ಲಿಂಗಾಯತರು ಮೂಲತಃ ಹಿಂದೂಗಳೇ: ಅಲೋಕ್‌ ಕುಮಾರ್‌

| Published : Aug 04 2025, 12:15 AM IST

ಸಾರಾಂಶ

ಲಿಂಗಾಯತರು ಮೂಲತಃ ಹಿಂದೂಗಳೇ ಆಗಿದ್ದಾರೆ. ಬಸವ ತತ್ವದ ಮಾರ್ಗದಲ್ಲಿ ನಡೆಯುತ್ತಿರುವುದಕ್ಕೆ ವಿರೋಧವಿಲ್ಲ. ಆದರೆ ಬರುವ ದಿನಗಳಲ್ಲಿ ನಡೆಯಲಿರುವ ಜನಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸುವಂತೆ ಮನವೊಲಿಸಲು ಲಿಂಗಾಯತ ಧಾರ್ಮಿಕ ಮುಖಂಡರನ್ನು ಭೇಟಿಯಾಗುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್‌ ಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಲಿಂಗಾಯತರು ಮೂಲತಃ ಹಿಂದೂಗಳೇ ಆಗಿದ್ದಾರೆ. ಬಸವ ತತ್ವದ ಮಾರ್ಗದಲ್ಲಿ ನಡೆಯುತ್ತಿರುವುದಕ್ಕೆ ವಿರೋಧವಿಲ್ಲ. ಆದರೆ ಬರುವ ದಿನಗಳಲ್ಲಿ ನಡೆಯಲಿರುವ ಜನಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸುವಂತೆ ಮನವೊಲಿಸಲು ಲಿಂಗಾಯತ ಧಾರ್ಮಿಕ ಮುಖಂಡರನ್ನು ಭೇಟಿಯಾಗುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್‌ ಕುಮಾರ್‌ ತಿಳಿಸಿದರು.

ಅವರು ಭಾನುವಾರ ಹುಮನಾಬಾದ್‌ನ ಮಾಣಿಕನಗರ ಸುಕ್ಷೇತ್ರದಲ್ಲಿ ನಡೆದ ಪರಿಷದ್‌ ಕರ್ನಾಟಕ ಉತ್ತರ ಪ್ರಾಂತ ಬೈಠಕ್‌ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತರು ಜಾತಿಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸುವುದರಿಂದ ಹಿಂದೇಟು ಹಾಕುವುದಕ್ಕೆ ವಿಶ್ವ ಹಿಂದೂ ಪರಿಷತ್‌ ಬೇಸರ ವ್ಯಕ್ತಪಡಿಸುತ್ತದೆ. ಮಹಾತ್ಮ ಬಸವೇಶ್ವರರನ್ನು ನಂಬಿ ಅವರ ದಾರಿಯಲ್ಲಿ ಸಾಗಿ ಮೋಕ್ಷವನ್ನು ಪಡೆಯುವವರು, ಹೃದಯದಲ್ಲಿ ಶಿವನನ್ನು ಅಂತರ್ಗತವಾಗಿ ಪೂಜಿಸುವವರು ಹಿಂದೂಗಳೇ ಆಗಿದ್ದಾರೆ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಹಿಂದೂಗಳನ್ನು ದುರ್ಬಲಗೊಳಿಸುವ ಕುತಂತ್ರ :

ಬಂಗಾಳ, ಜಾರ್ಖಂಡ್‌ನಲ್ಲಿರುವ ಪರಿಶಿಷ್ಟ ಪಂಗಡದ ಜನರಿಗೆ ಹಿಂದೂ ಧರ್ಮದಿಂದ ಬೇರ್ಪಡಿಸುವ ಕುತ್ರಂತ್ರ ನಡೆದಿತ್ತು. ಸಣ್ಣ ಪುಟ್ಟ ಜಾತಿ ಜನಾಂಗದವರಿಗೆ ನೀವು ದೇವರನ್ನು ಪೂಜಿಸುವ ಹಿಂದೂಗಳಲ್ಲ, ಪ್ರಕೃತಿ ಪೂಜಿಸುವವರಾಗಿದ್ದೀರಿ ಹಾಗೆಯೇ ಕರ್ನಾಟಕದಲ್ಲಿರುವ ಬಸವಣ್ಣನವರ ಆರಾಧಕರಿಗೆ ನಿಮ್ಮ ಧರ್ಮವೇ ಬೇರೆಯಿದೆ ಎಂದು ಹೇಳುವ ಮೂಲಕ ಹಿಂದೂಗಳನ್ನು ದುರ್ಬಲಗೊಳಿಸುವ ಕುತಂತ್ರ ಕಾಂಗ್ರೆಸ್‌ನಿಂದ ನಡೆಸಲಾಗುತ್ತಿದೆ ಎಂದು ದೂರಿದರು.

ಮಂದಿರಗಳನ್ನು ಹಿಂದೂಗಳಿಗೆ ನೀಡಿ, ಎಸ್‌ಸಿ, ಎಸ್‌ಟಿ ಸೇರಿ ಒಗ್ಗಟ್ಟಾಗೋಣ :

