ಸಾರಾಂಶ
- 2-3 ದಿನದಲ್ಲೇ ಚನ್ನಗಿರಿ ಕ್ಷೇತ್ರ ಸಮೀಕ್ಷೆ ವರದಿ ಬಿಡುಗಡೆ: ಶಾಸಕ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಾತಿ ಜನಗಣತಿ ವರದಿ ಬಗ್ಗೆ ಇದುವರೆಗೂ ಧ್ವನಿ ಎತ್ತದ ಏಳು ಮಂದಿ ಲಿಂಗಾಯತ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯಲ್ಲಿ ಸಮಾಜಕ್ಕೆ ಅನ್ಯಾಯವಾಗಿದೆ. ಸಂಪುಟದಲ್ಲಿರುವ ಏಳು ಜನರ ಲಿಂಗಾಯತ ಸಚಿವರು ಈವರೆಗೆ ಸಭೆ ಕರೆದಿಲ್ಲ, ಧ್ವನಿ ಎತ್ತಿಲ್ಲ. ಈ ಬಗ್ಗೆ ಚರ್ಚಿಸಲು ಸಚಿವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಸಚಿವ ಈಶ್ವರ ಖಂಡ್ರೆ ಅವರಿಗೆ ಕರೆ ಮಾಡಿದರೂ ಕರೆಗೆ ಸ್ಪಂದಿಸಿಲ್ಲ ಎಂದಿರುವ ಶಿವಗಂಗಾ, ಜಾತಿಗಣತಿ ಬಗ್ಗೆ ಮೌನ ತಾಳಿಸುವ ಸ್ವಜಾತಿ ಸಚಿವರ ವಿರುದ್ಧವೇ ಕೆಂಡಕಾರಿದ್ದಾರೆ.
ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾದ ವಿಚಾರ ತಿಳಿಯುತ್ತಿದ್ದಂತೆ ಆ ಸಮಾಜದ ಶಾಸಕರ ಜೊತೆಗೆ ಡಿಕೆಶಿ ಸಭೆ ನಡೆಸಿದರು. ಆದರೆ, ಲಿಂಗಾಯತ ಸಚಿವರು ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಎಲ್ಲ ಸಮಾಜಗಳನ್ನೂ ಸೇರಿಸಿ, ಜಾತಿಗಣತಿ ವರದಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಚನ್ನಗಿರಿ ಕ್ಷೇತ್ರದಲ್ಲಿ ನಾನೂ ಸಮೀಕ್ಷೆ ಮಾಡಿಸುತ್ತಿದ್ದೇನೆ. ಇನ್ನು 2-3 ದಿನದಲ್ಲೇ ನಮ್ಮ ಸಮೀಕ್ಷಾ ವರದಿ ಬಿಡುಗಡೆ ಮಾಡುತ್ತೇನೆ. ಇಂತಹ ಜಾತಿ ಗಣತಿ ವರದಿ ಬಗ್ಗೆ ಕ್ಷೇತ್ರದಲ್ಲಿ ಜನರಿಗೆ, ಸಮುದಾಯಗಳಿಗೆ ಉತ್ತರ ಕೊಡುವವರು ನಾವು. ಎಲ್ಲ ಜಾತಿ, ಸಮುದಾಯಗಳಿಗೂ ನಾವು ಉತ್ತರ ಕೊಡಬೇಕಾಗುತ್ತದೆ. ಜಾತಿ ಗಣತಿ ವರದಿ ಬಗ್ಗೆ ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿ ಎಂದು ಆಗ್ರಹಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನನ್ನ ಬೆಂಬಲವಿದೆ. ರಾಜಕೀಯ ಮಾಡಲು ಎಲ್ಲ ಸಮುದಾಯದವರೂ ಬೇಕು. ಹಿರಿಯರು ಸಮಾಜದ ಪರವಾಗಿ ಮಾತನಾಡಿದ್ದಾರೆ. ನಾವು ಸಹ ಹಿರಿಯರ ಪರವಾಗಿದ್ದೇವೆ ಎಂದು ಶಾಸಕ ಬಸವರಾಜ ಶಿವಗಂಗಾ ಸ್ಪಷ್ಟಪಡಿಸಿದರು.- - -
(ಟಾಪ್ ಕೋಟ್) ವೀರಶೈವ ಲಿಂಗಾಯತ ಸಮಾಜದ ಏಳೂ ಸಚಿವರು ರಾಜೀನಾಮೆ ನೀಡಲಿ. ಜಾತಿ ಗಣತಿ ಅನ್ಯಾಯದ ಬಗ್ಗೆ ಸಮಾಜದ ಒಬ್ಬನೇ ಒಬ್ಬ ಸಚಿವ ಸಭೆ ಕರೆದರಾ? ಈ ಏಳೂ ಜನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಇಂಥವರಿಗೆ ಕೆಪಾಸಿಟಿ ಇಲ್ಲ. ನಮಗೆ ಎಲ್ಲ ಸಮುದಾಯಗಳೂ ಬೇಕು. ಹಾಗಂತಾ ನಮ್ಮ ಸಮಾಜದ್ದು ಮಾತನಾಡಬೇಕಲ್ಲವೇ? ನಾವು ಸಹ ಜನರಿಗೆ ಉತ್ತರಿಸಬೇಕಾಗುತ್ತದೆ.- ಬಸವರಾಜ ವಿ.ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