ರಾಷ್ಟ್ರಕಂಡ ಅಪ್ರತಿಮ ಕವಿಗಳಾದ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ನಮ್ಮ ವೇದಿಕೆಯಿಂದ ಈ ವರ್ಷ ವಿಶ್ವಮಾನವ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ಮಾಡಿ, ಅದಕ್ಕಾಗಿ ಪ್ರಶಸ್ತಿಯ ಘನತೆಗೆ ತಕ್ಕ ಸಾಧಕರನ್ನು ಆಯ್ಕೆ ಮಾಡುವಾಗ ನಮ್ಮವರೇ ಆದ ಕವಿ ಜಯಪ್ಪ ಹೊನ್ನಾಳಿ ಮತ್ತು ಲೀಲಾ ಪ್ರಕಾಶ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸಾಹಿತಿ ಕೆ. ಲೀಲಾಪ್ರಕಾಶ್‌ ಮತ್ತು ಕವಿ ಜಯಪ್ಪ ಹೊನ್ನಾಳಿ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ. ರಾಜಶೇಖರ್ ಮತ್ತು ಶಾಲೆ ಮುಖ್ಯ ಶಿಕ್ಷಕರಾದ ಸಂಗೀತ ಹಾಗೂ ಇತರೆ ಗಣ್ಯರು ಲೀಲಾ ಪ್ರಕಾಶ್ ಮತ್ತು ಜಯಪ್ಪ ಹೊನ್ನಾಳಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ, ರಾಷ್ಟ್ರಕಂಡ ಅಪ್ರತಿಮ ಕವಿಗಳಾದ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ನಮ್ಮ ವೇದಿಕೆಯಿಂದ ಈ ವರ್ಷ ವಿಶ್ವಮಾನವ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ಮಾಡಿ, ಅದಕ್ಕಾಗಿ ಪ್ರಶಸ್ತಿಯ ಘನತೆಗೆ ತಕ್ಕ ಸಾಧಕರನ್ನು ಆಯ್ಕೆ ಮಾಡುವಾಗ ನಮ್ಮವರೇ ಆದ ಕವಿ ಜಯಪ್ಪ ಹೊನ್ನಾಳಿ ಮತ್ತು ಲೀಲಾ ಪ್ರಕಾಶ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದೇವೆ. ಮಂತ್ರಮಾಂಗಲ್ಯದ ಮೂಲಕ ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಿದ ಕುವೆಂಪು ಅವರು ನಿಜವಾದ ಸಮಾಜ ಸುಧಾರಕರಾಗಿದ್ದಾರೆ. ಅವರ ಸಾಹಿತ್ಯ, ಲೇಖನ, ಕೃತಿಗಳು ವಿಶ್ವಮಾನವರಾಗಲು ಪ್ರೇರಣೆ ನೀಡುತ್ತವೆ. ಈ ನಿಟ್ಟಿನಲ್ಲಿ ಮಕ್ಕಳು ಈಗಿನಿಂದಲೇ ಕುವೆಂಪು ಅವರ ಸಾಹಿತ್ಯವನ್ನು ಓದುವ ಮೂಲಕ ವಿಶ್ವಮಾನವರಾಗಿ ಬೆಳೆಯಬೇಕು ಎಂದರು.

ಪ್ರಶಸ್ತಿ ಪುರಸ್ಕೃತರಾದ ಜಯಪ್ಪ ಹೊನ್ನಾಳಿ ಮಾತನಾಡಿ, ರಸಋಷಿ, ಮಹಾ ದಾರ್ಶನಿಕರು ಮತ್ತು ಸ್ವತಃ ವಿಶ್ವಮಾನವರಾಗಿ ಬದುಕಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ವಿಶ್ವ ಮಾನವ ಪ್ರಶಸ್ತಿ ನೀಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಭಾರತದ ಯಾವ ಭಾಷೆಗೂ ಸಿಗದ ಗೌರವವನ್ನು ಕನ್ನಡ ಭಾಷೆಗೆ ದೊರಕಿಸಿಕೊಟ್ಟಿದ್ದಾರೆ ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಶಿವಕುಮಾರ್, ಹೂಟಗಳ್ಳಿ ಗ್ರಾಪಂ ಸದಸ್ಯ ನಾಗೇಶ್, ಲೂಯಿಸ್, ಹುಣಸೂರು ಪರಮೇಶ, ವತ್ಸಲ, ಲೋಕೇಶ, ವಿಷ್ಣು, ಮಂಜುಳ, ನೇಹ, ರಶ್ಮಿಸಿಂಗ್, ತಾರ, ಭಾಗ್ಯ, ಜಯಲಕ್ಷ್ಮಿ ಇದ್ದರು.