ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ ಮಠಗಳೇ ಪ್ರೇರಣೆ: ಸಚಿವೆ ಹೆಬ್ಬಾಳಕರ

| Published : Nov 11 2024, 11:45 PM IST

ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ ಮಠಗಳೇ ಪ್ರೇರಣೆ: ಸಚಿವೆ ಹೆಬ್ಬಾಳಕರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ : ಸರ್ಕಾರದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ ಮಠಗಳೇ ಪ್ರೇರಣೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ ಮಠಗಳೇ ಪ್ರೇರಣೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.

ನಗರದ ಕಾರಂಜಿಮಠದ ಪೀಠಾಧಿಪತಿ ಗುರುಸಿದ್ಧ ಸ್ವಾಮಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಅನುಭಾವ ಕಾರಂಜಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ವೀರಶೈವ-ಲಿಂಗಾಯತ ಮಠಗಳು ಸರ್ಕಾರಗಳಿಗೆ ಪರ್ಯಾಯವಾಗಿ ಎನ್ನುವಂತೆ ಸಾಮಾಜಿಕ ಕೆಲಸ ಮಾಡುತ್ತಿವೆ ಎಂದು ಅವರು, ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಿರುವೆ ಎಂದು ಸಚಿವೆ ಹೇಳಿದರು.

ಮಠಗಳು ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತಿವೆ.‌ ಮಠಗಳು ಕಾಯಕ ದಾಸೋಹ, ಅನ್ನ ದಾಸೋಹ, ಜ್ಞಾನ ದಾಸೋಹ, ಶಿಕ್ಷಣ ‌ದಾಸೋಹದ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಾ ಬಂದಿವೆ. ಸಮಾಜದಲ್ಲಿ ಸತ್ಪ್ರಜೆಗಳನ್ನು ರೂಪಿಸಲು ಲಿಂಗಾಯತ ಮಠಗಳ ಪಾತ್ರ ದೊಡ್ಡದು. ಬೆಳಗಾವಿ ಜನ ಬಹಳ ಪುಣ್ಯವಂತರು. ಹಲವಾರು ಮಠಗಳ ಮಾರ್ಗದರ್ಶನ ಸಿಗುತ್ತಿದೆ ಎಂದು ತಿಳಿಸಿದರು.

ನಾನು ಸಮಾಜದ ಮಗಳಾಗಿ ಸಮಾಜಕ್ಕೆ ಒಳ್ಳೆಯ ಹೆಸರು ತರುವಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಎಲ್ಲ ಜಾತಿಯವರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ 20 ವರ್ಷಗಳ ಹಿಂದೆಯೇ ಒಳ್ಳೆಯ ಸಮಾಜ ಸೇವಕಿಯಾಗು ಎಂದ ಆಶೀರ್ವಾದ ಮಾಡಿದ್ದರು ಎಂದು ಸ್ಮರಿಸಿದರು. ಎಲ್ಲ ಮಠಾಧೀಶರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ ಎಂದರು.

ಸಮಾರಂಭದಲ್ಲಿ ಡಂಬಳ-ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಹುಕ್ಕೇರಿಯ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಲಜಿಯ ಅಲೌಕಿಕ ಜ್ಞಾನಮಂದಿರದ ಶಿವಾನಂದ ಗುರೂಜಿ, ಬೆಳಗಾವಿ ಕಾರಂಜಿಮಠ ಉತ್ತರಾಧಿಕಾರಿ ಡಾ.ಶಿವಯೋಗಿ ದೇವರು, ಬೆಳಗಾವಿ ರೇಣುಕಾಶ್ರಮದ ಗಂಗಾಮಾತಾಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಸಂಸದರಾದ ಜಗದೀಶ್ ಶೆಟ್ಟರ್, ಮಾಜಿ ಶಾಸಕರಾದ ಫಿರೋಜ್ ಸೇಠ್, ಅಮೃತ ಮಹೋತ್ಸವ ಸಮಿತಿಯ ಸದಸ್ಯರಾದ ಡಾ. ಬಸವರಾಜ ಬಾಗೋಜಿ, ಸೋಮಶೇಖರ ಹಿರೇಮಠ, ಬಸವರಾಜ ಹಳಂಗಳಿ, ಸತೀಶ ಮಾಳವದೆ, ವಿಜಯ ಜಾಧವ್, ಡಾ.ಬಸವರಾಜ ಜಗಜಂಪಿ ಸೇರಿ ಕಾರಂಜಿಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಗುರುಸಿದ್ಧ ಸ್ವಾಮೀಜಿಯವರು ಪ್ರಚಾರ ಪ್ರಿಯರಲ್ಲ. ಕೆಲಸವನ್ನು ಮಾಡಿ ದೇವರ ಪಾದಕ್ಕೆ ಅರ್ಪಿಸುವುದಷ್ಟೇ ಅವರಿಗೆ ಗೊತ್ತು. ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಮಾರ್ಗದರ್ಶಕರಾಗಿ ಕೆಲಸ‌ ಮಾಡುತ್ತಿದ್ದಾರೆ. ಅವರ 50 ಹಾಗೂ ಷಷ್ಟ್ಯಬ್ದಿ ವರ್ಷಗಳ ಕಾರ್ಯಕ್ರಮ ಮಾಡಬೇಕು ಎಂದರೂ ಸ್ವಾಮೀಜಿಗಳು ಕೇಳಿರಲಿಲ್ಲ. ಇದೀಗ ಭಕ್ತರೆಲ್ಲಾ ಸೇರಿ ಅವರನ್ನು ಕೇಳದೆಯೇ, ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ

- ಲಕ್ಷ್ಮೀ ಹೆಬ್ಬಾಳಕರ , ಸಚಿವೆ