ಹಸಿದ ಹೊಟ್ಟೆಗೆ ಅನ್ನ ನೀಡಿದ ಲಿಂಗಾಯತ ಸಮಾಜ: ಸಚಿವ ಶಿವಾನಂದ ಪಾಟೀಲ

| Published : Feb 13 2024, 12:45 AM IST

ಸಾರಾಂಶ

ಹಸಿದ ಹೊಟ್ಟೆಗೆ ಅನ್ನ ಕೊಡುವ ಕೆಲಸ ಮಾಡಿದ್ದು ವೀರಶೈವ ಲಿಂಗಾಯತ ಸಮಾಜ.

ಪಂಚಾಕ್ಷರಿ ಗವಾಯಿಗಳ ೧೩೫ನೇ ಜಯಂತ್ಯುತ್ಸವ ಹಾಗೂ ಸಂಗೀತೋತ್ಸವ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹಸಿದ ಹೊಟ್ಟೆಗೆ ಅನ್ನ ಕೊಡುವ ಕೆಲಸ ಮಾಡಿದ್ದು ವೀರಶೈವ ಲಿಂಗಾಯತ ಸಮಾಜ. ಸುತ್ತೂರಿನಿಂದ ಬೀದರ್‌ವರೆಗಿನ ಎಲ್ಲ ಮಠಾಧೀಶರು ಶತ ಶತಮಾನಗಳಿಂದ ಅನ್ನ, ಅರಿವು, ಅಕ್ಷರದ ಪರಂಪರೆ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಜಾತಿ, ಪಂಥ ನೋಡದೇ ಈ ಪರಮ ಪವಿತ್ರ ಕಾಯಕದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗಾನಯೋಗಿ ಲಿಂ.ಪಂಚಾಕ್ಷರಿ ಗವಾಯಿಗಳ ೧೩೫ನೇ ಜಯಂತ್ಯುತ್ಸವ ಹಾಗೂ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಸಮಾಜ ಇಂದಿಗೂ ಈ ಭೂಮಿಯ ಮೇಲೆ ಇರಲು ಕಾರಣ ಹಾನಗಲ್ ಲಿಂ.ಕುಮಾರ ಶಿವಯೋಗಿಗಳು. ಅವರು ಬಸವಣ್ಣನ ವಾರಸುದಾರರು. ಆ ದಿನಗಳಲ್ಲಿಯೇ ವೀರಶೈವ ಲಿಂಗಾಯತ ಸಮಾಜ ಉಳಿಯಬೇಕು ಎನ್ನುವ ಕನಸು ಕಂಡವರು. ಅವರ ಪ್ರೇರಣೆ ಸಮಾಜದ ಮೇಲಾಗಿದೆ. ಬಸವಣ್ಣನ ಕಾಲದಿಂದಲೂ ಸಮಾಜದಲ್ಲಿ ಜಾತಿ ಅಳಿಸುವ ಕಾರ್ಯ ನಡೆದಿದೆ ಎಂದರು.

ಕಣ್ಣಿದ್ದೂ ಕುರುಡರಾದವರ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಕಣ್ಣಿಲ್ಲದಿದ್ದರೂ ಸಮಾಜದ ಕಣ್ಣು ತೆರೆಸಿದ ಶ್ರೇಯಸ್ಸು ಪಂಚಾಕ್ಷರಿ, ಪುಟ್ಟರಾಜ ಗವಾಯಿಗಳಿಗೆ ಸಲ್ಲಬೇಕಿದೆ. ಅಂಧ, ಅನಾಥರಿಗೆ ಭಿಕ್ಷೆ ಬೇಡದೇ ಕಾಲ ಮೇಲೆ ನಿಲ್ಲುವ ಶಕ್ತಿ ಕೊಟ್ಟ ಉಭಯ ಗವಾಯಿಗಳು ಮಾಡಿದ ಕೆಲಸವನ್ನು ಸೂರ್ಯ, ಚಂದ್ರ ಇರುವವರೆಗೂ ಈ ಸಮಾಜ ಸ್ಮರಿಸಲಿದೆ ಎಂದ ಅವರು, ಪಂಚಾಕ್ಷರಿ ಗವಾಯಿಗಳ ಜನ್ಮಸ್ಥಳ ಕಾಡಶೆಟ್ಟಿಹಳ್ಳಿಯನ್ನು ಅಭಿವೃದ್ಧಿ ಪಡಿಸಲು ಕಾಳಜಿ ವಹಿಸಲಾಗುವುದು. ತಮ್ಮ ಜೀವಿತಾವಧಿಯವರೆಗೆ ಗ್ರಾಮದಲ್ಲಿ ನಡೆಯುವ ಗವಾಯಿಗಳ ಜಯಂತ್ಯುತ್ಸವಕ್ಕೆ ಪ್ರತಿವರ್ಷವೂ ಸಹ ₹ಒಂದು ಲಕ್ಷ ವೈಯಕ್ತಿಕವಾಗಿ ನೀಡುವುದಾಗಿ ಶಿವಾನಂದ ಪಾಟೀಲ ಹೇಳಿದರು.

