ಸಾರಾಂಶ
ಸಂಡೂರು: ಲಿಂಗಾಯತ ಮಠಗಳು ಅನ್ನ ಹಾಗೂ ಜ್ಞಾನ ದಾಸೋಹಕ್ಕೆ ಹೆಸರಾಗಿವೆ ಎಂದು ಸಾಹಿತಿ ಡಾ.ಜೆ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂಭ್ರಮಾಚರಣೆ, ವಚನಶಾಸ್ತ್ರಸಾರ ಪ್ರಕಟಣಾ ಶತಮಾನೋತ್ಸವ ಸ್ಮರಣೆ, ಬಸವ ಬೆಳಗು ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಸದ್ಗುರು ಚರಿತಾಮೃತ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ೧೨ನೇ ಶತಮಾನದಲ್ಲಿ ಶರಣ ಚಳವಳಿ ನಡೆದದ್ದು ಉತ್ಪಾದಕ ವರ್ಗದ ಶರಣರಿಂದ. ಶರಣ ಧರ್ಮದ ಮೇಲೆ ಅತಿಕ್ರಮಣವಾಗುತ್ತಿದೆ. ಇದನ್ನು ತಡೆಯಬೇಕಿದೆ. ಆದರೆ ಇದನ್ನು ಚೂಟಿದಷ್ಟು ಇದು ಚಿಗುರುತ್ತಿದೆ. ಲಿಂಗಾಯತರಿಗೆ ಅವರ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಲಿಂಗಾಯತ ಮಠಗಳ ಮೇಲಿದೆ. ಲಿಂಗಾಯತರನ್ನು ಲಿಂಗಾಯತರನ್ನಾಗಿ ಮಾಡಬೇಕಿದೆ ಎಂದರು.ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ, ರಾಜ್ಯದ ಉದ್ದಗಲಕ್ಕೂ ಅನ್ನ, ಜ್ಞಾನ, ಆಶ್ರಯ ನೀಡುವ ಮೂಲಕ ಜನ ಸಮೂಹಕ್ಕೆ ಶಕ್ತಿ ತುಂಬುವ ಕೆಲಸವನ್ನು ವೀರಶೈವ ಮಠಮಾನ್ಯಗಳು ಮಾಡುತ್ತಿವೆ. ಸಂಡೂರಿನ ವಿರಕ್ತಮಠವೂ ಇದಕ್ಕೆ ಮಾದರಿಯಾಗಿದೆ. ಶರಣರ ವಚನಗಳು ಸಂತೃಪ್ತಿಯ ಜೀವನ, ಧರ್ಮ, ಮನುಷ್ಯತ್ವವನ್ನು ನಮಗೆ ತಿಳಿಸುತ್ತವೆ. ಇತ್ತೀಚೆಗೆ ನಮ್ಮ ಆದ್ಯತೆಗಳು ಬೇರೆಯಾಗುತ್ತಿವೆ. ಲೋಭ ಹೆಚ್ಚುತ್ತಿದೆ. ಶರಣರ ವಚನಗಳು ತವನಿಧಿಯ ಹಾಗೆ. ವಚನಗಳು ನಮಗೆ ಎಚ್ಚರಿಕೆಯ ಧ್ವನಿಯಾಗಬೇಕು ಎಂದು ಹೇಳಿದರು.
ಶ್ರೀಪ್ರಭುದೇವರ ಜನ ಕಲ್ಯಾಣ ಸಂಸ್ಥೆಯ ನಿರ್ದೇಶಕ ಡಾ.ಕೆ. ರವೀಂದ್ರನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವಾನುಯಾಯಿ ಡಾ. ಭಾಲ್ಕಿ ಚೆನ್ನಬಸವ ಪಟ್ಟದ್ದೇವರ ಜೀವನ ಸಾಧನೆ ಕುರಿತು ಪ್ರವಚನ ನೀಡಿದ್ದ ಗದಗದ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿಯ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಪ್ರಭುಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರಿಂದ ಹುಟ್ಟಿದ ಧರ್ಮ ಶರಣ ಧರ್ಮ, ಬಸವ ಧರ್ಮ. ಸ್ವಾಮೀಜಿಗಳು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೆ ಹೊರತು ಒಡೆಯುವ ಕೆಲಸ ಮಾಡಬಾರದು. ವಿಶ್ವಸಂಸ್ಥೆ ಘೋಷಿಸಿರುವ ಮಾನವ ಹಕ್ಕುಗಳು ಶರಣರ ವಚನಗಳಲ್ಲಿವೆ. ಅವುಗಳ ಆಚರಣೆ ಮುಖ್ಯವಾಗಿದೆ ಎಂದರು.
