ಅಂಬೇಡ್ಕರ್‌, ಲೋಹಿಯಾ ಚಿಂತನೆಗಳನ್ನು ಹೊರಗಿಟ್ಟು ಸಾಹಿತ್ಯ ರಚಿಸಲಾಗದು: ಪ್ರೊ.ಸಿ.ನಾಗಣ್ಣ

| Published : Apr 17 2025, 12:06 AM IST

ಅಂಬೇಡ್ಕರ್‌, ಲೋಹಿಯಾ ಚಿಂತನೆಗಳನ್ನು ಹೊರಗಿಟ್ಟು ಸಾಹಿತ್ಯ ರಚಿಸಲಾಗದು: ಪ್ರೊ.ಸಿ.ನಾಗಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ಭಾಷೆಯ ಉಳಿವಿಗೆ ಧಕ್ಕೆ ಬಂದಾಗಲೆಲ್ಲ ಅದನ್ನು ರಕ್ಷಿಸುವಂಥ ರಕ್ಷಣಾ ಪಡೆಯೂ ಬೇಕು. ಸಾಹಿತ್ಯ ರಚಿಸಿ, ಭಾಷೆಯ ಅಂತಶ್ಚೈತನ್ಯವನ್ನು ವೃದ್ಧಿಸುವಂಥ ಕವಿ- ಸಾಹಿತಿಗಳು ಬೇಕು. ಲೇಖಕರು ಹಾಗೂ ಹೋರಾಟಗಾರರು ಒಂದು ಬಾಷೆ ಮತ್ತು ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಂಬೇಡ್ಕರ್‌ ಹಾಗೂ ರಾಮಮನೋಹರ್‌ ಲೋಹಿಯಾ ಅವರ ಚಿಂತನೆಗಳನ್ನು ಹೊರಗಿಟ್ಟು ನಾವು ಸಾಹಿತ್ಯ ರಚಿಸಲಾಗದು ಎಂದು ಸಾಹಿತಿ ಪ್ರೊ.ಸಿ. ನಾಗಣ್ಣ ಅಭಿಪ್ರಾಯಪಟ್ಟರು.

ಕನ್ನಡಾಂಬೆ ರಕ್ಷಣಾ ವೇದಿಕೆಯು ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ,ಇಪ್ಪತ್ತನೇ ಶತಮಾನದಲ್ಲಿ ಎಲ್ಲ ಬರಹಗಳು ರಾಜಕಾರಣವನ್ನು ಹೊಂದೇ ಇರುತ್ತವೆ ಎಂಬ ಅಭಿಪ್ರಾಯ ಜನಜನಿತವಾದದ್ದು. ರಾಜಕಾರಣವನ್ನು ಒಳಗೊಳ್ಳದ ಬರಹವನ್ನು ನಾವು ಕಲ್ಪಿಸಿಕೊಳ್ಳಲು ವರ್ತಮಾನದಲ್ಲಿ ಸಾಧ್ಯವಾಗುವುದಿಲ್ಲ ಎಂದರು.

ಲೋಹಿಯಾ ಅವರು ಮೈಸೂರಿಗೆ ಬಂದಾಗ ಕುವೆಂಪು ಅವರನ್ನು ಭೇಟಿ ಮಾಡಿದ್ದರು. ಆಗ ನೀವು ರಾಜಕಾರಣದಲ್ಲಿ ಮಾಡುವುದನ್ನು ನಾನು ಸಾಹಿತ್ಯದ ಮೂಲಕ ಮಾಡುತ್ತಿದ್ದೇನೆ ಎಂದು ಹೇಳಿದ್ದರು ಎಂದು ಪ್ರೊ.ನಾಗಣ್ಣ ನೆನಪಿಸಿಕೊಂಡರು.

ಒಂದು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ಭಾಷೆಯ ಉಳಿವಿಗೆ ಧಕ್ಕೆ ಬಂದಾಗಲೆಲ್ಲ ಅದನ್ನು ರಕ್ಷಿಸುವಂಥ ರಕ್ಷಣಾ ಪಡೆಯೂ ಬೇಕು. ಸಾಹಿತ್ಯ ರಚಿಸಿ, ಭಾಷೆಯ ಅಂತಶ್ಚೈತನ್ಯವನ್ನು ವೃದ್ಧಿಸುವಂಥ ಕವಿ- ಸಾಹಿತಿಗಳು ಬೇಕು. ಲೇಖಕರು ಹಾಗೂ ಹೋರಾಟಗಾರರು ಒಂದು ಬಾಷೆ ಮತ್ತು ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಆದ್ದರಿಂದ ನಾವೆಲ್ಲರೂ ಕನ್ನಡದ ರಕ್ಷಣೆಗಾಗಿ ಧೀಕ್ಷೆ ತೊಡೋಣ ಹಾಗೂ ಹೋರಾಟಗಾರರ ಕೈಬಲಪಡಿಸೋಣ ಎಂದರು.

ಮತ್ತೊರ್ವ ಮುಖ್ಯಅತಿಥಿ ಕವಿ ಜಯಪ್ಪ ಹೊನ್ನಾಳಿ ಮಾತನಾಡಿ, ಮಹಿಳೆಯರು ಹಾಗೂ ಅಂಬೇಡ್ಕರ್- ಈ ಇಬ್ಬರಲ್ಲೂ ತಾಯ್ತನ ಇದೆ. ಅಂಬೇಡ್ಕರ್‌ ಬೇರೆಯಲ್ಲ, ತಾಯ್ತನ ಬೇರೆಯಲ್ಲ. ಮಹಿಳೆಯರು ಹಾಗೂ ಶೂದ್ರರಿಗೆ ಧ್ವನಿ ಕೊಟ್ಟರು. ಅವರು ಮಾತೃ ಹೃದಯದಿಂದ ಎಲ್ಲರಿಗೂ ಬದುಕುವ ಹಾಗೂ ಸಮಾನತೆಯ ಹಕ್ಕು ನೀಡಿದ್ದಾರೆ ಎಂದರು.

ಅಂಬೇಡ್ಕರ್‌ ಅವರಂಥ ವ್ಯಕ್ತಿಗಳು ತೀರಾ ಅಪರೂಪ. ನೊಂದವರ, ಬೆಂದವರ, ದಲಿತರ, ದಮನಿತರ ಆಶೋತ್ತರವಾಗಿ ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಅವರು ಸಂವಿಧಾನದ ಮೂಲಕ ನೀಡಿದ್ದಾರೆ. ಹೀಗಾಗಿ ಅವರ ಸಮತೆ- ಮಮತೆಯ ತೇರನ್ನು ಮುಂದಕ್ಕೆ ಎಳೆಯಲು ಸಾದ್ಯವಾಗದಿದ್ದರೂ ಹಿಂದಕ್ಕೆ ಎಳೆಯುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದರು.

ಪ್ರಸುತ್ತ ಜಾತಿಯನ್ನು ನೊಂದವರು ಗುರಾಣಿ ಮಾಡಿಕೊಂಡಿದ್ದರೆ ಬಲಿತರು ಖಡ್ಗ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ಬಿಜೆಪಿ ಯುವ ಮುಖಂಡರಾದ ವಿ. ಕವೀಶ್‌ ಗೌಡ ಮಾತನಾಡಿ, ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶವನ್ನು ಕೊಟ್ಟವರು ಡಾ.ಬಿ.ಆರ್‌. ಅಂಬೇಡ್ಕರ್‌. ಸಂವಿಧಾನದಿಂದ ನಮಗೆ ಅನುಕೂಲವಾಗಿದ್ದರೂ ಅದರ ಆಶಯಗಳನ್ನು ಸಂಪೂರ್ಣವಾಗಿ ಜಾರಿ ಮಾಡುವಲ್ಲಿ ಸ್ವಲ್ಪ ಹಿಂದುಳಿದ್ದೇವೆ ಎಂದರು.

ಅಂಗನವಾಡಿ, ಆಶಾ, ಗಾರ್ಮೆಂಟ್ಸ್, ಶಿಕ್ಷಕರು, ವೈದ್ಯರು ಹೆಚ್ಚಾಗಿ ಮಹಿಳೆಯರೇ ಇದ್ದಾರೆ. ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂದರು.

