ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಅವಶ್ಯಕ

| Published : Oct 05 2025, 01:00 AM IST

ಸಾರಾಂಶ

ಲಿಂಗಾಯತ ಧರ್ಮವು ತನ್ನದೇ ಆದ ಆಚರಣೆ, ನಂಬಿಕೆ, ತತ್ವಶಾಸ್ತ್ರ ಹೊಂದಿರುವ ಪ್ರತ್ಯೇಕ ಧರ್ಮ. ಆದರೆ ಇನ್ನೂ ಹಿಂದೂ ಧರ್ಮದ ಅಂಗವೆಂದು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗದೆ ಅನ್ಯಾಯವಾಗಿದೆ. ನಮ್ಮ ಹೋರಾಟವು ಯಾವ ಧರ್ಮ, ಜಾತಿ ಅಥವಾ ಪಕ್ಷದ ವಿರುದ್ಧವಲ್ಲ. ಇದು ಸಮಾಜದ ಹಕ್ಕುಗಳನ್ನು ಪಡೆಯುವ ಹೋರಾಟ ಎಂದು ಸ್ಪಷ್ಟಪಡಿಸಲಾಗಿದೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳಿಗೆ ಶೇ.50 ಮೀಸಲಾತಿ, ವಿದ್ಯಾರ್ಥಿವೇತನ ಹಾಗೂ ಶುಲ್ಕ ವಿನಾಯ್ತಿ, ಬಡ ಕುಟುಂಬಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ಸಾಲ, ಸಬ್ಸಿಡಿ ಹಾಗೂ ಉದ್ಯೋಗ ತರಬೇತಿ, ಮಠ, ಮಂದಿರ, ಗದ್ದುಗೆಗಳ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಬಸವಣ್ಣನವರ ತತ್ವಗಳಿಂದ ಹುಟ್ಟಿಕೊಂಡು 900 ವರ್ಷಗಳ ಇತಿಹಾಸ ಹೊಂದಿರುವ ಲಿಂಗಾಯತ ಧರ್ಮಕ್ಕೆ ಇನ್ನೂ ಸ್ವಾತಂತ್ರ್ಯ ಧರ್ಮದ ಮಾನ್ಯತೆ ದೊರಕಿಲ್ಲ. ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ಭಾರತ ಸರ್ಕಾರ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಿ ವಿಶೇಷ ಸೌಲಭ್ಯಗಳನ್ನು ಒದಗಿಸಿದರೂ, ಲಿಂಗಾಯತರಿಗೆ ಅದೇ ನ್ಯಾಯ ದೊರಕದಿರುವುದು ಬೇಸರದ ವಿಷಯ ಎಂದು ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ಭೂವನಾಕ್ಷ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಧರ್ಮವು ತನ್ನದೇ ಆದ ಆಚರಣೆ, ನಂಬಿಕೆ, ತತ್ವಶಾಸ್ತ್ರ ಹೊಂದಿರುವ ಪ್ರತ್ಯೇಕ ಧರ್ಮ. ಆದರೆ ಇನ್ನೂ ಹಿಂದೂ ಧರ್ಮದ ಅಂಗವೆಂದು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗದೆ ಅನ್ಯಾಯವಾಗಿದೆ. ನಮ್ಮ ಹೋರಾಟವು ಯಾವ ಧರ್ಮ, ಜಾತಿ ಅಥವಾ ಪಕ್ಷದ ವಿರುದ್ಧವಲ್ಲ. ಇದು ಸಮಾಜದ ಹಕ್ಕುಗಳನ್ನು ಪಡೆಯುವ ಹೋರಾಟ ಎಂದು ಸ್ಪಷ್ಟಪಡಿಸಲಾಗಿದೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳಿಗೆ ಶೇ.50 ಮೀಸಲಾತಿ, ವಿದ್ಯಾರ್ಥಿವೇತನ ಹಾಗೂ ಶುಲ್ಕ ವಿನಾಯ್ತಿ, ಬಡ ಕುಟುಂಬಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ಸಾಲ, ಸಬ್ಸಿಡಿ ಹಾಗೂ ಉದ್ಯೋಗ ತರಬೇತಿ, ಮಠ, ಮಂದಿರ, ಗದ್ದುಗೆಗಳ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯ ಎಂದರು.

