ಬಾಕಿ ಉಳಿದಿರುವ ಕಾಮಗಾರಿಗಳ ಯಾದಿ ನೀಡಿ: ಪ್ರಿಯಾಂಕ್ ಖರ್ಗೆ

| Published : Sep 10 2024, 01:47 AM IST

ಬಾಕಿ ಉಳಿದಿರುವ ಕಾಮಗಾರಿಗಳ ಯಾದಿ ನೀಡಿ: ಪ್ರಿಯಾಂಕ್ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯಲ್ಲಿ 17ರಂದು ಸಚಿವ ಸಂಪುಟ ಸಭೆ ಹಿನ್ನೆಲೆ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆಯಲ್ಲಿ ಈ ಬಾರಿ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಯುತ್ತಿರುವುದರಿಂದ ಈ ಭಾಗದ ಪ್ರಸ್ತಾವನೆಗಳ ಅನುಮೋದನೆ ನೀಡಲು ಸರ್ಕಾರ ಉತ್ಸುಕವಾಗಿದೆ. ಪ್ರದೇಶದ ಅಭಿವೃದ್ಧಿಗೂ ಈ ಸಭೆ ಸುವರ್ಣಾವಕಾಶವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ದಶಕಗಳ ಬಳಿಕ ಕಲಬುರಗಿಯಲ್ಲಿ ಸೆ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ‌ ಸಭೆ ನಡೆಯಲಿದ್ದು, ಸರ್ಕಾರದ‌ ಹಂತದಲ್ಲಿ ಪ್ರದೇಶದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಬಾಕಿ ಇದ್ದಲ್ಲಿ ಇಂದೇ ಡಿಸಿಗೆ ಸಲ್ಲಿಸಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಚಿವ‌ ಸಂಪುಟ ಸಭೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕ-ಸಂಸದರು ಹಾಗೂ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಪುಟ ಸಭೆ ಕಲಬುರಗಿಯಲ್ಲಿ ನಡೆಯುತ್ತಿರುವುದರಿಂದ ಈ ಭಾಗದ ಪ್ರಸ್ತಾವನೆಗಳ ಅನುಮೋದನೆ ನೀಡಲು ಸರ್ಕಾರ ಉತ್ಸುಕವಾಗಿದೆ. ಪ್ರದೇಶದ ಅಭಿವೃದ್ಧಿಗೂ ಈ ಸಭೆ ಸುವರ್ಣಾವಕಾಶವಾಗಿದೆ ಎಂದರು.

ಮಂಗಳವಾರ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆ ಡಿಸಿ ಸರ್ಕಾರದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಿಲಿದ್ದಾರೆ. ಸಂಪುಟ ಸಭೆಯ ಗಾಂಭೀರ್ಯ ಅರಿತು ಕೂಡಲೆ ಇಲಾಖಾವಾರು ಆಯಾ ಅಧಿಕಾರಿಗಳು ಬಾಕಿ ಪ್ರಸ್ತಾವನೆ ಬಗ್ಗೆ ಮಾಹಿತಿ ನೀಡಿದಲ್ಲಿ ಅದನ್ನು ಸಚಿವ ಸಂಪುಟ ಮುಂದಿಟ್ಟು‌ ಅನುಮೋದನೆ ಪಡೆಯಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕರು ಹೊಸ ಯೋಜನೆಗಳ ಘೋಷಣೆಗಳ ಬಗ್ಗೆ ಪ್ರಸ್ತಾವನೆ ಕೊಟ್ಟಿದಲ್ಲಿ ಅದನ್ನು ಸಹ ಸರ್ಕಾರದ‌ ಮುಂದಿಡಲಾಗುವುದು ಎಂದ ಸಚಿವರು, ಇಲಾಖಾವಾರು ಸರ್ಕಾರದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ ಮಾಹಿತಿ ಪಡೆದರು.

ಸಂಪುಟ ಸಭೆ ಯಶಸ್ಸಿಗೆ ಶ್ರಮಿಸಿ:

ದಶಕಗಳ ಬಳಿಕ ಕಲಬುರಗಿಯಲ್ಲಿ ಸಚಿವ‌ ಸಂಪುಟ ಸಭೆ ನಡೆಯುತ್ತಿದ್ದು, ಜನರ ನಿರೀಕ್ಷೆಯಂತೆ ಪ್ರದೇಶ ಅಶೋತ್ತರಗಳನ್ನು ಈಡೇರಿಸುವ ಪ್ರಮುಖ ಸಭೆ ಇದಾಗಿದೆ. ಸಿ.ಎಂ. ಸೇರಿ ಇಡೀ ಸಂಪುಟ ಸದಸ್ಯರು, ಹಿರಿಯ ಅಧಿಕಾರಿಗಳು ಸೇರಿ ಇಡೀ ಸರ್ಕಾರವೇ ಕಲಬುರಗಿಯತ್ತ ಬರುವುದರಿಂದ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಬೇಕು. ಸಚಿವರು, ಹಿರಿಯ ಅಧಿಕಾರಿಗಳಿಗೆ ಶಿಷ್ಟಾಚಾರದಂತೆ ಸರಿಯಾಗಿ ಉಪಚಾರ ಮಾಡಬೇಕು ಎಂದು ಸೂಚಿಸಿದರು.

ಸಿ.ಎಂ.ಸೇರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಕಲಬುರಗಿ ನಗರದಾದ್ಯಂತ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು. ಸಚಿವರು, ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸೆ.15 ರಿಂದ 17ರ ವರೆಗೆ ನಗರದಾದ್ಯಂತ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಬೇಕು. ಕಲ್ಯಾಣ‌ ಕರ್ನಾಟಕ ಉತ್ಸವ ದಿನದಂದು ಪೊಲೀಸ್ ಪರೇಡ್ ಮೈದಾನದಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಿಎಂ ಸಲಹೆಗಾರರು ಮತ್ತು ಆಳಂದ ಶಾಸಕ ಬಿ‌.ಆರ್.ಪಾಟೀಲ, ಶಾಸಕ ಡಾ.ಅಜಯ್ ಸಿಂಗ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಎಂ.ವೈ.ಪಾಟೀಲ, ಎಂಎಲ್ಸಿ ಶಶಿಲ್‌ ನಮೋಶಿ, ಬಿ.ಜಿ.ಪಾಟೀಲ, ಚಂದ್ರಶೇಖರ‌ ಪಾಟೀಲ ಹುಮನಾಬಾದ, ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಮಜಹರ್ ಆಲಂ ಖಾನ್, ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ್, ಜಿಪಂ ಸಿಇಒ ಭಂವಾರ್ ಸಿಂಗ್ ಮೀನಾ, ಇತರ ಅಧಿಕಾರಿಗಳು ಇದ್ದರು.