ಪ್ಯಾರಾ ಅಥ್ಲಿಟ್‌ ಭಾರತಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ತೆರಳಲು, ತರಬೇತಿ ಹಾಗೂ ಶಿಕ್ಷಣ ಪಡೆಯಲು ತಮ್ಮ ವತಿಯಿಂದ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಅವರು ಘೋಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಬುದ್ಧ, ಬಸವಣ್ಣ ನಂತರ ಅಂಬೇಡ್ಕರ್‌ ಅವರು ಮಹಿಳೆಯರಿಗೆ ಸಮಾನತೆಗಾಗಿ ಶ್ರಮಿಸಿದವರು. ಹೀಗಾಗಿ ಅಂಬೇಡ್ಕರ್‌ ಅವರನ್ನು ಸದಾ ಸ್ಮರಿಸಬೇಕು ಎಂದರು.

ಪ್ರಸ್ತುತ ಮಹಿಳೆಯರು ಭೂಮಿಯಿಂದ ಬಾಹ್ಯಾಕಾಶದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಯಾವುದೇ ಪರೀಕ್ಷೆಯ ಫಲಿತಾಂಶ ಬಂದರೂ ಅವರದೇ ಮೇಲುಗೈ ಇರುತ್ತದೆ. ಇತ್ತೀಚೆಗೆ ಪ್ರಕಟವಾದ ಪಿಯುಸಿಯ ಮೂರು ವಿಭಾಗಗಳಲ್ಲೂ ಬಾಲಕಿಯರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ. ರಾಜಶೇಖರ್‌ ಮಾತನಾಡಿ, ಕನ್ನಡ ನಾಡು- ನುಡಿಯ ಜೊತೆಗೆ ಯಾವುದೇ ಶೋಷಿತರಿಗೆ, ನೊಂದವರಿಗೆ ನ್ಯಾಯ ಕೊಡಿಸಲು ತಮ್ಮ ವೇದಿಕೆ ಸದಾ ಬದ್ಧವಾಗಿದೆ. ಮೊಸರಲ್ಲಿ ಕಲ್ಲು ಹುಡುಕುವ ಬದಲು, ಎಲ್ಲರನ್ನು ಒಂದೇ ಎಂದು ನೋಡುವ ಬದಲು ಕನ್ನಡಪರ ಕೆಲಸ ಮಾಡುವವರಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಂಬೇಡ್ಕರ್‌ ಗೀತೆಗಳನ್ನು ಉರುಗಲವಾಡಿ ರಾಮಣ್ಣ ಹಾಡಿದರು. ನಂದಿನಿ ಮಹೇಶ್‌ ನಿರೂಪಿಸಿದರು. ಕನ್ನಡಾಂಬೆ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಂತೋಷ್‌ ವಂದಿಸಿದರು. ಜಿಲ್ಲಾಧ್ಯಕ್ಷೆ ಆರ್. ಮಂಜುಳಾ, ಕನ್ನಡ ಅಭಿಮಾನಿ ಬಳಗದ ಕೃಷ್ಣಪ್ಪ, ಕರವೇ ಶ್ರೀನಿವಾಸ್‌, ರೈತ ಸಂಘದ ಕೃಷ್ಣೇಗೌಡ, ವಿವಿಧ ಸಂಘಟನೆಗಳ ಸೋಮೇಗೌಡ, ಮಹೇಶ್‌ ಕುಮಾರ್‌, ಶಿವಕುಮಾರ್‌, ಮುಖಂಡ ರಂಗಪ್ಪ ಮೊದಲಾದವರು ಇದ್ದರು. ಎಸ್‌. ಯಶಿಕಾ ಭರತನಾಟ್ಯ ಪ್ರದರ್ಶಿಸಿದರು.

ಸನ್ಮಾನಿತರು

ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಕೆ. ಲಕ್ಷ್ಮೀಶ, ನೃತ್ಯ ಮತ್ತು ಸಂಗೀತ ವಿದುಷಿ ಡಾ.ಚೈತ್ರಾ ಬಿಳಿಗಿರಿ, ರಾಜ್ಯ ಮಟ್ಟದ ಪ್ಯಾರಾ ಅಥ್ಲೀಟ್‌ ಬಿ ಭಾರತಿ ಹಾಗೂ ಹಿನ್ಕಲ್‌ ಗ್ರಾಪಂ ಸದಸ್ಯೆ ನೇಹಾ ಅವರನ್ನು ಸನ್ಮಾನಿಸಲಾಯಿತು.

ಫೋಟೋ