. ಭಾಗವತ ಮಹಾಪುರಾಣ ಭಕ್ತಿಯನ್ನು ಬೋಧಿಸುತ್ತದೆ. ಭಾಗವತದಲ್ಲಿ ನವವಿಧ ಭಕ್ತಿಯ ಚಿಂತನೆಯನ್ನು ತಿಳಿಸಲ್ಪಟ್ಟಿದೆ.

ಹಳವಳ್ಳಿಯ ಶ್ರೀಮದ್ಭಾಗವತ ಸಪ್ತಾಹದಲ್ಲಿ ಸ್ವರ್ಣವಲ್ಲೀ ಶ್ರೀಗಳ ಆಶೀರ್ವಚನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಭಗವಂತನ ಅನುಗ್ರಹ ಪಡೆಯಲು ಭಕ್ತಿಯೇ ಮಹಾನ್ ಶಕ್ತಿ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಗಡಿಭಾಗದ ಹಳವಳ್ಳಿಯ ಸಿದ್ಧಿವಿನಾಯಕ ಹವ್ಯಕ ಟ್ರಸ್ಟ್, ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀಮದ್ಭಾಗವತ ಮಹಾಸಪ್ತಾಹ ಯಜ್ಞ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾಗವತ ಮಹಾಪುರಾಣ ಭಕ್ತಿಯನ್ನು ಬೋಧಿಸುತ್ತದೆ. ಭಾಗವತದಲ್ಲಿ ನವವಿಧ ಭಕ್ತಿಯ ಚಿಂತನೆಯನ್ನು ತಿಳಿಸಲ್ಪಟ್ಟಿದೆ. ಶ್ರವಣ ಮತ್ತು ಕೀರ್ತನ ಇವೆರಡು ಭಕ್ತಿಯ ಬಹುಮುಖ್ಯ ವಿಧಗಳು ಎಂದು ಹೇಳಿದರು.ಶ್ರೀಮದ್ಭಾಗವತ ಸಪ್ತಾಹದಲ್ಲಿ ಪುರಾಣ ವಾಚನ ಮತ್ತು ವ್ಯಾಖ್ಯಾನಗಳು ಅತ್ಯಂತ ಮಹತ್ವವಾದುದು. ಭಕ್ತಿಯಿಂದ ಶ್ರವಣ ಮಾಡಿದಾಗ ಇದು ನಮ್ಮ ಮನಸ್ಸನ್ನು ತಲ್ಲೀನತೆಯತ್ತ ಒಯ್ಯುತ್ತದೆ. ಅಂತೆಯೇ ಭಗವದ್ಗೀತೆಯಲ್ಲಿ ನಾಲ್ಕು ವಿಧದ ಭಕ್ತರ ಕುರಿತಾಗಿ ಹೇಳಲ್ಪಟ್ಟಿದೆ. ಆರ್ತ, ಆರ್ಥಾರ್ತ, ಜಿಜ್ಞಾಸು ಮತ್ತು ಜ್ಞಾನಿ ಹೀಗೆ ವಿಂಗಡಿಸಲಾಗಿದೆ. ಅಂತಹ ಶ್ರೇಷ್ಠ ಭಕ್ತರಾಗಿ ನಮಗೆ ಕಾಣುವವರು ಗಜೇಂದ್ರ, ಧ್ರುವ, ಅರ್ಜುನ ಹಾಗೂ ಪ್ರಹ್ಲಾದ. ಅವರನ್ನು ನಾವು ಆದರ್ಶಪ್ರಾಯರಾಗಿ ಸ್ವೀಕರಿಸಬಹುದು ಎಂದರು.

ನಮ್ಮ ಮಲೆನಾಡಿನ ಕೃಷಿಯಲ್ಲಿ ಅಡಕೆ ಬೆಳೆಗೆ ಪ್ರಾಧಾನ್ಯ ನೀಡುತ್ತ ಬಂದಿದ್ದೇವೆ. ಇಂದು ಎಲೆಚುಕ್ಕೆ ರೋಗದಂತಹ ಅನೇಕ ಕಾಯಿಲೆಗಳು ಗಿಡಮರಗಳಿಗೂ ಬರುತ್ತಿವೆ. ಅದರ ಪರಿಹಾರಕ್ಕೆ ದೇವರ ಮೊರೆ ಹೋಗುವ ಜತೆಗೆ ವೈಜ್ಞಾನಿಕವಾಗಿ ಅಧಿಕಾರಿಗಳ ಮೂಲಕ ತೋಟದ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ ಶಕ್ತಿ ಸಂವರ್ಧನೆಯ ಕುರಿತಾಗಿಯೂ ಆಗಾಗ ನಡೆಸುತ್ತಿರಬೇಕು ಎಂದ ಶ್ರೀಗಳು, ಧರ್ಮಾಚರಣೆಯಲ್ಲಿ ನಾವು ತೋರುತ್ತಿರುವ ಉದಾಸೀನವೇ ಮಹಾ ರೋಗಗಳಿಗೆ ಕಾರಣವಾಗಿರಬಹುದು. ಮನುಷ್ಯರಿಗೆ ಕೊರೋನಾ, ಜಾನುವಾರುಗಳಿಗೆ ಗಂಟುರೋಗ, ಮರಗಳಿಗೆ ಎಲೆಚುಕ್ಕೆರೋಗ ಇವೆಲ್ಲ ಭಗವಂತನ ಅನುಗ್ರಹದಿಂದಲೇ ವಾಸಿಯಾಗುವಂತಹ ಮಹಾರೋಗಗಳು. ಧರ್ಮಾಚರಣೆ ಬಲಗೊಳ್ಳುವಂತೆ ಜನರಲ್ಲಿ ಹೆಚ್ಚಿನ ಜಾಗೃತಿ ಉಂಟುಮಾಡಬೇಕು ಎಂದರು.

ಏಳು ದಿನಗಳ ಕಾಲ ಶ್ರೀಮದ್ಭಾಗವತದ ಪ್ರವಚನ ನೀಡಿದ ವಿ.ಎಲ್. ವಾಸುದೇವಿ ಭಟ್ಟ ಹಂದಲಸು ಮತ್ತು ಪಾರಾಯಣ ನಡೆಸಿದ ವಿ. ಗಣಪತಿ ಭಟ್ಟ ಕೋಲಿಬೇಣ ಉಪಸ್ಥಿತರಿದ್ದರು. ಸಿದ್ಧಿವಿನಾಯಕ ಹವ್ಯಕ ಟ್ರಸ್ಟಿನ ಅಧ್ಯಕ್ಷ ಸದಾನಂದ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.