ಸಾರಾಂಶ
ಮಾಗಡಿ: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 20, 21, 22 ರಂದು ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಸಮ್ಮೇಳನದ ಅರಿವು ಮೂಡಿಸಲು ಕನ್ನಡ ರಥಯಾತ್ರೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಶರತ್ ಕುಮಾರ್ ಹೇಳಿದರು.
ತಾಲೂಕಿನ ಶಾನುಭೋಗನಹಳ್ಳಿ ಬಳಿ ತಾಲೂಕು ಆಡಳಿತ ಅದ್ಧೂರಿಯಾಗಿ ಕನ್ನಡ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಕನ್ನಡ ರಥವನ್ನು ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ನಾವೆಲ್ಲರೂ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಭಾಷೆ, ನೆಲ, ಜಲ, ಸಾಹಿತ್ಯ ಉಳಿಸಲು ಬೆಂಬಲಿಸಬೇಕಿದೆ. ಸಾಹಿತ್ಯ ಸಮ್ಮೇಳನಗಳಿಂದ ಕನ್ನಡದ ಕಂಪನ್ನು ಮತ್ತಷ್ಟು ಬೆಳಗಿಸೋಣ ಎಂದು ತಿಳಿಸಿದರು.ತಾಲೂಕು ಕಸಾಪ ಅಧ್ಯಕ್ಷ ತಿ.ನಾ.ಪದ್ಮನಾಭ ಮಾತನಾಡಿ, ಸಮ್ಮೇಳನ ರಥಕ್ಕೆ ವಿಶೇಷವಾಗಿ ಕಾವೇರಿ ತಾಯಿ, ಕೃಷ್ಣರಾಜ ಒಡೆಯರು ಹಾಗೂ ಸರ್. ಎಂ.ವಿಶ್ವೇಶ್ವರಯ್ಯನವರ ಪುತ್ಥಳಿ ಹಾಗೂ ಕನ್ನಡಾಂಬೆ ಜೊತೆಗೆ ಕನ್ನಡದ ವಿವಿಧ ಕವಿಗಳ ಭಾವಚಿತ್ರ ಹಾಗೂ ಮಂಡ್ಯ ಸೊಗಡನ್ನು ಬಿಂಬಿಸುವ ಹೊಲದಲ್ಲಿ ಉಳುಮೆ ಮಾಡುವ ರೈತ ಮತ್ತು ಎತ್ತಿನ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಮಾಗಡಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ರಥ ಸಂಚರಿಸಿ, ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಮನಗರಕ್ಕೆ ಕಳುಹಿಸಿಕೊಡಲಾಯಿತು ಎಂದು ತಿಳಿಸಿದರು.
ದಲಿತ ಮುಖಂಡ ಮಾಡಬಾಳ್ ಜಯರಾಂ ಮಾತನಾಡಿ, ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನಿಂದ 5 ಸಾವಿರಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ರಥಕ್ಕೆ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಧನಂಜಯ ನಾಯಕ್ ನೇತೃತ್ವದಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದ ಮುಂದೆ ಕನ್ನಡ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಇಒ ಜೈಪಾಲ್, ಬಿಇಒ ಚಂದ್ರಶೇಖರ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಂಜುನಾಥ್, ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಜಯಶ್ರೀ, ಸಿಡಿಪಿಒ ಸುರೇಂದ್ರ, ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ, ಗೌರವಾಧ್ಯಕ್ಷ ಮಾಂತೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಪುರಸಭೆ ಸದಸ್ಯ ಕೆ.ವಿ.ಬಾಲು, ವಿವಿಧ ಸಂಘಟನೆಗಳ ಮುಖಂಡರು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್)
ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥವನ್ನು ತಹಸೀಲ್ದಾರ್ ಶರತ್ ಕುಮಾರ್ ನೇತೃತ್ವದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.