ಲಿಂಗಾಯತ ಪಂಚಮಸಾಲಿ ವಕೀಲರ ಸಭೆ

| Published : Jul 13 2025, 01:19 AM IST

ಸಾರಾಂಶ

ರಾಜ್ಯಾದ್ಯಂತ 500ಕ್ಕೂ ಅಧಿಕ ಸಮಾಜದ ವಕೀಲರು, ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಜಮಖಂಡಿ

ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ರಾಜ್ಯಮಟ್ಟದ ಕಾರ್ಯಕಾರಣಿ ಚಿಂತನಾ ಸಭೆಯನ್ನು ವಿಜಯಪೂರ ನಗರದ ಸಿದ್ದೇಶ್ವರ ದೇವಾಲಯದ ಶಿವಾನುಭವ ಮಂಟಪದಲ್ಲಿ ಜು.13ರಂದು ಮಧ್ಯಾಹ್ನ 12ಗಂಟೆಗೆ ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು. ಇಲ್ಲಿನ ಮೈಗೂರ ರಸ್ತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದೆ ನಡೆಸುವ ಜಾತಿಗಣತಿಯಲ್ಲಿ ಸರ್ಕಾರಿ ಸಿಬ್ಬಂದಿ ನಮ್ಮ ಸಮಾಜದವರ ಮನೆಗೆ ಬಂದಾಗ ಯಾವ ರೀತಿ ಬರೆಸಬೇಕು. ನಿಖರವಾದ ಅಂಕಿ ಸಂಖ್ಯೆ ಸರ್ಕಾರಕ್ಕೆ ಹೋಗುವಂತೆ ಮಾಡಲು ಸಮಾಜದ ಬಾಂಧವರಿಗೆ ಸ್ಪಷ್ಟವಾದ ಸಂದೇಶ ನೀಡುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ನಮ್ಮದು ದೊಡ್ಡ ಸಮಾಜ 2015ರಲ್ಲಿ ಸರ್ಕಾರ ಜಾತಿ ಗಣತಿ ಮಾಡುವಾಗ ಸಮಾಜ ಅಷ್ಟೊಂದು ಜಾಗೃತಿ ಇರಲಿಲ್ಲ. ಎಲ್ಲರೂ ಲಿಂಗಾಯತ ಎಂದು ಬರೆಸಿದ್ದಾರೆ. ಅದನ್ನು ಸರ್ಕಾರ ಮರಳಿ ಪಡೆದಿದೆ. ಈ ಬಾರಿ ನಡೆಯುವ ಜಾತಿಗಣತಿಯಲ್ಲಿ ಯಾವುದೇ ಗೊಂದಲ ಇಲ್ಲದಂತೆ ನಿಖರವಾದ ಅಂಕಿ ಅಂಶಗಳು ಸರ್ಕಾರಕ್ಕೆ ತಲುಪಬೇಕು ಎಂದು ತಿಳಿಸಿದರು.

ಕಾನೂನು ಅನುಭವ ಹೊಂದಿರುವ ವಕೀಲರ ಸಲಹೆ ಸೂಚನೆ ಪಡೆದು ಎಲ್ಲರ ಜೊತೆ ಚರ್ಚಿಸಿ ಮುಂದೆ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹಾಗೂ ಮೀಸಲಾತಿಗೂ ಅನುಕೂಲವಾಗುವಂತೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರಲು ಚರ್ಚಿಸಲಾಗುವುದು. ರಾಜ್ಯಾದ್ಯಂತ 500ಕ್ಕೂ ಅಧಿಕ ಸಮಾಜದ ವಕೀಲರು, ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ತಾಲೂಕು ಅಧ್ಯಕ್ಷ ಮಹಾದೇವ ಇಟ್ಟಿ, ಎಲ್.ಬಿ.ಪಾಟೀಲ್ ಸುಭಾಸ ಕೊಪ್ಪದ, ವಕೀಲ ಶಿವಾನಂದ ಪಾರಶೆಟ್ಟಿ, ಜಿ.ಬಿ.ಕೌಜಲಗಿ, ಸಾಬು ಗಲಗಲಿ, ಅಕ್ಷಯ ಬಾಡಗಿ ಸೇರಿದಂತೆ ಇತರರು ಇದ್ದರು.