ಸಾರಾಂಶ
ಲೇಖಕಿ ಸ್ಮಿತಾ ಅಮೃತರಾಜ್ ಮಾತನಾಡಿ, ಸಮಾಜದಲ್ಲಿನ ನ್ಯೂನತೆಗಳನ್ನು ಪ್ರತಿಬಿಂಬಿಸುವ ದೊಡ್ಡ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಎಲ್ಲರನ್ನು ಬೆಸೆಯುವ ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ. ಜಡಿಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯ ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿರುವುದು ಶ್ಲಾಘನೀಯ ಎಂದು ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು.ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಕನ್ನಡ ಭವನದ ಕೊಡಗು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ, ಕನ್ನಡ ