ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಮಕ್ಕಳು ಬಾಲ್ಯದಿಂದಲೇ ಪಠ್ಯದ ಜೊತೆಗೆ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಹಾಗೂ ಶರೀರವನ್ನು ಆರೋಗ್ಯಪೂರ್ಣವಾಗಿಡುವ ಸರಳ ಸೂತ್ರಗಳನ್ನು ಅನುಸರಿಸಿದರೆ ಸಮೃದ್ಧಿ ಜೀವನ ರೂಪುಗೊಳ್ಳಲು ಸಾಧ್ಯವಾಗಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು. ಹಿರೇಮಗಳೂರಿನ ಶ್ರೀದೇವಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ, ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಕ್ಕಳ ಬೆಳವಣಿಗೆಯಲ್ಲಿ ಸಾಹಿತ್ಯ ಕಲಿಕೆಯ ಆಸಕ್ತಿ ಮರೆಯಾಗುತ್ತಿರುವುದು ಚಿಂತಿಸುವ ವಿಷಯ. ಭಾಷೆಯು ಮೌಲ್ಯಯುತ ಬೆಳವಣಿಗೆ ಹೊಂದ ಬೇಕಾದರೆ ಪ್ರೌಢಾವಸ್ಥೆಯಿಂದಲೇ ನಾಡು, ನುಡಿ ಹಾಗೂ ಜಲದ ಸೊಗಡನ್ನು ಮಕ್ಕಳು ಅರಿಯಬೇಕು. ಇದರಿಂದ ನಾಡಿನ ಪರಂಪರೆಯನ್ನು ವಿಶ್ವಾದ್ಯಂತ ಪಸರಿಸಲು ಸಾಧ್ಯವಾಗಲಿದೆ ಎಂದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯ ಜೊತೆಗೆ ಆರೋಗ್ಯಪೂರ್ಣ ಜೀವನ ಸಾಗಿಸುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿನಿತ್ಯ, ವ್ಯಾಯಾಮ, ವೇಗ ನಡಿಗೆ ಹಾಗೂ ಮುಂಜಾನೆಯ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಸದೃಢ ಶರೀರ ಹೊಂದಲು ಪೂರಕ. ಹೀಗಾಗಿ ಬದುಕಿನಲ್ಲಿ ಅತಿ ಹೆಚ್ಚು ಆರೋಗ್ಯ ಕಡೆ ಕಾಳಜಿ ವಹಿಸುವುದು ಸೂಕ್ತ ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾತನಾಡಿ, ಇಂದಿನ ಆಹಾರ ಪದ್ಧತಿ, ವ್ಯಾಯಮ ರಹಿತ ಕೆಲಸಗಳ ಒತ್ತಡದಿಂದ ಮನುಷ್ಯನ ಆರೋಗ್ಯವು ದಿನೇ ದಿನೇ ಹದಗೆಡುತ್ತಿದೆ. ಆ ನಿಟ್ಟಿನಲ್ಲಿ ಹಿತ ಮಿತವಾಗಿ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಶರೀರವನ್ನು ಬೊಜ್ಜಿನೆಡೆಗೆ ಕೊಂಡೊಯ್ಯುವ ಪದಾರ್ಥಗಳನ್ನು ತ್ಯಜಿಸಬೇಕು ಎಂದು ಸಲಹೆ ಮಾಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಬಿಸಲೇನಹಳ್ಳಿ ಸೋಮಶೇಖರ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಜ್ಞಾನವನ್ನು ವೃದ್ದಿಸುವ ಸಲುವಾಗಿ ಹಲವಾರು ಶಾಲಾ ಕಾಲೇಜು ಗಳಲ್ಲಿ ಕಾರ್ಯಕ್ರಮ ಮೂಡಿಸಿ ಕನ್ನಡದ ಕಂಪನ್ನು ಹಬ್ಬಿಸಲಾಗುತ್ತಿದೆ. ಪುಸ್ತಕ ಜ್ಞಾನದ ಆಸ್ತಿ ಹಾಗೂ ನಿಯಮಿತ ಆಹಾರ ದೇಹದ ಆಸ್ತಿ ಎಂಬಂತೆ ಬದುಕನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಸಾಪ ಗೌರವ ಕಾರ್ಯದರ್ಶಿ ಬಿ.ಜಿ.ಪವನ್ ಮಾತನಾಡಿ, ಇತ್ತೀಚೆಗೆ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳು ಮನುಷ್ಯನ್ನು ಜೀವವನ್ನೇ ಚೇತರಿಕೆಗೊಳಿಸದೇ ಪ್ರಾಣವನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ಅಲ್ಲಲ್ಲಿ ನಡೆಯುವ ಆರೋಗ್ಯ ತಪಾಸಣೆಯಲ್ಲಿ ನಿವಾಸಿಗಳು ಪಾಲ್ಗೊಳ್ಳುವ ಜೊತೆಗೆ ಅಕ್ಕಪಕ್ಕದ ಕುಟುಂಬಗಳಿಗೆ ತಪಾಸಣೆಯ ಮಾಹಿತಿಯನ್ನು ಹಂಚಬೇಕು ಎಂದರು. ಇದೇ ವೇಳೆ ಹೃದಯ ಆರೋಗ್ಯ ತಪಾಸಣೆಯಲ್ಲಿ ನೂರಕ್ಕೆ ಹೆಚ್ಚು ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಒಟ್ಟಾರೆ 150ಕ್ಕೂ ಹೆಚ್ಚು ಮಂದಿ ತಪಾಸಣೆಯಲ್ಲಿ ಭಾಗಿ ಯಾದರು. ಹಿರಿಯ ತಜ್ಞ ವೈದ್ಯ ಡಾ.ಮುರಳೀಧರ್ ಸಾಹಿತ್ಯ ಮತ್ತು ವೈದ್ಯಕೀಯ ಸೇವೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಸಾಪ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಹೆಚ್.ಕೆ.ವಿಜಯಲಕ್ಷ್ಮೀ ವಿಶ್ವನಾಥ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ರೂಪಾನಾಯಕ್, ನಗರ ಘಟಕದ ಅಧ್ಯಕ್ಷ ಸಚಿನ್ ಸಿಂಗ್, ಮುಖಂಡರುಗಳಾದ ವೀಣಾ ಅರವಿಂದ್, ಹೆಚ್.ಆರ್.ಕಾಂತರಾಜು ಉಪಸ್ಥಿತರಿದ್ದರು. ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶೈಲಜಾ ಬಸವರಾಜ್ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಪದ್ಮಾ ಮೋಹನ್ ಸ್ವಾಗತಿಸಿದರು. ಖಜಾಂಚಿ ಮಹಾಲಕ್ಷ್ಮೀ ನಿರೂಪಿಸಿದರು. ಗೌರವ ಕಾರ್ಯದರ್ಶಿ ಜಯಂತಿ ವಂದಿಸಿದರು.