ಮಣ್ಣಲ್ಲಿ ಸುರಿದು ಮದ್ಯ ನಾಶದ ಅಬಕಾರಿ ಅಧಿಕಾರಿಗಳು

| Published : Dec 11 2023, 01:15 AM IST

ಸಾರಾಂಶ

ಲಕ್ಷಾಂತರ ಮೌಲ್ಯದ ಮದ್ಯ ನಾಶ

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಭಾನುವಾರ ನಗರದ ಹೊರವಲಯದಲ್ಲಿ ನಾಶ ಪಡಿಸಿದರು.

ನಗರದ ಬಸವನಕೊಳ್ಳ ವ್ಯಾಪ್ತಿಯಲ್ಲಿ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಅಬಕಾರಿ ಸಿಬ್ಬಂದಿ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯವನ್ನು ಸುರಿಯುವ ಮೂಲಕ ನಾಶ ಪಡಿಸಿದರು. ನಾಶ ಪಡಿಸಿದ ಮದ್ಯದಲ್ಲಿ ವಿಸ್ಕಿ, ಬ್ರಾಂಡಿ, ರಮ್‌ ಹಾಗೂ ಬಿಯರ್ ಕಳ್ಳಬಟ್ಟಿ ಸೇರಿದಂತೆ ಹಲವು ಮಾದರಿಯ ಮದ್ಯಗಳಿದ್ದವು. ಚುನಾವಣೆ ವೇಳೆ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆ ವಾಪ್ತಿಯಲ್ಲಿ 5148 ಲೀಟರ್ ಮದ್ಯ, 566 ಲೀಟರ್ ಬಿಯರ್ , 1588 ಕಳ್ಳಬಟ್ಟಿ ಸಾರಾಯಿ, 141 ಲೀಟರ್‌ ಗೋವಾ ಮದ್ಯವನ್ನು 254 ಪ್ರಕರಣಗಳಲ್ಲಿ ವಶಕ್ಕೆ ಪಡೆದು ಮುಟ್ಟಗೋಲು ಜಪ್ತಿ ಮಾಡಿಲಾಗಿತ್ತು. ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಬೆಳಗಾವಿ ಸಮೀಪದ ಬಸವನಕೊಳ್ಳ ವ್ಯಾಪ್ತಿಯಲ್ಲಿ ಗುಂಡಿ ತೆಗೆದು ಅದಕ್ಕೆ ಬಾಟಲಿಯಲ್ಲಿ ಹಾಗೂ ಪೌಚ್‌ಗಳಲ್ಲಿದ್ದ ಮದ್ಯವನ್ನು ಸುರಿದು ಬಳಿಕ ಮಣ್ಣು ಮುಚ್ಚಲಾಯಿತು. ಇನ್ನು ಮದ್ಯದ ಕವರ್, ಪೌಚ್ ಗಳನ್ನು ಬೆಂಕಿ ಹಾಕಿ ಸುಟ್ಟು ನಾಶ ಮಾಡಲಾಯಿತು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದರು.

ಅಬಕಾರಿ ಉಪ ಆಯುಕ್ತೆ ಎಂ.ವನಜಾಕ್ಷಿ, ಉಪ ಆಯುಕ್ತ ಕೆ. ಅರುಣಕುಮಾರ ಅವರು ಹಾಗೂ ಜಿಲ್ಲಾ ಎಲ್ಲಾ ವಲಯದ ನಿರೀಕ್ಷಕರ , ಉಪ ನಿರೀಕ್ಷಕರ ಸಮ್ಮುಖದಲ್ಲಿ ನಾಶಪಡಿಸಲಾಯಿತು.