ವೈಜ್ಞಾನಿಕ ಚಿಂತನೆಗಳಿಗೆ ಸಾಕ್ಷರತೆ ಬಹುಮುಖ್ಯ: ಅಹಮದ್ ಹಗರೆ

| Published : Jan 20 2025, 01:31 AM IST

ವೈಜ್ಞಾನಿಕ ಚಿಂತನೆಗಳಿಗೆ ಸಾಕ್ಷರತೆ ಬಹುಮುಖ್ಯ: ಅಹಮದ್ ಹಗರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಓದು, ರಾಮನ್- ನೆಹರು ಸಪ್ತಾಹದಂತಹ ಕಾರ್ಯಕ್ರಮಗಳು ನಮ್ಮಲ್ಲಿ ನೂರಾರು ಗೊಂದಲ ನಿವಾರಣೆ ಮಾಡಿ ವೈಜ್ಞಾನಿಕ ಚಿಂತನೆ ಗೆ ಸುಲಭ ದಾರಿ ಹಾಕಿಕೊಟ್ಟಿವೆ. ವಿದ್ಯಾರ್ಥಿಗಳ ನಡುವೆ ಇದನ್ನು ಶಿಸ್ತುಬದ್ಧವಾಗಿ ಸಂವಾದಿಸಲು ಸೂಕ್ತ ಕ್ರಿಯಾಯೋಜನೆ ರೂಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಹಾಸನ

ಜನ ಸಾಮಾನ್ಯರ ನಡುವೆ ವಿಜ್ಞಾನವನ್ನು ಜನಪ್ರಿಯಗೊಳಿಸಲು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಲು ಮೊದಲು ಜನರು ಸಾಕ್ಷರರಾಗಬೇಕೆಂಬ ಮಹದಾಸೆಯೊಂದಿಗೆ ಬಿಜಿವಿಎಸ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು.

ಹಾಸನದ ವಿಜಯ ಶಾಲೆಯಲ್ಲಿ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ತಾಲೂಕು ಸಮ್ಮೇಳನದಲ್ಲಿ ಮಾತನಾಡಿ, ಶಿಕ್ಷಣದ ಬಲವರ್ಧನೆ, ಮಹಿಳಾ ಸಬಲೀಕರಣ, ಮೌಢ್ಯತೆ ವಿರುದ್ಧ ಜಾಗೃತಿ, ಜನಾರೋಗ್ಯ, ಪರಿಸರ ಸಾಕ್ಷರತೆ, ಜನಪ್ರಿಯ ವಿಜ್ಞಾನ ಪುಸ್ತಕಗಳ ಪ್ರಕಟಣೆ ಬಿಜಿವಿಎಸ್ ನ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಳೆದ 35 ವರ್ಷಗಳಿಂದ ರಚನಾತ್ಮಕವಾಗಿ ದುಡಿಯುತ್ತಿದೆ. ಸದರಿ ಸಮ್ಮೇಳನವು ಹಾಸನ ತಾಲೂಕಿನ ಪರಿಸರ ಸಮಸ್ಯೆಗಳು, ಜನಾರೋಗ್ಯ ಹಾಗೂ ಸಂವಿಧಾನ ಸಾಕ್ಷರತೆ ಕುರಿತು ಸೂಕ್ತ ಯೋಜನೆ ರೂಪಿಸಲಿದೆ ಎಂದರು.

ಬಿಜಿವಿಎಸ್ ತಾಲೂಕು ಅಧ್ಯಕ್ಷೆ ಆರ್. ರಾಧಾ ಕಾರ್ಯದರ್ಶಿ ವರದಿ ಮಂಡಿಸಿ, 34 ವರ್ಷಗಳಲ್ಲಿ ನೂರಾರು ಜನಪರ, ಶಿಕ್ಷಣಪರ, ಪರಿಸರ ಪರ, ವಿಜ್ಞಾನ ಪರ ಹಾಗೂ ಮಹಿಳಾಪರ ಕಾರ್ಯಕ್ರಮಗಳನ್ನು ಬಿಜಿವಿಎಸ್ ನಡೆಸುತ್ತಾ ಬಂದಿದೆ. ಸಂಘಟನೆಯ ಭಾಗವಾಗಿ ಘಟಕ, ತಾಲೂಕು, ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸುತ್ತಿದೆ. ಮತ್ತು ಎಲ್ಲಾ ಸ್ಥರಗಳಲ್ಲಿಯೂ ದ್ವೈವಾರ್ಷಿಕ ವಾಫಿ ಸಮ್ಮೇಳನ ನಡೆಸುತ್ತಾ ಹೊಸಹೊಸ ಸಮಿತಿಗಳನ್ನು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸ್ಥಾಪಿಸುತ್ತಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್. ಟಿ. ಗುರುರಾಜು, ಕಳೆದ ಕೆಲವು ದಶಕಗಳಿಂದ ಭಾರತೀಯ ವಿಜ್ಞಾನ ಜಗತ್ತಿನ ಮುಂದೆ ದಾಪುಗಾಲಿಟ್ಟು ಮುನ್ನುಗ್ಗುತ್ತಿದೆ. ಹೊಸ ಹೊಸ ವಿಜ್ಞಾನ ಆವಿಷ್ಕಾರವಾಗಲು ಜಗತ್ತಿನ ಮುಂದೆ ಬಂದಿವೆ. ಆದರೆ ಅದೇ ಸಮಯದಲ್ಲಿ ಜಗತ್ತಿನಲ್ಲಿ ಬಡವರ ಸಂಖ್ಯೆಯೂ ಕೂಡ ಏರುತ್ತಿದೆ, ಅತೀ ಹೆಚ್ಚು ಬಡವರನ್ನು ಹೊಂದಿರುವ ದೇಶವೆಂದು ಭಾರತಕ್ಕೆ ಅಪಖ್ಯಾತಿಯೂ ಇದೆ.

ವಿಜ್ಞಾನ ತಂತ್ರಜ್ಞಾನವು ಜನರ ಕಲ್ಯಾಣಕ್ಕಾಗಿ ಉಪಯೋಗವಾಗಬೇಕು. ಜನಪರ ವಿಜ್ಞಾನ ತಂತ್ರಜ್ಞಾನ ಯೋಜನೆಗಳು ಜಾರಿಗೆ ಬರಬೇಕು. ಜನರ ಭಾಗವಹಿಸುವಿಕೆಯಿಂದ ಅಭಿವೃದ್ಧಿ ಯೋಜನೆಗಳು ರೂಪುಗೊಂಡು ಜಾರಿಯಾಗಬೇಕು. ಪರಿಸರ ಸಂರಕ್ಷಣೆ. ಯುದ್ಧರಹಿತ ಪ್ರಪಂಚ, ವೈಜ್ಞಾನಿಕ ಚಿಂತನೆ ಬೆಳೆಯಬೇಕು ಎಂಬ ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ದೇಶದಾದ್ಯಂತ ಜನ ವಿಜ್ಞಾನ ಚಳವಳಿಗಳನ್ನು ಕಟ್ಟಿ ಬೆಳೆಸುತ್ತಿರುವುದು ಭಾರತ ಜ್ಞಾನ ವಿಜ್ಞಾನ ಸಮಿತಿ ಎಂದು ತಿಳಿಸಿದರು.

ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಿ.ಕೆ.ಲೋಲಾಕ್ಷಿ ಆಶಯ ನುಡಿ ನುಡಿದು, ಗ್ರಹಣ ಪಯಣ ಎಂಬ ಕಾರ್ಯಕ್ರಮದ ಮೂಲಕ ಜನರು ಧೈರ್ಯವಾಗಿ ಗ್ರಹಣ ವೀಕ್ಷಿಸಲು, ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಏನೂ ಸಮಸ್ಯೆ ಇಲ್ಲ ಎಂಬ ಅರಿವು, ಸೂಪರ್ ಮೂನ್ ವೀಕ್ಷಣೆ, ಜನ ಆರೋಗ್ಯ, ಹೆಣ್ಣು ಮಕ್ಕಳ ಆರೋಗ್ಯ, ಗರ್ಭಕೋಶ ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಪೂರಕ ಕಾರ್ಯಕ್ರಮಗಳು, ಪವಾಡ ರಹಸ್ಯ ಬಯಲು, ಸಂವಿಧಾನ ಓದು, ರಾಮನ್- ನೆಹರು ಸಪ್ತಾಹದಂತಹ ಕಾರ್ಯಕ್ರಮಗಳು ನಮ್ಮಲ್ಲಿ ನೂರಾರು ಗೊಂದಲ ನಿವಾರಣೆ ಮಾಡಿ ವೈಜ್ಞಾನಿಕ ಚಿಂತನೆ ಗೆ ಸುಲಭ ದಾರಿ ಹಾಕಿಕೊಟ್ಟಿವೆ. ವಿದ್ಯಾರ್ಥಿಗಳ ನಡುವೆ ಇದನ್ನು ಶಿಸ್ತುಬದ್ಧವಾಗಿ ಸಂವಾದಿಸಲು ಸೂಕ್ತ ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ತಾಲೂಕಿನ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಿಟ್ಟೂರು ವೈದ್ಯಾಧಿಕಾರಿ ಡಾ.ಮಂಜುನಾಥ್, ಕಾರ್ಯದರ್ಶಿಯಾಗಿ ವಿಜ್ಞಾನ ಶಿಕ್ಷಕಿ ಬಿ.ಕೆ.ಲೋಲಾಕ್ಷಿ, ಖಜಾಂಚಿಯಾಗಿ ಅಟ್ಟಾವರ ಶಾಲೆಯ ಗಣಿತ ಶಿಕ್ಷಕಿ ಆಶಾ, ಉಪಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಸಿ.ಪಿ.ನಾಗೇಶ್ ಹಾಗೂ ಶಿಕ್ಷಕ ಶೇಖರ್ ಸಹಕಾರ್ಯದರ್ಶಿಗಳಾಗಿ ಶಿಕ್ಷಕಿ ಪುಷ್ಪ ಹಾಗೂ ಚಿತ್ರ ಕಲಾವಿದ ಸುರೇಶ್ ಅತ್ನಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ವಕೀಲ ಲಕ್ಷ್ಮೀಶ್, ಸಾಮಾಜಿಕ ಕಾರ್ಯಕರ್ತೆಯರಾದ ಪ್ರೀತಿ ತ್ಯಾಗಿ, ಶಾರದಾ, ಕಮಲಮ್ಮ ಆಯ್ಕೆಯಾದರು.