ಕನ್ನಡದ ಸಾಹಿತ್ಯಸೇವೆ ವಿಫುಲವಾಗಿದೆ: ಜಗದೀಶ ಶರ್ಮಾ ಸಂಪ

| Published : Apr 01 2024, 02:26 AM IST / Updated: Apr 01 2024, 08:37 AM IST

ಕನ್ನಡದ ಸಾಹಿತ್ಯಸೇವೆ ವಿಫುಲವಾಗಿದೆ: ಜಗದೀಶ ಶರ್ಮಾ ಸಂಪ
Share this Article
  • FB
  • TW
  • Linkdin
  • Email

ಸಾರಾಂಶ

‘ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಪ್ರಸ್ತುತ ಕನ್ನಡದಲ್ಲಿ ಹೆಚ್ಚಿನ ಸಾಹಿತ್ಯಸೇವೆ ನಡೆಯುತ್ತಿದೆ’ ಎಂದು ಹಿರಿಯ ಲೇಖಕ ಜಗದೀಶ ಶರ್ಮಾ ಸಂಪ ಹೇಳಿದರು.

  ಬೆಂಗಳೂರು :  ‘ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಪ್ರಸ್ತುತ ಕನ್ನಡದಲ್ಲಿ ಹೆಚ್ಚಿನ ಸಾಹಿತ್ಯಸೇವೆ ನಡೆಯುತ್ತಿದೆ’ ಎಂದು ಹಿರಿಯ ಲೇಖಕ ಜಗದೀಶ ಶರ್ಮಾ ಸಂಪ ಹೇಳಿದರು.

ಭಾನುವಾರ ಸಾಹಿತ್ಯಲೋಕ ಪಬ್ಲಿಕೇಶನ್ಸ್‌ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ನಳಿನಿ ಭೀಮಪ್ಪ ಅವರ ‘ಬಣ್ಣ ಬದಲಿಸುವ ಚಹರೆಗಳು’, ಸುಷ್ಮಾಸಿಂಧೂ ಅವರ ’ಬದುಕಿಗೊಂದು ಪುಟ್ಟ ಥ್ಯಾಂಕ್ಸ್‌’, ರಾಘವೇಂದ್ರ ಅಡಿಗ ಎನ್‌.ಎಚ್‌. ಅವರ ‘ಭಾರತದ ದೇವಾಲಯಗಳು’ ಕೃತಿ ಲೋಕಾರ್ಪಣೆ, ನಾಗರಾಜ ವಸ್ತಾರೆ ಅವರ 100ನೇ ಕೃತಿ ಮುಖಪುಟ ಅನಾವರಣ ಹಾಗೂ ಸಾಹಿತ್ಯ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕನ್ನಡ ಉಳಿಸಿ ಎಂಬ ಕೂಗಿನ ನಡುವೆಯೂ ನಮ್ಮ ಸಾಹಿತ್ಯ ಸೇವೆ ವಿಫುಲವಾಗಿದೆ. ದೇಶದ ಇತರೆ ಭಾಷೆಗೆ ಹೋಲಿಸಿದರೆ ಸಾಹಿತಿಗಳು ವಿಫುಲವಾಗಿ ಕೃತಿ ರಚನೆ, ಪ್ರಕಾಶಕರು ಹೆಚ್ಚಿನ ಪ್ರಕಟಣೆಯಲ್ಲಿ ತೊಡಗಿ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ. ಪುಸ್ತಕಗಳನ್ನು ಕೊಂಡು ಓದುವ ಮೂಲಕ ಅವರನ್ನು ಉಳಿಸಿಕೊಳ್ಳಬೇಕಾದ ಹೊಣೆ ಓದುಗರ ಮೇಲಿದೆ’ ಎಂದು ಹೇಳಿದರು.

‘ಹಿಂದೆ ಕೃತಿಗಳು ಪ್ರಕಟವಾಗುತ್ತಿತ್ತೆ ವಿನಃ ಕೃತಿಕಾರ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಲೇಖಕ ಕಾಣಿಸಿಕೊಳ್ಳದೆ ಇರುವುದೇ ಶ್ರೇಷ್ಠ ವಿಚಾರವಾಗಿತ್ತು. ಇತಿಹಾಸ ನೋಡಿದರೆ ನಮಗೆ 13 ಹಂತಗಳಲ್ಲಿ ಕಾಳಿದಾಸ ಎಂಬುವವರು ಕಾಣುತ್ತಾರೆ. ಅಲ್ಲಿ ಲೇಖಕನ ಮೂಲ ಗೊತ್ತಾಗಲ್ಲ. ಆದರೆ, ಪ್ರಸ್ತುತ ಕಾಲಮಾನದಲ್ಲಿ ಲೇಖಕ ಕಾಣಿಸಿಕೊಳ್ಳುವುದು ಅನಿವಾರ್ಯ’ ಎಂದರು.

‘ಇತಿಹಾಸದ ವಿಚಾರ ಬರೆಯಲು ತೊಡಗುವವರಿಗೆ ವಿಫುಲ ಆಕರಗಳು ಸಿಗಬೇಕು. ಆದರೆ, ನಮ್ಮ ನಾಗರಿಕತೆಯನ್ನು ಈ ಮಟ್ಟಿಗೆ ತಂದು ನಿಲ್ಲಿಸಿರುವ ನಮ್ಮ ಹಿರಿಯರ ವಿಚಾರಗಳು ಸಿಗದಿರುವುದು ದೌರ್ಭಾಗ್ಯ. ಇಷ್ಟರ ನಡುವೆಯೂ ಐತಿಹಾಸಿಕ ವಿಚಾರಗಳ ಬಗ್ಗೆ ಕನ್ನಡದಲ್ಲಿ ಕೃತಿಗಳು ಬರುತ್ತಿವೆ’ ಎಂದು ಎಂದು ಹೇಳಿದರು.

ಮುಖ್ಯ ಅತಿಥಿ ಸಂತೋಷ್‌ಕುಮಾರ್‌ ಮೆಹೆಂದಳೆ, ‘ಲೇಖಕರು ವೃತ್ತಿಪರವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಕತೆ, ಕಾದಂಬರಿಗಳಲ್ಲಿ ವಿಷಯ ವಸ್ತುವಿನ ಜೊತೆಗೆ ಪ್ರಸ್ತುತಪಡಿಸುವ ಶೈಲಿಯೂ ಮುಖ್ಯ. ನೈಜತೆ, ಗಟ್ಟಿಯಾದ ವಿಚಾರ ಆಯ್ಕೆ ಮಾಡಿ ಪ್ರಸ್ತುತಪಡಿಸಿದಲ್ಲಿ ಪ್ರಕಾಶಕರು ಹುಡುಕಿ ಬರುತ್ತಾರೆ’ ಎಂದು ತಿಳಿಸಿದರು.