ಸಮಾಜಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಸಾಹಿತ್ಯಕ್ಕಿದೆ: ನಾಡೋಜ ಮಹೇಶ ಜೋಶಿ

| Published : Feb 12 2024, 01:34 AM IST

ಸಮಾಜಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಸಾಹಿತ್ಯಕ್ಕಿದೆ: ನಾಡೋಜ ಮಹೇಶ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜಕ್ಕೆ ಮಾರ್ಗದರ್ಶನ ಮಾಡುವಂತಹ ಶಕ್ತಿ ಸಾಹಿತ್ಯಕ್ಕಿದೆ.

ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ನಿಜಶರಣ ಅಂಬಿಗರ ಚೌಡಯ್ಯ-ಹೆಳವನಕಟ್ಟಿ ಗಿರಿಯಮ್ಮ-ಹಾನಗಲ್ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸಮಾಜಕ್ಕೆ ಮಾರ್ಗದರ್ಶನ ಮಾಡುವಂತಹ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ ಮಹೇಶ ಜೋಶಿ ಹೇಳಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು, ಸಂದರ್ಭಗಳು ನಿಜವಾದ ಸಾಹಿತ್ಯ ಸೃಷ್ಟಿಸುತ್ತವೆ. ಅಂತಹ ಸಾಹಿತ್ಯದ ಬದುಕಿನಲ್ಲಿ ಜೀವಿಸುತ್ತಿರುವವರು ನಾವಾಗಿದ್ದೇವೆ. ಉತ್ತರ ಕರ್ನಾಟಕದ ಹೆಬ್ಬಾಗಿಲು, ಬೀಜೋತ್ಪಾದನೆಗೆ ಏಷ್ಯಾ ಖಂಡದಲ್ಲಿಯೇ ಹೆಸರಾಗಿರುವ ಹೆಮ್ಮೆ ರಾಣಿಬೆನ್ನೂರಿಗಿದೆ. ಮಹಾಭಾರತ ಸಮಯದಲ್ಲಿಯೂ ರಾಣಿಬೆನ್ನೂರಿನ ಭೀಮನ ದೋಣಿ ಹೆಸರು ಉಲ್ಲೇಖವಿದೆ. ಸರ್ವಧರ್ಮಗಳ ಸಮನ್ವತೆಯ ಸ್ಥಳ ಇದಾಗಿದೆ ಎಂದರು.

ಸ್ಮರಣೆ ಸಂಚಿಕೆ ಬಿಡುಗಡೆ ಮಾಡಿದ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಿಲ್ಲೆಯ ವಿ.ಕೃ. ಗೋಕಾಕ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿರುವುದು ನಮಗೆಲ್ಲ ಅಭಿಮಾನದ ಸಂಗತಿ. ಕನ್ನಡ ಭಾಷೆಗೆ ಸ್ವಲ್ಪವಾದರೂ ಧಕ್ಕೆಯಾದರೆ ನಾವೆಲ್ಲರೂ ಒಂದಾಗಿ ಕನ್ನಡ ಉಳಿವಿಗಾಗಿ ಹೋರಾಡೋಣ. ಈಗಾಗಲೇ ಗಡಿ ಭಾಗದಲ್ಲಿ ಭಾಷೆಯ ಉಳಿವಿಗಾಗಿ ಬೆಳಗಾವಿಯಲ್ಲಿ ವಿಕಾಸ ಸೌಧ ನಿರ್ಮಿಸಿ ಅಧಿವೇಶನ ಕೂಡ ನಡೆಸಲಾಗುತ್ತಿದೆ. ಮುಂದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ ಒಂದೇ ಊರಿಗೆ ಸೀಮಿತವಾಗದೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಒಂದೊಂದು ಬಾರಿ ನಡೆಯುವಂತಾಗಬೇಕು. ಹೀಗಾಗಿ ಮುಂದಿನ ಜಿಲ್ಲಾ ಸಮ್ಮೇಳನದ ಸ್ಥಳವನ್ನು ಇಂದೇ ಘೋಷಣೆ ಮಾಡಬೇಕು ಎಂದರು.

ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ವಾಣಿಜ್ಯ ನಗರವು ಸಾಂಸ್ಕೃತಿಕ ನಾಡಾಗಿ ಪರಿವರ್ತನೆಯಾಗಿದೆ ಎಂದರು.

