ಸಾಹಿತ್ಯಾದಿಗಳು ಸಮಾಜದ ಸಾಕ್ಷಿ ಪ್ರಜ್ಞೆಗಳು

| Published : Dec 20 2024, 12:46 AM IST

ಸಾರಾಂಶ

ಸಾಹಿತ್ಯ ಸಂಗೀತ ಕಲೆ ನೃತ್ಯ ನಾಟಕಾದಿಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳಂತಿದ್ದು, ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸ್ಥಳ ಇತಿಹಾಸ ಹಾಗೂ ದೇಶಕಾಲಗಳ ಮಾಹಿತಿಯೂ ಒಂದು ಪ್ರಕಾರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದಾವಣಗೆರೆಸಾಹಿತ್ಯ ಸಂಗೀತ ಕಲೆ ನೃತ್ಯ ನಾಟಕಾದಿಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳಂತಿದ್ದು, ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸ್ಥಳ ಇತಿಹಾಸ ಹಾಗೂ ದೇಶಕಾಲಗಳ ಮಾಹಿತಿಯೂ ಒಂದು ಪ್ರಕಾರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು. ಅವರು ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಹಿತಿ ಗಿರಿಜಾ ದತ್ತಿ ಉಪನ್ಯಾಸದಲ್ಲಿ ಗಿರಿಜಾರವರ ಸಾಹಿತ್ಯ ಸಾಧನೆ ಕುರಿತು ಮಾತನಾಡಿದರು.ಭವಿಷ್ಯದ ಜಗತ್ತಿನ ಚಲಾವಣಾ ದ್ರವ್ಯವೆಂದರೆ ಜ್ಞಾನ ಸಾಮರ್ಥ್ಯ ಹಾಗೂ ಮಾಹಿತಿ ಆಗಲಿದ್ದು, ಸ್ಥಳೀಯವಾದ ದೇಶಕಾಲಗಳ ಮಾಹಿತಿಗಳನ್ನು ಗ್ರಂಥ ರೂಪದಲ್ಲಿ ಒದಗಿಸಿಕೊಡುವುದು ಸುಲಭ ಸಾಧ್ಯವಲ್ಲ. ಟಿ. ಗಿರಿಜಾ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕುರಿತಾಗಿ ಈ ಮಹತ್ಕಾರ್ಯ ಮಾಡಿದ್ದು, ಆ ಗ್ರಂಥಗಳು ಇವತ್ತಿಗೂ ಎಲ್ಲರ ಆಕರ ಗ್ರಂಥಗಳಾಗಿವೆ. ಕಾದಂಬರಿ, ಕಥೆ, ಕಾವ್ಯ, ಕವನಗಳು, ಭಾವನೆಗಳ ಮೇಲಾಟಗಳ ಪ್ರಧಾನವಾಗಿದ್ದರೆ, ಇತಿಹಾಸ ಸಾಹಿತ್ಯವು ಸತ್ಯನಿಷ್ಠ ವಾಗಿರಬೇಕು ಎಂದರು.ದತ್ತಿನಿಧಿ ಸ್ಥಾಪಕರು, ಬರಹಗಾರ್ತಿ ಟಿ.ಎಸ್. ಶೈಲಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿ. ಗಿರಿಜಾ ಅವರ ''ದಾವಣಗೆರೆ ಇದು ನಮ್ಮ ಜಿಲ್ಲೆ'' ಗ್ರಂಥಕ್ಕಿರುವ ಬೇಡಿಕೆ ಹಾಗೂ ಮೌಲ್ಯವನ್ನು ಗಮನಿಸಿ ಅದನ್ನು ತಾವು ಪರಿಷ್ಕರಿಸಿ ಮತ್ತಷ್ಟು ಪೂರಕ ಮಾಹಿತಿಗಳೊಂದಿಗೆ ಪುನರ್ ಪ್ರಕಟಿಸಿದ್ದಾಗಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಂ. ರುದ್ರಪ್ಪ, ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ, ಕಾಲೇಜಿನ ಐಕ್ಯೂ ಸಂಚಾಲಕ ಡಾ.ಜೆ.ಪಿ. ಗುರುರಾಜ, ಕಚೇರಿ ಅಧೀಕ್ಷಕಿ ಪ್ರತಿಭಾ, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ವೆಂಕಟೇಶ ಬಾಬು ಇತರರು ಇದ್ದರು.