ಸಾರಾಂಶ
೩೭೮ನೇ ಶಿವಾನುಭವ ಗೋಷ್ಠಿಯಲ್ಲಿ ನಿವೃತ್ತ ಉಪನ್ಯಾಸಕಿಕನ್ನಡಪ್ರಭ ವಾರ್ತೆ ಸಂಡೂರು
ಲಿಂಗಾಯತ ಧರ್ಮ ಪರಿವರ್ತನಾ ಶೀಲವಾಗಿದೆ. ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ. ಲಿಂಗಾಯತ ಸಂಸ್ಕೃತಿ ಶ್ರಮಜೀವಿಗಳ ಸಂಸ್ಕೃತಿ ಎಂದು ಹೊಸಪೇಟೆಯ ನಿವೃತ್ತ ಉಪನ್ಯಾಸಕಿ ಎಚ್. ಸೌಭಾಗ್ಯಲಕ್ಷ್ಮಿ ಹೇಳಿದರು.ಪಟ್ಟಣದ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ನಡೆದ ೩೭೮ನೇ ಶಿವಾನುಭವಗೋಷ್ಠಿ ಹಾಗೂ ಲಿಂಗಾಯತ ಲಾಳಗೊಂಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಶರಣ ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಲಿಂಗಾಯತ ಧರ್ಮದ ಅಸ್ಮಿತೆ ಇರುವುದು ವಚನ ಸಂಸ್ಕೃತಿಯಲ್ಲಿ. ಈ ಸ್ವತಂತ್ರವಾಗಿರುವ ಧರ್ಮಕ್ಕೆ ವೈಚಾರಿಕ ಹಾಗೂ ವೈಜ್ಞಾನಿಕ ತಳಹದಿ ಇದೆ. ಇಷ್ಟಲಿಂಗ, ಕಾಯಕ ಹಾಗೂ ದಾಸೋಹ ಚಿಂತನೆಗಳು ಶರಣರ ಕೊಡುಗೆಗಳಾಗಿವೆ. ಶರಣರ ವಚನಗಳು ನಮಗೆ ಮಾರ್ಗದರ್ಶನವಾಗಿವೆ. ಇಷ್ಟಲಿಂಗ ನಮ್ಮೊಳಗಿನ ಚೈತನ್ಯದ ಕುರುಹು. ಶರಣ ಸಂಸ್ಕೃತಿ ವರ್ಣಾಶ್ರಮವನ್ನು, ದೇವಾಲಯ ಸಂಸ್ಕೃತಿಯನ್ನು, ಸೂತಕಗಳನ್ನು ನಿರಾಕರಿಸಿ, ಏಕ ದೇವೋಪಾಸನೆಯನ್ನು ಪ್ರತಿಪಾದಿಸುತ್ತದೆ. ಈ ಸಂಸ್ಕೃತಿ ದಾನ ಸಂಸ್ಕೃತಿಯನ್ನು ನಿರಾಕರಿಸಿ, ದಾಸೋಹ ಸಂಸ್ಕೃತಿಯನ್ನು ಹುಟ್ಟುಹಾಕಿತು. ಜನತೆ ವಚನಗಳ ಅರ್ಥ ತಿಳಿದು, ಅನುಸರಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಕಾರ್ಯಕ್ರಮ ಉದ್ಘಾಟಿಸಿ, ಬಸವಣ್ಣನವರು ಸಾಮಾಜಿಕ ಹಾಗೂ ಲಿಂಗ ಸಮಾನತೆ ಪ್ರತಿಪಾದಿಸಿ, ಅವುಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು. ಶರಣ ಸಂಸ್ಕೃತಿಯನ್ನು ಅನುಸರಿಸಿದಲ್ಲಿ ಸಮಾಜಕ್ಕೆ ಒಳಿತಾಗಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪ್ರಭುಸ್ವಾಮೀಜಿ ಮಾತನಾಡಿ, ಧರ್ಮವನ್ನು ಸರಿಯಾಗಿ ಅರಿಯದ ಕಾರಣ, ಧರ್ಮ ಧರ್ಮಗಳಲ್ಲಿ ತಿಕ್ಕಾಟ ಕಾಣುತ್ತಿದ್ದೇವೆ. ಬಸವಾದಿ ಶರಣರು ಸಮಾಜವನ್ನು ಸಮಗ್ರವಾಗಿ ನೋಡಿದರು. ವಚನ ಅಧ್ಯಯನದಿಂದ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಯಲಿದೆ. ಎಲ್ಲರೂ ವಚನಗಳನ್ನು ಅರ್ಥೈಸಿಕೊಂಡು ಅವುಗಳನ್ನು ಜೀವನದಲ್ಲಿ ಪಾಲಿಸುವುದು ಅಗತ್ಯವಿದೆ ಎಂದು ನುಡಿದರು.ಲಿಂಗಾಯತ ಲಾಳಗೊಂಡ ಸಮಾಜದ ಅಧ್ಯಕ್ಷ ಮಂಜುನಾಥ ಟಿ.ಕೆ. ಹಾಗೂ ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡೆಕೋಟೆ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಲಿಂಗಾಯತ ಲಾಳಗೊಂಡ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸರೋಜಾ, ಜ್ಯೋತಿ ವಚನ ಪಠಣ ಮಾಡಿದರು. ವಿಶಾಲಾಕ್ಷಿ ಉಗ್ರಾಣದ ಮತ್ತು ಸಂಗಡಿಗರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಆಶಾ ವೀರೇಶ್ ಬಂಡೆಮೇಗಳ ಸ್ವಾಗತಿಸಿದರು. ಎಲ್. ಉಷಾ ಕಾರ್ಯಕ್ರಮ ನಿರೂಪಿಸಿದರು. ನರಿ ಬಸವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖಂಡರಾದ ಹಗರಿ ಬಸವರಾಜಪ್ಪ, ಜಿ.ಕೆ. ನಾಗರಾಜ, ನಾಗರಾಜ ಗುಡೆಕೋಟೆ, ವಸುಂಧರಾ, ಜಯಶ್ರೀ ರಾಚಪ್ಪ, ರುದ್ರಗೌಡ, ಅರಳಿ ಕುಮಾರಸ್ವಾಮಿ ಮುಂತಾದವರಿದ್ದರು.