ಓದುಗರ ಕೊರತೆಯ ನಡುವೆಯೂ ಹುಲುಸಾಗಿ ಬೆಳೆದ ಸಾಹಿತ್ಯ

| Published : Mar 01 2024, 02:22 AM IST

ಸಾರಾಂಶ

ಕನ್ನಡದ ಸೇವೆಗೆ ಯುವ ಮನಸುಗಳು ವಾಲುತ್ತಿರುವುದು ಒಳ್ಳೆಯ ಸಂಗತಿ. ಸಾಹಿತ್ಯಕ್ಕೆ ಯುವ ಚಿಂತನೆಗಳು ಬಂದಾಗ ಹಳೆ ಬೇರು ಹೊಸ ಚಿಗುರು ಎನ್ನುತ್ತೇವೆ.

ದಾಂಡೇಲಿ:

ಕನ್ನಡದ ಸೇವೆಗೆ ಯುವ ಮನಸುಗಳು ವಾಲುತ್ತಿರುವುದು ಒಳ್ಳೆಯ ಸಂಗತಿ. ಸಾಹಿತ್ಯಕ್ಕೆ ಯುವ ಚಿಂತನೆಗಳು ಬಂದಾಗ ಹಳೆ ಬೇರು ಹೊಸ ಚಿಗುರು ಎನ್ನುತ್ತೇವೆ. ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾದ ಗಂಭೀರ ಓದುಗರ ಕೊರತೆಯ ನಡುವೆಯೂ ಸಾಹಿತ್ಯ ಬೆಳೆ ಹುಲುಸಾಗಿದೆ ಎಂದು ಹಿರಿಯ ಸಾಹಿತಿ ಡಾ. ಚಿಂತಾಮಣಿ ಕೊಡ್ಲೆಕೆರೆ ಹೇಳಿದರು.ಅವರು ದಾಂಡೇಲಿಯ ಕಾರ್ಮಿಕ ಭವನದಲ್ಲಿ ಗುರುವಾರ ನಡೆದ ದಾಂಡೇಲಿ ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯಕ್ಕೆ ಮನುಷ್ಯನನ್ನು ಸಾವಿನಿಂದ ಬಿಡುಗಡೆ ಮಾಡುವ ಶಕ್ತಿಯಿದೆ. ಪುರಾಣದ ನಂಬಿಕೆ ಮತ್ತು ನೈಜತೆ ಜತೆಗೆ ಬದಲಾವಣೆ ಇಂದಿನ ಜರೂರತ್ತಾಗಿದೆ ಎಂದು ಅಭಿಪ್ರಾಯಪಟ್ಟರು.ಸಮ್ಮೇಳನಾಧ್ಯಕ್ಷ ಉಸ್ತಾದ ಕೆ.ಎಲ್. ಜಮಾದರ ಮಾತನಾಡಿ, ಸಂಗೀತ ಫಲಕುಗಳನ್ನು ಪ್ರಸ್ತುತಿಪಡಿಸಿ, ಸಮ್ಮೇಳನಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಜಿಲ್ಲಾದ್ಯಂತ ಅನೇಕ ಕನ್ನಡದ ಕೆಲಸಗಳನ್ನು ಜನರ ಸಹಕಾರದಿಂದ ಕಸಾಪ ಮಾಡುತ್ತಿದೆ. ಜಿಲ್ಲೆಯಲ್ಲೇ ಕಸಾಪ ಮಾದರಿಯಾಗಿರುವುದು ಸಂತಸ ತಂದಿದೆ. ಅನುದಾನ ಕೊರತೆಯಿಂದ ಸಮ್ಮೇಳನಗಳು ಸೊರಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿ, ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಆರ್‌.ಜಿ. ಹೆಗಡೆ ಅವರ ಪುಸ್ತಕ ಬಿಡುಗಡೆ ಮಾಡಲಾಯಿತು. ಆರಂಭದಲ್ಲಿ ನಗರ ಚೆನ್ನಮ್ಮ ವೃತ್ತದಿಂದ ಸಮ್ಮೇಳನಾಧ್ಯಕ್ಷ ಮೆರವಣಿಗೆ ಸೋಮಾನಿ ವೃತ್ತದ ಹತ್ತಿರ ಇರುವ ಕಾರ್ಮಿಕ ಭವನದ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಶಾಲಾ ಮಕ್ಕಳಿಂದ ಛದ್ಮವೇಷ, ರೂಪಕ, ಡೊಳ್ಳು ಕುಣಿತ ಕೋಲಾಟ ಮೆರವಣಿಗೆಯಲ್ಲಿದ್ದವು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಸ್ವಾಗತಿಸಿದರು. ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ತಹಸೀಲ್ದಾರ್ ಎಂ.ಎನ್. ಮಠದ, ಪೌರಾಯುಕ್ತ ರಾಜಾರಾಮ ಪವಾರ, ತಾಪಂ ಇಒ ಪ್ರಕಾಶ ಹಾಲಮ್ಮನವರ, ಬಿಇಒ ಪ್ರಮೋದ ಮಹಾಲೆ, ಸಹಾಯ ಅರಣ್ಯಾಧಿಕಾರಿ ಸಂತೋಷ ಚವ್ಹಾಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಿ, ನಿಕಟ ಪೂರ್ವ ಅಧ್ಯಕ್ಷ ಆರ್.ಜಿ. ಹೆಗಡೆ, ಕರ್ನಾಟಕ ಸಂಘದ ಅಧ್ಯಕ್ಷ ಯು.ಎಸ್. ಪಾಟೀಲ ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹೀದಾ ಪಠಾಣ್ ಪುಸ್ತಕ ಮಳಿಗೆ ಉದ್ಘಾಟಿಸಿದರು. ರತ್ನ ದೀಪಾ ಎನ್. ಎಂ. ದ್ವಾರಗಳನ್ನು ಪರಿಚಯಿಸಿದರು. ನಿರುಪಮಾ ನಾಯಕ ನಿರೂಪಿಸಿದರು.

ಈ ವೇಳೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡಿಸ್, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯಕ, ಪ್ರೆಸ್ ಕ್ಲಬ್ ಅಧ್ಯಕ್ಷ ಕೃಷ್ಣಾ ಪಾಟೀಲ, ಸುರೇಶ ಕಾಮತ್, ಆಶಾ ದೇಶಭಂಡಾರಿ, ನಾಗೇಶ ನಾಯ್ಕ, ಕಲ್ಪನಾ ಪಾಟೀಲ, ವೆಂಕಮ್ಮ ನಾಯಕ, ನರೇಶ ನಾಯ್ಕ, ಸುರೇಶ ಪಾಲನಕರ, ಎಂ.ಆರ್. ನಾಯಕ, ಚಂದ್ರಕಾಂತ ನಾಡಿಗೇರ, ಸುಭಾಸ ನಾಯಕ, ಸೇತಾರಾಮ ನಾಯ್ಕ, ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ, ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ಇದ್ದರು.