ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಆಡಳಿತ ಪರ ಒತ್ತು ನೀಡುವ ಜೊತೆಗೆ ಸಾರ್ವಜನಿಕರ ಸಮಸ್ಯೆ ಬಗ್ಗೆ ತಿಳಿಸಲು ದೂರವಾಣಿ ಕರೆ ಸ್ವೀಕರಿಸಿ ಮನವಿ ಆಲಿಸಿ, ಪಕ್ಷಪಾತ ಮಾಡಬೇಡಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ತಹಸೀಲ್ದಾರ್‌ಗೆ ಮನವಿ ಮಾಡಿದರು.
ಪಟ್ಟಣದ ತಾಲೂಕು ಕಚೇರಿಗೆ ತೆರಳಿದ ರಮೇಶ್ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರನ್ನು ಭೇಟಿ ಮಾಡಿ, ಗ್ರಾಮಗಳಲ್ಲಿ ಚಿರತೆ ಹಾವಳಿ ಕುರಿತು ತಮಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಆಡಳಿತ ಪಕ್ಷದ ಪರ ಕೆಲಸ ಮಾಡುವ ಜೊತೆಗೆ ಸಾರ್ವಜನಿಕರು ಕೆಲಸ ಸಹ ಮಾಡಿ ಎಂದು ಹೇಳಿದರು.ಸ್ವ-ಗ್ರಾಮ ಪೀಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಚಿರತೆ ಹಾಗೂ ಹುಲಿ ಹಾವಳಿ ಕಂಡು ಬಂದಿದೆ. ಹೊಲ ಗದ್ದೆಗೆ ಮೇಯಲು ಹೋದ, ಮನೆ ಹಿತ್ತಲ್ಲಿ ಕಟ್ಟು ಹಾಕಿದ ಮೇಕೆ ಸೇರಿದಂತೆ ರಾಸುಗಳನ್ನು ತಿಂದು ಹಾಕುತ್ತಿವೆ. ಇತ್ತೀಚೆಗೆ ಹುಲಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದರು.
ಗ್ರಾಮಗಳಲ್ಲಿ ರೈತರು ಹಾಗೂ ಸಾರ್ವಜನಿಕರು ತಮ್ಮ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಚಿರತೆ ದಾಳಿಯಿಂದ ಕಳೆದ ಮೂರು ದಿನಗಳಲ್ಲಿ ನಾಲ್ಕು ಮೇಕೆ ಮರಿಗಳು ಸಾವನ್ನಪ್ಪಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬೋನ್ ಇಡುವ ವ್ಯವಸ್ತೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕರು ಹಾಗೂ ತಾಲೂಕಿನ ಸಮಸ್ಯೆಗಳ ಬಗ್ಗೆ ತಮ್ಮ ಬಳಿ ಹೇಳಿಕೊಳ್ಳಲು ದೂರವಾಣಿ ಕರೆ ಮಾಡಿದರೆ ಎರಡು ತಿಂಗಳಿಂದ ಒಂದು ಕರೆ ಸ್ವೀಕರಿಸಿಲ್ಲ. ಕಚೇರಿಗೆ ಬಂದು ವಿಚಾರಿಸಿದರೆ ಸ್ಥಳ ಪರಿಶೀಲನೆ, ನ್ಯಾಯಾಲಯಕ್ಕೆ ತೆರಳಿದ್ದಾರೆ ಎಂಬ ಉತ್ತರಗಳೇ ಕೇಳಿಬರುತ್ತಿವೆ ಎಂದು ಕಿಡಿಕಾರಿದರು.
ಕೇವಲ ಆಡಳಿತ ಪಕ್ಷದವರ ಪರ ಕೆಲಸ ಮಾಡುವುದಾರೆ. ಸಾರ್ವಜನಿಕರ ಗೋಳು ಕೇಳುವವರು ಯಾರು?, ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸದ ನೀವುಗಳು ಸಾರ್ವಜನಿಕರ ಸಮಸ್ಯೆಗಳನ್ನು ಹೇಗೆ ಪರಿಹರಿಸುವಿರಿ ಎಂದು ತಹಶೀಲ್ದಾರ್‌ರನ್ನ ತರಾಟೆ ತೆಗೆದುಕೊಂಡು ಇದೇ ಪ್ರೌವೃತ್ತಿ ಮುಂದುವರೆದಲ್ಲಿ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ನಂತರ ತಹಶೀಲ್ದಾರ್ ಪರುಶುರಾಮ್ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಯಾರು ಯಾವ ಪಕ್ಷದವರು ಎಂದು ನನಗೆ ಗೊತ್ತಿಲ್ಲ. ನಾನು ಯಾರ ಪರವಾಗಿಲ್ಲ. ಪೀಹಳ್ಳಿ ಸೇರಿದಂತೆ ಇತರ ಗ್ರಾಮಗಳ ಬಳಿ ಚಿರತೆ ಇರುವುದು ಕಂಡು ಬಂದಿದೆ. ಮಹದೇವಪುರ, ಗೆಂಡೆ ಹೊಸಹಳ್ಳಿ ತಿಟ್ಟು ಈ ಭಾಗದಲ್ಲಿ ಹುಲಿ ಇರುವ ಶಂಕೆ ವ್ಯಕ್ತವಾಗಿದೆ. ಮೂರು ಕಡೆಗಳಲ್ಲಿ ಬೋನ್ ಅಳವಡಿಸಿ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದು ಸಮಜಾಯಿಸಿ ನೀಡಿದರು.
ಈ ವೇಳೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಚಂದಗಾಲು ಶಂಕರ್, ಮುಖಂಡರಾದ ಟೈಲರ್ ಮೋಹನ್, ಮಂಜುನಾಥ್, ಚೇತನ್ ಸೇರಿದಂತೆ ಇತರರು ಇದ್ದರು.