ಬಸವ ಬೆಳಗು, ಬಸವ ಸೇವಾ ಪ್ರಶಸ್ತಿ ಪ್ರದಾನ: ಶ್ರೀಮಠದ ವತಿಯಿಂದ ಸಂಶೋಧನಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಹಿರಿಯ ಸಂಶೋಧಕರಾದ ಡಾ. ಕೆ. ರವೀಂದ್ರನಾಥ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಸಮಾಜ ಸೇವಕಿ ಅಶ್ವಿನಿ ಅಂಗಡಿ ಚಳ್ಳಗುರ್ಕಿ ಅವರಿಗೆ ಬಸವ ಬೆಳಗು ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಸಂಡೂರಿನ ಸಿದ್ಧರಾಮೇಶ ಬಸವರಾಜಪ್ಪ ಅಂಕಮನಾಳ ಅವರಿಗೆ ಬಸವ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗ್ರಂಥಗಳ ಲೋಕಾರ್ಪಣೆ: ಡಾ. ಶಂಭು ಬಳಿಗಾರ ಅವರು ರಚಿಸಿದ ಬಯಲ ಗಳಿಕೆಯ ಮಹಾಬೆಳಗು, ಡಾ. ಗುರುಪಾದ ಮರಿಗುದ್ದಿ ಅವರು ರಚಿಸಿದ ಲಿಂಗಾಯತ ಅನುಸಂಧಾನ, ಡಾ. ಮಲ್ಲಯ್ಯ ಸಂಡೂರು ಅವರು ರಚಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಡಾ.ಜೆ.ಎಸ್. ಪಾಟೀಲ ಅವರು ರಚಿಸಿದ ವಚನ ವ್ಯಾಸಂಗ: ಒಳನೋಟ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಗ್ರಂಥ ದಾನಿಗಳಾದ ಆಶಾ ಬಂಡೆಮೇಗಳ, ಅಂದಪ್ಪ ಶಿವಪ್ಪ ರಡ್ಡೇರ, ಚಿತ್ರಿಕಿ ಸತೀಶ್ ಹಾಗೂ ವೆಸ್ಕೊ ಸಂಸ್ಥೆಯವರನ್ನು ಸನ್ಮಾನಿಸಲಾಯಿತು.
ವಿ.ಎಂ. ವೀರಭದ್ರಯ್ಯಸ್ವಾಮಿ, ಮಹಾಂತೇಶ ಚಿಕ್ಕಮಠ, ವೈಭವಿ ಹಾಗೂ ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಬಾಲ ಪ್ರತಿಭೆ ಜೆ.ಎಂ. ಶಾಲಿನಿ ಭರತನಾಟ್ಯ ಪ್ರದರ್ಶಿಸಿದಳು. ಶ್ರೀಮಠದಿಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಡಾ.ಎ.ಎನ್. ಸಿದ್ದೇಶ್ವರಿ ಅವರು ಸ್ವಾಗತಿಸಿದರು. ಅಪರ್ಣಾ ನಿರೂಪಣಾ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಜಿ.ಎಂ. ಪ್ರದೀಪ್‌ಕುಮಾರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಅಮರೇಶ ಎತಗಲ್, ನಿಷ್ಠಿ ರುದ್ರಪ್ಪ, ಡಾ. ಬಿ. ನಂಜುಂಡಸ್ವಾಮಿ, ಡಾ. ಮಲ್ಲಯ್ಯ ಸಂಡೂರು, ಡಾ. ತಿಪ್ಪೇರುದ್ರ ಕೊಟಿಗಿ, ಹಗರಿ ಬಸವರಾಜಪ್ಪ, ಗುಡೆಕೋಟೆ ನಾಗರಾಜ, ಗಡಂಬ್ಲಿ ಚೆನ್ನಪ್ಪ, ಬಪ್ಪಕಾನ್ ಕುಮಾರಸ್ವಾಮಿ, ಸಿ.ಎಂ. ಶಿಗ್ಗಾವಿ, ಬಸವರಾಜ ಮಸೂತಿ, ನರಿ ಬಸವರಾಜ, ಚಿತ್ರಿಕಿ ಸುಮಂಗಲಮ್ಮ ಉಪಸ್ಥಿತರಿದ್ದರು.