ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಉ.ಕಾ. ಸುಬ್ಬರಾಯಾಚಾರ್ಯರು ಓರ್ವ ಗಾಂಧಿವಾದಿಯಾಗಿದ್ದು, ಜಗತ್ತಿನಲ್ಲಿ ಪ್ರೀತಿಯಿಂದ ಪರಿವರ್ತನೆಯಾಗದ್ದು ಯಾವುದು ಇಲ್ಲ ಎಂಬುದನ್ನು ಖಚಿತವಾಗಿ ನಂಬಿದ್ದರು. ಹಾಗೆ ನಡೆದುಕೊಂಡವರು ಇವರು. ಸಾಹಿತ್ಯ ಮತ್ತು ಸಂಗೀತವನ್ನು ಜೀವನ ಪ್ರೀತಿಯ ಭಾಗವಾಗಿ ಸ್ವೀಕರಿಸಿದ್ದ ಇವರು 25ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಭಾರತಿ ಬಡಿಗೇರ ತಿಳಿಸಿದರು.ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ನಡೆದ ಹಳೆಯ ಹೊನ್ನು-106 ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ ಕಾರ್ಯಕ್ರಮದಲ್ಲಿ ‘ಉ.ಕಾ. ಸುಬ್ಬರಾಯಾಚಾರ್ಯರ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿರು.ಸುಬ್ಬರಾಯಾಚಾರ್ಯರು ಭಾರತೀಯ ಮಹಾಕಾವ್ಯಗಳ ಬಗೆಗೆ ಅಧ್ಯಯನ ನಡೆಸಿ ಕಂಬರಾಮಾಯಣ ಮತ್ತು ವಾಲ್ಮೀಕಿ ರಾಮಾಯಣ ಎರಡು ಕಿರುಗ್ರಂಥಗಳನ್ನು ಬರೆದಿದ್ದಾರೆ. 3 ಜೀವನ ಚರಿತ್ರೆಗಳು, ಸರ್ವಧರ್ಮ ಸಮಾನತೆಯನ್ನು ಸಾರುವ ದೃಷ್ಟಿಯಿಂದ ಏಸುಕ್ರಿಸ್ತ ಎಂಬ ಪುಸ್ತಕ, ಪ್ರವಾಸ ಕಥನಗಳನ್ನು ತಮ್ಮ ಸ್ವ-ಅನುಭವದ ಮೂಲಕ ಬರೆದಿದ್ದಾರೆ. ಇವರ ದಿವ್ಯ ಜೀವನ ಕೃತಿಯಲ್ಲಿ ಬದುಕಿನ ಮೌಲ್ಯಗಳು, ವಿದ್ಯೆ-ಅವಿದ್ಯೆಗಳ ನೆಲೆ, ಆಧ್ಯಾತ್ಮಿಕ ವಿಕಾಸದ ವಿವಿಧ ಹಂತಗಳು, ಮಾನವ ಶರೀರ ವಿಕಾಸವಾಗುವುದು ಪ್ರಾಣ ಶರೀರದಿಂದ ಎಂಬ ಮಹತ್ವ ಅಂಶಗಳನ್ನು ಹೇಳುತ್ತಾರೆ ಎಂದರು.
ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಮತ್ತು ಉ.ಕಾ. ಸುಬ್ಬರಾಯಾಚಾರ್ಯರ ಒಡನಾಟವನ್ನು ಸ್ಮರಿಸುತ್ತಾ, ಕುವೆಂಪು ಸಾಹಿತ್ಯದಲ್ಲಿ ಉಲ್ಲೇಖವಾಗದಿರುವ ವ್ಯಕ್ತಿ ಇವರಾಗಿದ್ದರು. ಸಾಮಾಜೀಕರಣದಲ್ಲಿ ಯುವಕರು ಹೇಗೆ ಬದುಕಬೇಕು ಎಂದು ಸುಬ್ಬರಾಯರು ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಎನ್.ಎಸ್.ಎಸ್. ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಹುಶಿಸ್ತಿನ ಅಧ್ಯಯನಕ್ಕೆ ಒಳಪಡುವ ಸೌಜನ್ಯಶೀಲ ಬರಹಗಾರರು ಉ.ಕಾ. ಸುಬ್ಬರಾಯಾಚಾರ್ಯರು ಎಂದರು.ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕ ಲಿಂಗರಾಜ ಯು. ಹಾಗೂ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಇದ್ದರು. ಸಂಶೋಧನಾ ವಿದ್ಯಾರ್ಥಿಗಳಾದ ನಿರ್ಮಲಾ ವಿ., ಅಶ್ವಿನಿ ಡಿ., ಗೋಣಿಬಸಪ್ಪ ಪಿ., ವೀಣಾ ಪಿ. ನಿರ್ವಹಿಸಿದರು.
;Resize=(128,128))