ಬಸವಣ್ಣನವರ ಮಾನವೀಯ ತತ್ವಗಳನ್ನು ಪಾಠ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಕಲಿಸುವ ಅವಕಾಶಬೇಕು. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ದೇಶದ ಐಕ್ಯತೆಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಬಸವಣ್ಣನವರ ತತ್ವಗಳು ಮಾನವ ಘನತೆ, ಸಮಾನತೆ, ಕಾಯಕದ ಮಹತ್ವ, ದಾಸೋಹ, ವಿಶ್ವಬಾಂಧವ್ಯ ಇವೆಲ್ಲ ಜಗತ್ತಿನ ಮಟ್ಟದಲ್ಲಿ ಪ್ರಸಾರವಾಗಿ ಭಾರತದ ಹೆಮ್ಮೆ ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಧಾರ್ಮಿಕ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆಗಳು ಸಾಧ್ಯವೆಂದು ಲಿಂಗಾಯತ ಮಹಾಸಭೆ ತಿಳಿಸಿದೆ. ಮಹಾಸಭೆಯ ಪ್ರಕಾರ ಪಂಚಚಾರ್ಯರು ಹಾಗೂ ವೈದಿಕ ಪುರೋಹಿತಶಾಹಿಯು ಬಸವಧರ್ಮವನ್ನು ನಾಶಪಡಿಸಲು ಹಲವಾರು ಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ. ಆದರೆ ಕೆಲವು ವಿಕೃತಿಗಳು ಹುಟ್ಟಿಕೊಂಡಿವೆ. ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ಆ ವಿಕೃತಿಗಳನ್ನು ಸರಿಪಡಿಸಿ, ಬಸವ ತತ್ವಗಳನ್ನು ಸಮರ್ಥವಾಗಿ ರಕ್ಷಿಸಿ ಬೆಳೆಸುವ ಅವಕಾಶ ಸಿಗುತ್ತದೆ. ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಧಾರ್ಮಿಕ ವಿಷಯಗಳನ್ನು ಮುಂದಿನ ಪೀಳಿಗೆಗೆ ಬೋಧಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಲಿಂಗಾಯತ ಮಠ, ಮಂದಿರ, ಗದ್ದುಗೆ, ಯಾತ್ರಾಸ್ಥಳ, ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ರಕ್ಷಿಸಿ, ಅವುಗಳ ಅಭಿವೃದ್ಧಿಗೆ ಸರ್ಕಾರದ ನೆರವು ದೊರಕುತ್ತದೆ. ಇವುಗಳ ಸಂರಕ್ಷಣೆ ಸರ್ಕಾರದ ಹೊಣೆಗಾರಿಕೆಯಾಗುತ್ತದೆ.ಲಿಂಗಾಯತ ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರದ ನೇರ ಹಸ್ತಕ್ಷೇಪಕ್ಕೆ ಹೆಚ್ಚು ಅವಕಾಶವಿರುವುದಿಲ್ಲವೆಂದು ಮಹಾಸಭೆ ತಿಳಿಸಿದೆ. ಲಿಂಗಾಯತ ಸ್ವತಂತ್ರ ಧರ್ಮವೆಂಬ ಮಾನ್ಯತೆ ದೊರೆತರೆ ಶರಣರ ತತ್ವಗಳು ವೈಜ್ಞಾನಿಕ ಮನೋಭಾವ, ಮಾನವ ಘನತೆ, ಸಮಾನತೆ, ತಾರ್ಕಿಕ ಚಿಂತನೆ, ಕಾಯಕದ ಮಹತ್ವ, ದಾಸೋಹ, ವಿಶ್ವಬಾಂಧವ್ಯ ಇವುಗಳ ಪ್ರಚಾರದಿಂದ ಬಸವ ಧರ್ಮವು ಜಗತ್ತಿನ ಮಟ್ಟದಲ್ಲಿ ಗೌರವ ಪಡೆದು ವಿಶ್ವ ಮಾನ್ಯವಾಗುತ್ತದೆ ಎಂದು ಮಹಾಸಭೆಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಲತೇಶ್ ಕುಮಾರ್, ವೀರಶೈವ ಜಾಗತಿಕ ಲಿಂಗಾಯಿತ ಸಂಘದ ಅಧ್ಯಕ್ಷ ಒಂಬೇಶ್ ಇತರರು ಉಪಸ್ಥಿತರಿದ್ದರು.