ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು

| Published : Sep 01 2024, 01:45 AM IST

ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬಾರ್‌ಗಳಿಗೆ ಬರುವ ಗಿರಾಕಿಗಳೊಂದಿಗೆ ಮಾಲೀಕರು ಸೌಜನ್ಯದಿಂದ ವರ್ತಿಸುವ ಬದಲು ಭಿಕಾರಿಗಳಿಂತೆ ನೋಡುತ್ತಿರುವುದು ದುರಂತದ ಸಂಗತಿಯಾಗಿದೆ

ಅಶೋಕ ಸೊರಟೂರ ಲಕ್ಷ್ಮೇಶ್ವರ

ಪಟ್ಟಣದ ಸವಣೂರ ರಸ್ತೆಯಲ್ಲಿರುವ ಪೂಜಾ ಬಾರ್ ಮತ್ತು ಲಾಡ್ಜಿಂಗ್‌ನಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತ ಜನರನ್ನು ಸುಲಿಗೆ ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಪಟ್ಟಣದ ಪೂಜಾ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಬೇಕಾಬಿಟ್ಟಿ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಡಿಎಸ್‌ಪಿ ಬ್ಲ್ಯಾಕ್ ಕ್ವಾರ್ಟರ್ ಬಾಟಲ್ ಒಂದಕ್ಕೆ ಎಂಆರ್‌ಪಿ ₹ 210 ಇದ್ದರೆ ಬಾರ್ ಮಾಲೀಕರು ₹ 230 ತೆಗೆದುಕೊಳ್ಳುವ ಮೂಲಕ ಗ್ರಾಹಕರ ಸುಲಿಗೆ ಮಾಡುವ ಕಾರ್ಯಕ್ಕೆ ಕೈ ಹಾಕಿದೆ.

ಬಿಯರ್ ಬಾಟಲ್‌ಗಳಿಗೆ ₹260 ಇದ್ದರೆ ₹ 290-300 ತೆಗೆದುಕೊಳ್ಳುತ್ತಿದ್ದಾರೆ. 100 ಪೈಪರ್‌ ಬಾಟಲ್‌ಗೆ ಕನಿಷ್ಠ ₹20-40 ಹೆಚ್ಚಿಗೆ ತೆಗೆದುಕೊಂಡು ಹಗಲು ದರೋಡೆ ಮಾಡುತ್ತಿದ್ದರೂ ಯಾರೂ ಕೇಳುವಂತಿಲ್ಲ. ಪ್ರತಿನಿತ್ಯ ನಿಗದಿತ ದರಕ್ಕೆ ಮದ್ಯ ಮಾರಾಟ ಮಾಡಿದಲ್ಲಿ ಲಕ್ಷಾಂತರ ಆದಾಯ ಗಳಿಸುವ ಬಾರ್ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ.

ಬಾರ್‌ಗಳಿಗೆ ಬರುವ ಗಿರಾಕಿಗಳೊಂದಿಗೆ ಮಾಲೀಕರು ಸೌಜನ್ಯದಿಂದ ವರ್ತಿಸುವ ಬದಲು ಭಿಕಾರಿಗಳಿಂತೆ ನೋಡುತ್ತಿರುವುದು ದುರಂತದ ಸಂಗತಿಯಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಎಲ್ಲ ಗೊತ್ತಿದ್ದರೂ ಮೌನಕ್ಕೆ ಶರಣಾಗಿರುವುದು ನೋವಿನ ಸಂಗತಿಯಾಗಿದೆ. ಯಾಕೆಂದರೆ ಬಾರ್ ಮಾಲೀಕರಿಗೆ ಇಲಾಖೆಯ ಅಧಿಕಾರಿಗಳು ಎಂದರೆ ಕಾಲ ಕಸವಾಗಿ ನೋಡುತ್ತಿದ್ದಾರೆ. ಯಾರಾದರೂ ಪ್ರಶ್ನಿಸಿದರೆ ಅವರನ್ನು ಹೆದರಿಸುವ ಕಾರ್ಯ ಬಾರ್ ಮಾಲೀಕರು ಹಣದ ಮದ ತೋರಿಸುವ ಮೂಲಕ ಯಶಸ್ವಿಯಾಗಿ ಮಾಡುತ್ತಿದ್ದಾರೆ.

ನಾವು ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ದರ ತೆಗೆದುಕೊಳ್ಳುತ್ತೇವೆ. ಇಲ್ಲವಾದಲ್ಲಿ ಬಾರ್ ನಡೆಸುವುದು ಕಷ್ಟಸಾಧ್ಯ. ನೀವು ಯಾರಿಗೆ ಬೇಕಾದರೂ ಹೇಳಿ, ನಾವು ಮಾತ್ರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿಗೆ ತೆಗೆದುಕೊಳ್ಳುತ್ತೇವೆ ಎಂದು ಪೂಜಾ ಬಾರ್ ಮಾಲೀಕ ವಿಜಯ ತಿಳಿಸಿದ್ದಾರೆ.

ಗ್ರಾಹಕರು ಕಂಪ್ಲೇಂಟ್ ಕೊಟ್ಟರೆ ಬಾರ್ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಅಬಕಾರಿ ಇಲಾಖೆ ಅಧಿಕಾರಿ ಸಂತೋಷ ರೆಡ್ಡಿ ಹೇಳಿದರು.