ಹುಬ್ಬಳ್ಳಿ:
ಹೈಟೆಕ್ ಮೀನು ಮಾರುಕಟ್ಟೆ ನಿರ್ಮಿಸಲು ಅನೇಕರು ಅಡೆ-ತಡೆ ಮಾಡಿದ್ದರು. ಅದನ್ನು ಗಣನೆಗೆ ತಗೆದುಕೊಳ್ಳದೇ ಹೈಟೆಕ್ ಮೀನು ಮಾರುಕಟ್ಟೆ ಮಾಡಿಕೊಡಲು ಶ್ರಮಿಸಿದ್ದೇನೆ. ಇದನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕು. ಅಲ್ಲದೆ ಮುಂದೆ ಸಗಟು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.ಇಲ್ಲಿನ ಗಣೇಶ್ ಪೇಟೆಯ ಹೈಟೆಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ, ವ್ಯಾಪಾರಸ್ಥರ ಕುಂದು-ಕೊರತೆ ಆಲಿಸಿದ ಬಳಿಕ ಮಾತನಾಡಿದ ಅವರು, ನಗರದ ಗಣೇಶ ಪೇಟೆ ಪ್ರಸಿದ್ಧ ಮೀನು ಮಾರುಕಟ್ಟೆಯಾಗಿದ್ದು ಅದನ್ನು ಹೈಟೆಕ್ ಮಾಡಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಲು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅದರಂತೆ ₹ 5.60 ಕೋಟಿ ಅನುದಾನದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ ಎಂದರು.
ಮೀನು ಮಾರಾಟಗಾರರು ಹೈಟೆಕ್ ಮೀನು ಮಾರುಕಟ್ಟೆ ಆವರಣ ಬಿಟ್ಟು ರಸ್ತೆ ಬದಿ ಅಥವಾ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡಬಾರದು. ಹಾಗೇನಾದರೂ ಮಾಡಿದರೆ ಅಂತಹವರ ಲೈಸೆನ್ಸ್ ರದ್ದುಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಈ ಮಾರುಕಟ್ಟೆ ಅಭಿವೃದ್ಧಿಪಡಿಸಲು ₹4ರಿಂದ 5 ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಇದಲ್ಲದೆ ಮುಂದಿನ ದಿನಗಳಲ್ಲಿ ಸಗಟು ಮೀನು ಮಾರುಕಟ್ಟೆಗೆ ನಗರದ ಹೊರವಲಯದಲ್ಲಿ ಬೃಹತ್ ಮಾರುಕಟ್ಟೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಅಭಿಯಂತರ ವಿಜಯಕುಮಾರ, ಪಾಲಿಕೆ ಸದಸ್ಯ ಇಲಿಯಾಸ್ ಮನಿಯಾರ, ಮುಖಂಡರಾದ ಆಶೀಪ್ ಬಳ್ಳಾರಿ, ನಾಸೀರ್ ಅಸುಂಡಿ ಸೇರಿದಂತೆ ಹಲವರಿದ್ದರು.