ಸಾರಾಂಶ
ಮಂಡ್ಯ: ಪ್ರತಿಯೊಬ್ಬರೂ ತಮ್ಮ ಜೀವನದ ಜಂಜಾಟದಿಂದ ಮುಕ್ತರಾಗಲು ಸಂಗೀತವನ್ನು ಕೇಳಬೇಕು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಸಲಹೆ ನೀಡಿದರು. ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಾಧಕರಿಗೆ ಅಭಿನಂದನೆ, ವೃತ್ತಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮನೋರೋಗವನ್ನು ಗುಣಪಡಿಸುವ ಔಷಧಿಯು ಸಂಗೀತ ಕೇಳುವುದರಲ್ಲಿ ಇರುತ್ತದೆ. ಯಾವುದೇ ಭಾಷೆಯ ಸಂಗೀತವನ್ನು ಆಲಿಸಿ ಮನಸಿಗೆ ಅರಿವಿಲ್ಲದೇ ತಲೆದೂಗುವ ಜನರು ನಮ್ಮಲ್ಲಿ ಸಿಗುತ್ತಾರೆ. ಅಂತಹ ಮೌಲ್ಯವನ್ನು ಸಂಗೀತ ಪಡೆದುಕೊಂಡಿದೆ ಎಂದರು.ಜಿ.ಕೆ.ಶಂಕರ್ ಮೂಲತಃ ವೃತ್ತಿರಂಗಭೂಮಿಯ ಹಿರಿಯ ಕಲಾವಿದರು. ಚಲನಚಿತ್ರದಲ್ಲಿ ನಟಿಸಿ, ಗಾಯಕರಾಗಿ ಹಾಡಿ ಜನರನ್ನು ರಂಜಿಸುತ್ತಿದ್ದಾರೆ. ಇವರಿಗೆ ಅಪಘಾತವಾದಾಗ ವೃತ್ತಿ ರಂಗಭೂಮಿಯಲ್ಲಿನ ನಟನಾ ವೃತ್ತಿ ತೊರೆದು ಸದರಿ ಗಾಯನ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿದ್ದಾರೆ ಎಂದರು.
ಕಲೆಯನ್ನೇ ಜೀವಾಳವಾಗಿಸಿಕೊಂಡಿರುವ ಇವರ ಸೇವೆಯು ಮತ್ತಷ್ಟು ಹೊಸ ಪ್ರತಿಭೆಗಳನ್ನು ಕರೆತರುವಂತಾಗಲಿ ಎಂದು ಹಾರೈಸಿದರು.ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಕೆ.ಟಿ.ಶಂಕರೇಗೌಡ ಮಾತನಾಡಿದರು. ಮೈಸೂರಿನ ವಾದ್ಯವೃಂದ ಚಿಕ್ಕಪ್ಪಾಜಿ ತಂಡದ ಸಂಗೀತದೊಂದಿಗೆ ಭಾವತರಂಗ ಸುಗಮ ಸಂಗೀತವನ್ನು ಗಾಯಕರಾದ ರಾಚಪ್ಪ ಶಂಕರ್, ಎನ್.ಪ್ರಸನ್ನ, ದಿಶಾ ಜೈನ್ ಅವರು ಹಾಡಿದರು. ಮಿಮ್ಸ್ ಫೆಥಾಲಜಿ ವಿಭಾಗದ ಡಿ.ಗ್ರೂಪ್ ನೌಕರ ಎಚ್.ಎಸ್.ಮಹೇಶ್ ಅವರಿಗೆ ವೃತ್ತಿ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ಹೊಸಹಳ್ಳಿ ಡಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಮಿಮ್ಸ್ ಫಾರ್ಮಸಿ ಅಧಿಕಾರಿ ಕೃಷ್ಣೇಗೌಡ ರಾಗಿಮುದ್ದನಹಳ್ಳಿ, ಮೈಸೂರು ಮಹಾನಗರ ಪಾಲಿಕೆ ವಲಯ ಆಯುಕ್ತ ಡಿ.ನಾಗೇಶ್, ಆಯೋಜಕ ಜಿ.ಕೆ.ಶಂಕರ್ ಭಾಗವಹಿಸಿದ್ದರು.