ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಮುಂದಿನ 24 ತಿಂಗಳಲ್ಲಿ ಕುಣಿಗಲ್‌ನ ನೀರಿನ ಸಮಸ್ಯೆ ಬಗೆಹರಿಸುವ ವಿಶೇಷ ಯೋಜನೆ ಲಿಂಕ್ ಕೆನಾಲ್ ಮಹತ್ವದ ಯೋಜನೆಯ ಬಗ್ಗೆ ಶಾಸಕರ ಆಶಯದಂತೆ ಮಾಡಲಾಗುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.ತಾಲೂಕಿನ ಸಂತೆ ಮಾವತ್ತೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಂದಿರುವ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಶೀಘ್ರ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಆದರೆ ಹಲವು ಪ್ರಕರಣಗಳು ನ್ಯಾಯಾಲಯದ ಸಮಸ್ಯೆಯಿಂದ ಬಗೆಹರಿದಿಲ್ಲ. ಬಗರ್ ಹುಕುಂ ಸಮಿತಿ ಸದ್ಯದಲ್ಲೇ ಪ್ರಾರಂಭಿಸುತ್ತೇವೆ. ಭೂಮಿ ಮಂಜೂರಾತಿ ನಂತರ ಎಲ್ಲ ದಾಖಲಾತಿಗಳನ್ನು ನಮ್ಮ ಅಧಿಕಾರಿಗಳು ಮಾಡಿಕೊಡುತ್ತಾರೆ. ಆದರೆ ತಹಸೀಲ್ದಾರ್ ಕಚೇರಿಯಲ್ಲಿ ಬಹುತೇಕ ದಾಖಲಾತಿಗಳು ಕಾಣುತ್ತಿಲ್ಲ ಎಂದರು.ನಾನು ತಹಸೀಲ್ದಾರ್ ಕಚೇರಿಯಿಂದ ಯಾವುದೇ ದಾಖಲಾತಿ ಕನಕಪುರಕ್ಕೆ ತೆಗೆದುಕೊಂಡು ಹೋಗಿಲ್ಲ. ಅವಕಾಶ ಸಿಕ್ಕರೆ ವಿರೋಧ ಪಕ್ಷದವರು ನನ್ನ ಮೇಲೆ ಆರೋಪ ಮಾಡಬಹುದು ಎಂದರು. ದಾಖಲಾತಿ ಪರಿಶೀಲಿಸಲು ತಹಸೀಲ್ದಾರ್ ಜೊತೆ ಚರ್ಚಿಸಿ ಮುಂದಿನ ಕ್ರಮ ಜರುಗಿಸುತ್ತೇವೆ. ಕೆಲಸ ಮಾಡಲು ಕಷ್ಟ ಆದರೆ ತಹಸೀಲ್ದಾರ್ ಬೇರೆಡೆಗೆ ಹೋಗಲಿ ಎಂದರು.
ಇಲ್ಲಿನ ಸುತ್ತಮುತ್ತ ಅರಣ್ಯ ಇಲಾಖೆ ವಿಚಾರವಾಗಿ ಸಮಸ್ಯೆಗಳಿವೆ ಈ ಬಗ್ಗೆ ಜಿಲ್ಲಾ ಅರಣ್ಯಾಧಿಕಾರಿಗಳ ಜೊತೆ ಮಾತನಾಡುತ್ತೇನೆ, ಮೈಸೂರಿಂದ ವಿಶೇಷ ಸರ್ವೆ ಅಧಿಕಾರಿಗಳನ್ನು ಕರೆಸಿ ಪ್ರತಿಯೊಂದು ಗ್ರಾಮದ ಅರಣ್ಯ ಪ್ರದೇಶ ಸರ್ವೆ ಮಾಡಿ ರೈತರ ಖಾತೆ ಹಾಗೂ ನಿವೇಶನದ ಈ ಖಾತೆ ಮಾಡಿಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು.ನಿವೇಶನಕ್ಕೆ ಸಂಬಂಧಿಸಿದಂತೆ 260 ಎಕರೆ ಪ್ರದೇಶವನ್ನು ಕುಣಿಗಲ್ ತಾಲೂಕಲ್ಲಿ ಗುರುತಿಸಿ ಮಂಜೂರಾತಿಗೆ ಕಳುಹಿಸಲಾಗಿದೆ. 160 ಎಕ್ಕರೆ ಇನ್ನು ಬಾಕಿ ಇದೆ. ಮುಂದಿನ ದಿನಗಳಲ್ಲಿ ಬಡವರಿಗೆ 10 ಸಾವಿರ ಉಚಿತ ನಿವೇಶನ ನೀಡುವ ತಯಾರಿ ಇದೆ ಎಂದರು.
ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷದಿಂದ ಮನೆಗಳ ವಿತರಣೆ ಕಾರ್ಯ ಸಂಪೂರ್ಣ ಆಗಿಲ್ಲ. ಈಗಾಗಲೇ 1000 ಮನೆಗಳಿಗೆ ಮಂಜೂರಾತಿಯಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 70 ಮನೆಗಳನ್ನು ನೀಡುವ ಚಿಂತನೆ ಇದೆ ಎಂದರು. ತಾಲೂಕಿನಲ್ಲಿ ಭರದ ಛಾಯೆಯಿಂದ ಕುಡಿಯುವ ನೀರಿನ ಸಮಸ್ಯೆ, ಸೇರಿದಂತೆ ಇತರ ಸಮಸ್ಯೆಗಳನ್ನು ಸಮರ್ಪಕವಾದ ರೀತಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.ರಾಜ್ಯದಲ್ಲಿ ಬಿಜೆಪಿಯವರು ಒಂದೇ ಒಂದು ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕೊಟ್ಟಿಲ್ಲ. ಇದೀಗ 500 ಜನರಿಗೆ ಪ್ರತ್ಯೇಕವಾಗಿ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಕಾರ್ಯ ಪ್ರಾರಂಭ ಆಗುತ್ತಿದೆ ಎಂದರು.
ವಿದ್ಯುತ್ ಸಮರ್ಪಕ ವಿತರಣೆಗೆ ಸೋಲಾರ್ ಪಾರ್ಕ್ ಕುಣಿಗಲ್ ನಲ್ಲಿ 20 ರಿಂದ 60 ಮೆಗಾ ವ್ಯಾಟ್ ಉತ್ಪಾದನೆಗೆ ಗುರಿ ಹೊಂದಲಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ. ರಾಜ್ಯದಲ್ಲಿ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿಕ್ಕೆ ಸರ್ಕಾರ ತಯಾರಾಗಿದ್ದು ಹುಲಿಯೂರುದುರ್ಗದ ಹತ್ತಿರ 50 ಎಕರೆ ಮಂಜೂರಾತಿ ಮಾಡಿದ್ದು ಸಂಪೂರ್ಣ ಕುಣಿಗಲ್ ಗೆ ವಿದ್ಯುತ್ ಸರಬರಾಜು ಆಗಲಿದೆ ಎಂದರು.ಕುದುರೆ ಫಾರಂ ನಾವು ಏನು ಮಾಡುವುದಿಲ್ಲ. ನಾವು ಕುದುರೆಯನ್ನು ಓಡಿಸುವುದಿಲ್ಲ. ಕೆಲವರು ರಾಜಕೀಯದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾಕ್ಟರ್ ರಂಗನಾಥ್, ತಹಸೀಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೋಸೆಫ್, ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.