ಜಾಗತೀಕರಣದಿಂದ ಕ್ಷೀಣಿಸಿದ ಸಾಹಿತ್ಯ

| Published : Mar 16 2025, 01:45 AM IST

ಸಾರಾಂಶ

ಜಾಗತೀಕರಣದಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಕ್ಷೀಣಿಸುತ್ತಿದೆ. ನಾಡು, ನುಡಿ, ಭಾಷೆ, ಸಂಸ್ಕೃತಿ, ಪರಂಪರೆ, ಜನ, ನೆಲದ ಬಗ್ಗೆ ಅಭಿಮಾನ ಇಲ್ಲದ ದಿನಗಳನ್ನು ನಾವು ನೋಡುತ್ತಿದ್ದೇವೆ.

ಕನಕಗಿರಿ:

ವಿದ್ಯಾರ್ಥಿಗಳು ಕೃತಿಗಳನ್ನು ಓದಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜಮೀರ್‌ ನಂದಾಪುರ ಹೇಳಿದರು.

ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗಿದ್ದ ಚಕೋರ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾಗತೀಕರಣದಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಕ್ಷೀಣಿಸುತ್ತಿದೆ. ನಾಡು, ನುಡಿ, ಭಾಷೆ, ಸಂಸ್ಕೃತಿ, ಪರಂಪರೆ, ಜನ, ನೆಲದ ಬಗ್ಗೆ ಅಭಿಮಾನ ಇಲ್ಲದ ದಿನಗಳನ್ನು ನಾವು ನೋಡುತ್ತಿದ್ದೇವೆ ಎಂದು ವಿಷಾದಿಸಿದರು.

ಮೊಬೈಲ್ ಎಲ್ಲ ಆಯಾಮಗಳಿಂದ ಮನುಷ್ಯನಿಗೆ ಧಕ್ಕೆ ಉಂಟು ಮಾಡುತ್ತಿದೆ. ಹೀಗಿರುವಾಗ ನಾವು ಮತ್ತೆ-ಮತ್ತೆ ಮೊಬೈಲ್‌ನತ್ತ ಚಿತ್ತ ಇಡುತ್ತಿದ್ದೇವೆ. ಆಧುನಿಕ ಯುಗದಲ್ಲಿ ಈ ರೀತಿಯ ವಾತಾವರಣ ಮನುಷ್ಯನ ಅವನತಿ ದಿನಗಳಾಗಿವೆ ಎಂದ ಅವರು, ಚಕೋರ ಒಂದು ಕಾಲ್ಪನಿಕ ಪಕ್ಷಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಪ್ರತಿಯೊಬ್ಬರೂ ಸಾಹಿತ್ಯದ ರುಚಿ ಕಾಣಬೇಕಾಗಿದೆ. ಅಂದಾಗ ಮಾತ್ರ ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆಗಿರುವ ಗಮ್ಮತ್ತು ಅರ್ಥವಾಗಲಿದೆ ಎಂದರು.

ಉಪನ್ಯಾಸಕಿ ಡಾ. ಪಾರ್ವತಿ ಮಾತನಾಡಿ, ಕುವೆಂಪುರ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಮಹತ್ತರವಾದ ಅಂಶಗಳು. ವೈಚಾರಿಕತೆ ಕೇವಲ ಬರಹಗಳಲ್ಲಿ ಮಾತ್ರವಲ್ಲದೇ ಅವರ ವ್ಯಕ್ತಿತ್ವದಲ್ಲಿ ಅಡಗಿದೆ. ಪ್ರಸ್ತುತ ದಿನಮಾನಗಳಲ್ಲಿ ಸರ್ವಕಾಲಿಕ ಸತ್ಯವಾದ ನೇರ, ನಿಶ್ಚಯ, ಪರಿಪೂರ್ಣ, ಸಮನ್ವಯ ದೃಷ್ಟಿಕೋನದ ಅವರ ವೈಚಾರಿಕ ನಿಲುವು ಮೂಢನಂಬಿಕೆ ಹೊಡೆದೂಡಿಸಿ ಮನುಜ ಮತ ಪ್ರತಿಪಾದಿಸುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಕೋರ ಸಂಚಾಲಕ ಸುರೇಶ ಕಲಾಪ್ರೀಯಾ, ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬಹುಸೇನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ಕಲ್ಲೂರು, ಕಾಲೇಜಿನ ಪ್ರಾಧ್ಯಾಪಕ ವೀರೇಶ ಕೆಂಗಲ್, ಡಾ. ಎಚ್.ಸಿ. ಆಶೀಕಾ, ಮರ್ವಿನ್ ಡಿಸೋಜ, ಲಲಿತಾ ಎನ್.ಕೆ, ರಕ್ಷಿತಾ ಎ, ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮಾದಿನಾಳ ಸೇರಿದಂತೆ ಇತರರಿದ್ದರು.