ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಯೋಗಿ ವೇಮನ ಜಯಂತಿ ಆಚರಣೆಯಲ್ಲಿಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮಿಗಳು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನೈತಿಕ ಮೌಲ್ಯಗಳ ಪ್ರತಿಪಾದಿಸಿದ ಯೋಗಿ ವೇಮನರು ಮೇರು ಪರ್ವತವಾಗಿ ದಾರ್ಶನಿಕ ವಲಯದಲ್ಲಿ ಕಂಗೊಳಿಸುತ್ತಿದ್ದಾರೆಂದು ಸಾಹಿತಿ ಎಸ್.ಬಿ.ಭೀಮಾರೆಡ್ಡಿ ಅಭಿಪ್ರಾಯಪಟ್ಟರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಮಾಜದಲ್ಲಿನ ಲೋಪದೋಷ, ಅನ್ಯಾಯ, ಅನೀತಿಯನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಖಂಡಿಸಿದ ನಿಷ್ಠುರವಾದಿ ಅವರಾಗಿದ್ದರೆಂದರು.
ಸಾಮಾಜಿಕ ಸಮಾನತೆ, ನೈತಿಕ ಮೌಲ್ಯಗಳ ಬಗ್ಗೆ ಜನಸಾಮಾನ್ಯರ ಭಾಷೆಯಲ್ಲಿ ಸರಳ ಮತ್ತು ಶಕ್ತಿಯುತವಾದ ವಚನಗಳ ಮೂಲಕ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ತಮ್ಮ ಪದ್ಯಗಳ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ.ದಾರ್ಶನಿಕರಲ್ಲಿ ವಿಶೇಷವಾಗಿ ವೇಮನರು ವಿದೇಶಿ ಸಂಶೋಧಕರಿಂದ ಅತೀ ಹೆಚ್ಚು ಸಂಶೋಧನೆಗೆ ಒಳಪಟ್ಟ ವ್ಯಕ್ತಿ. ವಿದೇಶ ಸಂಶೋಧಕ ಸಿ.ಪಿ.ಬ್ರೌನ್ ಅವರು ವೇಮನರ ವಚನಗಳನ್ನು ಸಂಗ್ರಹ ಮಾಡಿದ ಮೇಲೆ, ಅದರಲ್ಲಿರುವ ವಿಷಯ, ತಿರುಳನ್ನು ಬೇರೆಯವರಿಂದ ಕೇಳಿ ತಿಳಿದು, ಆಶ್ಚರ್ಯಚಕಿತರಾಗುತ್ತಾರೆ ಎಂದರು.
ಜನಸಾಮಾನ್ಯರ ಭಾಷೆಯಲ್ಲಿ ಹೆಚ್ಚಿನ ವ್ಯಾಕರಣ ಬಳಸದೇ, ಸರಳ ಭಾಷೆಯಲ್ಲಿಯೇ ವಿಶೇಷ ಜ್ಞಾನ, ವಿಶೇಷ ತತ್ವದ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಸಂಪೂರ್ಣವಾಗಿ ಅರಿತರೆ ಸಂಶೋಧನೆಗೆ ಮೌಲ್ಯ ಬರಲಿದೆ. ಈ ಕಾರಣದಿಂದ ವೇಮನ ತಿಳಿಯುವ ಉದ್ದೇಶದಿಂದ ತೆಲುಗು ಭಾಷೆ ಕಲಿತು ಸುಮಾರು 1167 ವಚನಗನ್ನು ಸಂಗ್ರಹ ಮಾಡಿದ್ದಾರೆ ಎಂದು ಹೇಳಿದರು. ವೇಮನರು ತಮ್ಮ ಎಲ್ಲ ವಚನಗಳಲ್ಲಿ ಆತ್ಮಚಿಂತನೆ ಕುರಿತು ಹೆಚ್ಚು ತಿಳಿಸಿದ್ದಾರೆ. ಆತ್ಮಚಿಂತನೆಯಿಂದ ವ್ಯಕ್ತಿಯಲ್ಲಿ ನೈತಿಕತೆ ಬರಲಿದೆ. ಈ ನೈತಿಕತೆ ಬಳಸಿಕೊಂಡು ನಾವು ಮುಕ್ತಿ ಮಾರ್ಗದ ಕಡೆ ಸಾಗಬೇಕು. ಅಲ್ಲಿ ಆತ್ಮ ಚಿಂತನೆ, ನೈತಿಕತೆ, ಮುಕ್ತಿ ಮಾರ್ಗಕ್ಕೆ ಸಂಬಂಧಪಟ್ಟ ಬೇರೆ ಬೇರೆ ರೀತಿಯಾದ ವಚನಗಳನ್ನು ರಚಿಸಿರುವುದನ್ನು ಕಾಣಬಹುದಾಗಿದೆ. ವೇಮನರ ಪದ್ಯಗಳು ಕನ್ನಡದ ಕಂದಪದ್ಯದ ಛಂದಸ್ಸಿನ ಪ್ರಕಾರಕ್ಕೆ ಸೇರಿದ್ದು ಮೊದಲ ಸಾಲಿನಲ್ಲಿ ಸತ್ಯ, ಎರಡನೇ ಸಾಲಿನಲ್ಲಿ ವಾಸ್ತವ ಸ್ಥಿತಿ ಹಾಗೂ ಮೂರನೇ ಸಾಲಿನಲ್ಲಿ ವಾಸ್ತವ ಸ್ಥಿತಿಯ ಕ್ರೂರತೆ ಕಾಣಿಸುತ್ತದೆ ಎಂದರು.ಹರಿಹರ ತಾಲೂಕು ಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮಿಗಳು ಮಾತನಾಡಿ, ವೇಮನ ಚರಿತ್ರೆ ನಮಗೆ ನೆಪಮಾತ್ರ. ಅವರ ಸಾಹಿತ್ಯ ಬೋಧನೆಗಳು ನಮ್ಮ ದಾರಿಗೆ ಬೆಳಕು ಚೆಲ್ಲಲಿವೆ. ಪ್ರಜಾಕವಿ ವೇಮನರ ಸಾಹಿತ್ಯ ಮುಂದಿಟ್ಟುಕೊಂಡು ನಾವು ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಾವೆಲ್ಲರೂ ಸಂತೃಪ್ತಿಯಿಂದ ಬದುಕುಬೇಕು ಎಂಬುದೇ ಮಹನೀಯರ ಜಯಂತಿಗಳ ಆಶಯ. ವೇಮನರು ತಮ್ಮ ಬೋಧನೆಗಳನ್ನು ಜನರಾಡುವ ಭಾಷೆಯಲ್ಲಿ ಸರಳವಾಗಿ ಬರೆದಿರುವುದು ಅವರ ವಿಶೇಷ. ಜನರಿಗೆ ಗೊತ್ತಿರುವ ಉಪಮೆ, ಪ್ರತಿಮೆಗಳ ಮೂಲಕ ತಿಳಿಸಿದ್ದಾರೆ. ಇದು ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಯಿತು ಅಭಿಪ್ರಾಯಪಟ್ಟರು.ಎಸ್.ಆರ್.ಪಾಟೀಲರು ವೇಮನ ಸುಮಾರು 5000 ವಚನಗಳನ್ನು ಸಂಗ್ರಹಿಸಿ, ತೆಲುಗಿನಿಂದ ಕನ್ನಡಕ್ಕೆ ಭಾಷಾಂತರಿಸಿ, ಅವುಗಳಿಗೆ ಟಿಪ್ಪಣಿ, ವಿಮರ್ಶೆ ನೀಡಿ, ವೇಮನ ಸಾಹಿತ್ಯ ಕನ್ನಡಿಗರಿಗೆ ದೊರೆಯುವಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ ಅವರು, ವೇಮನ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ ಗುರುನಾಥ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಚಿತ್ರದುರ್ಗ ಸಿಟಿ ಇನ್ ಸ್ಟಿಟ್ಯೂಟ್ ಕಾರ್ಯದರ್ಶಿ ವೆಂಕಟೇಶರೆಡ್ಡಿ, ಜಿಲ್ಲಾ ಪಂಚಾಯಿತಿ ಲೆಕ್ಕಪತ್ರ ಶಾಖೆಯ ಸಹಾಯಕ ನಿರ್ದೇಶಕ ದಾದಾಪೀರ್ ಇದ್ದರು.