ಸಾನಿಧ್ಯ ವಹಿಸಿದ್ದ ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವ ಪುಣ್ಯಭೂಮಿ ಕಾಡಶೆಟ್ಟಿಹಳ್ಳಿ. ನನ್ನ ಆಧ್ಯಾತ್ಮಿಕ ಜೀವನಕ್ಕೆ ಪುಟ್ಟರಾಜ ಗವಾಯಿಗಳ ಆಶೀರ್ವಾದ ಸಿಕ್ಕಿದೆ. ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ, ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಮತ್ತು ಪಂಚಾಕ್ಷರ ಗವಾಯಿಗಳು ತಮ್ಮ ಅರಿವಿನಿಂದ ಸಮಾಜ ಬೆಳಗಿದ ಯುಗಪುರುಷರು ಎಂದ ಅವರು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಸರ್ಕಾರ ನಾಡಿಗೆ ಗೌರವ ತರುವ ಕೆಲಸ ಮಾಡಿದ್ದು, ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಈ ಇಬ್ಬರೂ ಗುರು-ಶಿಷ್ಯರ ಜನ್ಮದಿನವನ್ನು ಸರ್ಕಾರ ರಾಷ್ಟ್ರೀಯ ಸಂಗೀತ ದಿನವಾಗಿ ಆಚರಿಸಲಿ. ಪ್ರತ್ಯೇಕ ಪ್ರಾಧಿಕಾರ ರಚಿಸಲಿ, ಇತಿಹಾಸ ರಕ್ಷಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಶರಣರ ನಾಡು ಹಾನಗಲ್ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ಸುದೈವ. ಕುಮಾರ ಶಿವಯೋಗಿಗಳು, ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳಿಂದ ಈ ಭೂಮಿ ಪುಣ್ಯಭೂಮಿಯಾಗಿದೆ. ಕಾಡಶೆಟ್ಟಿಹಳ್ಳಿಯಲ್ಲಿ ಸಂಗೀತ ಶಾಲೆ ತೆರೆದರೆ ಸಂಗೀತ ಶಿಕ್ಷಕರ ವೇತನ ವೈಯಕ್ತಿಕವಾಗಿ ನೀಡುವೆ ಎಂದು ಮೊದಲೇ ಹೇಳಿದ್ದು ಆ ಮಾತಿಗೆ ಇಂದಿಗೂ ಬದ್ಧ. ಗ್ರಾಮದಲ್ಲಿ ಯಾತ್ರಿ ನಿವಾಸ ಮತ್ತು ಸಂಗೀತ ಶಾಲೆಗೆ ಅಧಿವೇಶನದಲ್ಲಿಯೂ ಒತ್ತಾಯಿಸಿದ್ದೇನೆ ಎಂದರು.

ಸಮಾರಂಭದಲ್ಲಿ ಪುಟ್ಟರಾಜ ಗವಾಯಿಗಳ ಶಿಷ್ಯ ಡಾ. ವೆಂಕಟೇಶ ಪೂಜಾರ ಅವರಿಗೆ ಕುಮಾರ ಪಂಚಾಕ್ಷರೇಶ್ವರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಂಚಾಕ್ಷರಿ ಗವಾಯಿಗಳ ದೇವಸ್ಥಾನದ ಸಂಗೀತ ಗೋಪುರ ನಿರ್ಮಾಣ ಸಹಾಯಾರ್ಥ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರಿಗೆ ೧೦೫ ಭಕ್ತರು ತುಲಾಭಾರ ನೆರವೇರಿಸಿದರು. ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮುಖಂಡರಾದ ಆನಂದ ಗಡ್ಡದೇವರಮಠ, ಯಾಸೀರಖಾನ ಪಠಾಣ, ಟಾಕನಗೌಡ ಪಾಟೀಲ, ರಾಜಶೇಖರ ಕಟ್ಟೇಗೌಡ್ರ, ವಿಜಯಕುಮಾರ ದೊಡ್ಡಮನಿ, ತಹಸೀಲ್ದಾರ್ ರೇಣುಕಾ ಎಸ್., ನ್ಯಾಯವಾದಿ ಎಸ್.ಎಂ. ಕೋತಂಬರಿ, ಸಾಂವಸಗಿ ಗ್ರಾಪಂ ಅಧ್ಯಕ್ಷೆ ರೇಣುಕಾ ಅಜಗುಂಡಿ, ಪುಟ್ಟಪ್ಪ ನರೇಗಲ್, ಭುವನೇಶ್ವರ ಶಿಡ್ಲಾಪೂರ, ದಾನಪ್ಪಗೌಡ ಪಾಟೀಲ, ಡಾ. ಪ್ರಭುಗೌಡ ಪಾಟೀಲ ಉಪಸ್ಥಿತರಿದ್ದರು.