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಕುಮಾರ ಶ್ರೀಗಳು ಸಾಮಾನ್ಯ ಸಂತ ಅಲ್ಲ, ದೇಶ ಕಂಡ ಶ್ರೇಷ್ಠ ಸಂತರಲ್ಲೊಬ್ಬರು. ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ದಾಸೋಹ ಕಲ್ಪಿಸಿ ಅವರ ಬದುಕು ರೂಪಿಸಿದ ಮಹಾಸಂತ ಎಂದು ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಬಣ್ಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಶಿವಕುಮಾರ ಶ್ರೀಗಳು ಸಾಮಾನ್ಯ ಸಂತ ಅಲ್ಲ, ದೇಶ ಕಂಡ ಶ್ರೇಷ್ಠ ಸಂತರಲ್ಲೊಬ್ಬರು. ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ದಾಸೋಹ ಕಲ್ಪಿಸಿ ಅವರ ಬದುಕು ರೂಪಿಸಿದ ಮಹಾಸಂತ ಎಂದು ಹರಿದ್ವಾರದ ಪತಂಜಲಿ ಯೋಗ ಪೀಠದ ಸ್ವಾಮಿ ಬಾಬಾ ರಾಮದೇವ್ ಬಣ್ಣಿಸಿದರು.ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 117ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ದಗಂಗಾ ಶ್ರೀಗಳ ದರುಶನ ಭಾಗ್ಯದಿಂದಲೇ ಸಹಸ್ರಾರು ಜನರ ಕಷ್ಟ-ಕಾರ್ಪಣ್ಯಗಳು ಬಗೆಹರಿದಿವೆ. ಆಧ್ಯಾತ್ಮದ ಜತೆಗೆ ಜನರ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಶಿವಕುಮಾರ ಶ್ರೀಗಳು ಮಹಾಪುರಷರೆನಿಸಿದ್ದಾರೆ. ಇಂತಹ ಗುರುವಿನ ಗುರುವಂದನಾ ಮಹೋತ್ಸವದಲ್ಲಿ ಭಾಗಿಯಾಗುವ ಪುಣ್ಯ ನನ್ನದಾಗಿದೆ. ನಾನು ಕೂಡ ಲಿಂಗಾಯತ ಸನ್ಯಾಸಿ ಅನ್ನುವ ಅಭಿಮಾನ ಉಕ್ಕುವಂತಾಗಿದೆ ಎಂದರು.

ಬಸವಣ್ಣನವರ ಅನುಯಾಯಿಯಾಗಿದ್ದ ಸಿದ್ದಗಂಗಾ ಶ್ರೀಗಳು ಕಾಯಕವೇ ಕೈಲಾಸ ಎಂಬ ತತ್ವವನ್ನು ಅಕ್ಷರಶ ಪಾಲಿಸಿಕೊಂಡು ಬಂದಿದ್ದರು. ತ್ಯಾಗ, ತಪೋನಿಷ್ಠೆಯ ಪ್ರತಿನಿಧಿಯಂತಿದ್ದ ಶ್ರೀಗಳು, ಜಾತಿ ಭೇದ ಭಾವ ಎಣಿಸದೆ ಎಲ್ಲರನ್ನೂ ಒಂದೇ ಎನ್ನುವ ಭಾವದಿಂದ ನೋಡುತ್ತಿದ್ದರು. ಸಮಸಮಾಜದ ಹರಿಕಾರ ಬಸವಣ್ಣನವರ ಮಾರ್ಗದಲ್ಲೇ ನಡೆದವರು ಶಿವಕುಮಾರ ಶ್ರೀಗಳು ಎಂದು ತಿಳಿಸಿದರು.ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ 111 ವರ್ಷಗಳ ತಪೋ ಜೀವನದಲ್ಲಿ 89 ವರ್ಷಗಳ ಕಾಲ ಸಂಸ್ಥೆಯ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದವರು ಶಿವಕುಮಾರ ಸ್ವಾಮೀಜಿ ಮಾತ್ರ ಎಂದರು.89 ವರ್ಷಗಳ ಕಾಲ ನಿರಂತರವಾಗಿ ಅವರು ತೇಯ್ದ ಗಂಧದಂತೆ, ಉರಿಯುವ ಕರ್ಪೂರದಂತೆ ಕೆಲಸ ಮಾಡಿದರು ಎಂದು ಬಣ್ಣಿಸಿದರು. 1908 ಏಪ್ರಿಲ್ 1 ಭುವನದ ಭಾಗ್ಯದಂತೆ ಜನ್ಮ ತಾಳಿದ ಶ್ರೀಗಳು ಇಡೀ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟರು ಎಂದು ತಿಳಿಸಿದರು.ಸುತ್ತೂರು ಶ್ರೀಗಳು ಮಾತನಾಡಿ ಶಿವಕುಮಾರ ಮಹಾಸ್ವಾಮಿಗಳು ದಿವ್ಯ ಶಕ್ತಿಯಾಗಿ ನಮ್ಮ‌ ಕಣ್ಣುಮುಂದೆ ಇದ್ದವರು. ವಿಶ್ರಾಂತಿ ಎಂಬ ಪದಕ್ಕೆ ಅವಕಾಶ ಕೊಡದೆ ಇಡೀ ಬದುಕನ್ನು ಸಮಾಜ ಕ್ಕೆ ಮುಡಿಪಾಗಿಟ್ಟವರು ಎಂದರು.ನಿರಂತರವಾಗಿ ಜನಕಲ್ಯಾಣಕ್ಕೆ ಶ್ರಮಿಸಿ ಶ್ರೀಗಳು ಅನ್ನದಾಸೋಹ, ಜ್ಞಾನ ದಾಸೋಹ ಕೊಟ್ಟು ಲಕ್ಷಾಂತರ ಮಂದಿ ಬದುಕು‌ ಕಟ್ಟಿಕೊಟ್ಟವರು ಎಂದರು.ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವ್ಯಕ್ತಿತ್ವವನ್ನು ಅನುಕರಣೀಯವಾಗಿ ಅಳವಡಿಸಿಕೊಂಡವರು ಶಿವಕುಮಾರಸ್ವಾಮೀಜಿ ಎಂದರು. ನಮ್ಮ ಮಠದ ದಾಸೋಹಕ್ಕೆ ಇತಿಹಾಸವಿದೆ. ಮಾನವಕುಲವನ್ನು ಸಮಾನವಾಗಿ ಕಂಡು ಮಹಾಸೋಹದ ಸೇವೆ ಎಂದ ಅವರು ಶ್ರೀಗಳು ಲೋಕ ಕಲ್ಯಾಣದ ಪವಾಡವನ್ನೇ ಸೃಷ್ಟಿಸಿದ್ದಾರೆ ಎಂದರು.