ಸರ್ಕಾರಗಳು ಗುರುದ್ವಾರ, ಮಸೀದಿ ಅಥವಾ ಚರ್ಚ್‌ಗಳನ್ನು ನಡೆಸುತ್ತಿಲ್ಲ ಆದರೆ ಮಂದಿರಗಳನ್ನು ನಡೆಸುತ್ತಿದ್ದು, ಅದರ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ಹಾಕಿಕೊಳ್ಳುತ್ತಿವೆ ಅದನ್ನು ಹಿಂದೂ ಸಮಾಜದ ಅಭಿವೃದ್ಧಿಗಾಗಿ ಬಳಸೋಲ್ಲ ಎಂಬುವುದನ್ನು ಮನವರಿಕೆ ಮಾಡುತ್ತೇವೆ, ಹಿಂದೂ ಮಂದಿರಗಳನ್ನು ಹಿಂದೂ ಸಮಾಜಕ್ಕೆ ವಾಪಸ್‌ ಕೊಡುವಂತೆ ವಿಶ್ವ ಹಿಂದೂ ಪರಿಷತ್‌ ಬರುವ ಸೆಪ್ಟೆಂಬರ್‌ 2ರಿಂದ ದೇಶದ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಅದಕ್ಕಾಗಿ ಬೃಹತ್‌ ಸಮಾವೇಶಗಳನ್ನು ಮಹಾನಗರಗಳಲ್ಲಿ ಆಯೋಜಿಸಿ ಜನರನ್ನು ಜಾಗೃತಗೊಳಿಸುತ್ತೇವೆ ಎಂದರು.

ಮಂದಿರಗಳನ್ನು ಹಿಂದೂಗಳಿಗೆ ವಾಪಸ್‌ ಕೊಡಿಸುವುದು ಅಂದಾಕ್ಷಣ ಬ್ರಾಹ್ಮಣರಿಗೆ ಪುನಃ ದೇವಸ್ಥಾನಗಳ ಚುಕ್ಕಾಣಿ ಕೊಡಿಸುವ ಚಿಂತನೆಯಿಂದ ಕೂಡಿದ್ದು ಅಲ್ಲವೇ ಅಲ್ಲ. ನಮ್ಮ ಪರಿಷತ್‌ ಪ್ರತಿಯೊಂದು ದೇವಸ್ಥಾನಕ್ಕೆ ಪ್ರತ್ಯೇಕ ಟ್ರಸ್ಟ್‌ ರಚಿಸಬೇಕು. ಅಲ್ಲಿ ಪರಿಶಿಷ್ಟ ಜಾತಿ, ಮಹಿಳೆ ಹಾಗೂ ಆ ಸ್ಥಳದಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಿದ್ದರೆ ಅವರಲ್ಲೊಬ್ಬರ ಪ್ರತಿನಿಧಿತ್ವವನ್ನು ಸೇರಿಸಿಕೊಳ್ಳುವದರ ಜೊತೆಗೆ ಒಟ್ಟಾರೆ ಭಾರತೀಯ ಹಿಂದೂ ಸಮುದಾಯ ಪ್ರತಿನಿಧಿಸುವಂತಿರಬೇಕು ಎಂಬ ಕಲ್ಪನೆ ನಮ್ಮದು ಎಂದರು.

ಮಾಲೇಗಾಂವ್‌ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್‌ ಹಾಗೂ ಹಿಂದುತ್ವವಾದಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಅಟ್ಟುವ ಯತ್ನವನ್ನು ಅಲ್ಲಿನ ಕಾಂಗ್ರೆಸ್‌ ಸರ್ಕಾರ ಮಾಡಿರುವ ಕುರಿತು ನಾವೀಗಾಗಲೇ ಹೇಳಿಕೆ ನೀಡಿದ್ದೇವೆ. ವಾರೆಂಟ್‌ ರಹಿತವಾಗಿ ಬಂಧಿಸಲಾಯಿತು, ಸಾಕ್ಷಿಗಳನ್ನು ಬೆದರಿಸಿ, ಹೊಡೆದು ಚಾರ್ಜ್‌ಶೀಟ್‌ ಕೋರ್ಟ್‌ಗೆ ಸಲ್ಲಿಸಲಾಗಿತ್ತು, ಕಾಂಗ್ರೆಸ್‌ ಕುತಂತ್ರ ಬಟಾಬಯಲಾಗಿದೆ ಎಂದು ಆರೋಪಿಸಿದರು.

ಮ್ಯಾಚ್‌ ಸೋತಾಗ ಅಂಪೈರನತ್ತ ಬೊಟ್ಟು ಮಾಡುವ ಜಾಯಮಾನ ರಾಹುಲ್‌ನದ್ದು :

ರಾಹುಲ್‌ ಗಾಂಧಿ ಚುನಾವಣಾ ಆಯೋಗ ಮತ್ತು ಮತಯಂತ್ರದ ಬಗ್ಗೆ ಮಾತನಾಡುವುದು ಪಂದ್ಯದಲ್ಲಿ ಸೋಲುಂಡ ನಂತರ ಅಂಪೈರ್‌ನತ್ತ ಬೊಟ್ಟು ಮಾಡುವ ಜಾಯಮಾನದಂತೆ ಕಾಣ್ತದೆ. ನ್ಯಾಯಾಲಯದಲ್ಲಿಯೂ ಮತಯಂತ್ರಗಳ ನೈಜತೆ ಸಾಬೀತಾಗಿದೆ. ಇದೀಗ ಚುನಾವಣೆಯಲ್ಲಿ ಸೋಲುಂಡು ಆಯೋಗದತ್ತ ಬೊಟ್ಟು ಮಾಡುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಇಲ್ಲಿಗೆ ಬಂದು ನೆಲೆಸಿರುವ ವಿದೇಶಿಗರ ಹೆಸರಗಳನ್ನು ಮತದಾರರ ಪಟ್ಟಿಯಲ್ಲಿ ಪತ್ತೆ ಹಚ್ಚಿ ತೆಗೆದುಹಾಕಬೇಕೆಂದು ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್‌ ಕುಮಾರ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್‌ ಉತ್ತರ ಪ್ರಾಂತ ಅಧ್ಯಕ್ಷರಾದ ಲಿಂಗರಾಜ ಅಪ್ಪ, ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಹಾಗೂ ಮುಖಂಡರಾದ ಸುನೀಲ ಇದ್ದರು.