ಸರ್ವಾಧ್ಯಕ್ಷ ಜೆ.ಎಂ. ಮಠದ ಸರ್ವಾಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು.

ಚಿಕ್ಕಮಗಳೂರಿನ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕಾರ್ಯಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಸಂಚಾಲಕ ಡಾ. ಕೆ.ಎಚ್. ಮುಕ್ಕಣ್ಣನವರ, ವಾಸಣ್ಣ ಲದ್ವಾ, ವಾಸಪ್ಪ ಕುಸಗೂರ, ವಿ.ಪಿ. ಲಿಂಗನಗೌಡ್ರ, ಜಿ.ಜಿ. ಹೊಟ್ಟಿಗೌಡ್ರ, ರುಕ್ಮಿಣಿ ಸಾವಕಾರ, ಡಾ. ಗಣೇಶ ದೇವಗಿರಿಮಠ, ಚೋಳಪ್ಪ ಕಸವಾಳ, ಪ್ರಕಾಶ ಜೈನ್, ಪ್ರಕಾಶ ಬುರಡಿಕಟ್ಟಿ, ನೀಲಕಂಠಪ್ಪ ಕುಸಗೂರ ಹಾಗೂ ನಗರಸಭೆ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ಸ್ವಾಗತಿಸಿದರು. ಜಯಶ್ರೀ ಮುರಡೆಪ್ಪನವರ ಹಾಗೂ ಗುಡ್ಡಪ್ಪ ಮಾಳಗುಡ್ಡಪ್ಪನವರ ನಿರೂಪಿಸಿದರು.

ಪುಸ್ತಕ ಬಿಡುಗಡೆ:

ಇದೇ ಸಂದರ್ಭದಲ್ಲಿ ಡಾ. ಕೆ.ಎಚ್. ಮುಕ್ಕಣ್ಣನವರ ವಿರಚಿತ ಕಡೆಗಣ್ಣಲಿ ನೋಡದಿರೆನ್ನಯ್ಯ-ಹೇಳವನಕಟ್ಟಿ ಗಿರಿಯಮ್ಮ, ಡಾ. ಬಿ.ಎಂ. ಬೇವಿಮರದ ವಿರಚಿತ ಹೆಜ್ಜೆ ಹುಡುಕುವ ಹಾದಿ (ಸಂಶೋಧನೆ), ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ವಿರಚಿತ ಆಧುನಿಕ ವಚನ ಸ್ಪಂದನ, ವೆಂಕಟೇಶ ಈಡಿಗರ ವಿರಚಿತ ಮಗ್ಗ ಮರೆತಾಗ (ನಾಟಕ), ಮೈಲಾರದ ಮಹೇಶ್ವರಪ್ಪ ವಿರಚಿತ ನೀ ಬದುಕೇ (ಕವನ ಸಂಕಲನ), ಶ್ರೀಕಾಂತ ಹುಲ್ಮನಿ ವಿರಚಿತ ಶಿಕ್ಷಕ-ಅರಿವಿನ ಅಕ್ಷಯ ಪಾತ್ರೆ, ಪ್ರಶಾಂತ ದೈವಜ್ಞ ವಿರಚಿತ ಸಂದೀಪ-ಕಿರಣ, ಮಂಜುಳಾ ಹಿರೇಬಿದರಿ ವಿರಚಿತ ಪ್ರೀತಿ ಬದುಕಾಗಲಿ (ಭಾವಗೀತೆಗಳು), ಡಾ. ನಿಂಗಪ್ಪ ಚಳಗೇರಿ ವಿರಚಿತ ಪ್ರೇಮ ಪೂರ್ಣ ಪಥಿಕ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:

ಪತ್ರಕರ್ತ ಸಿದ್ದು ಆರ್.ಜಿ. ಹಳ್ಳಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಾಸಣ್ಣ ಕುಸಗೂರ, ವರ್ತಕ ವಾಸಣ್ಣ ಕುಸಗೂರ, ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡ್ರ ಸೊಸೆ ಕುಸುಮಾದೇವಿ ಪಾಟೀಲ ಅವರಿಗೆ ಸನ್ಮಾನ ಮಾಡಲಾಯಿತು.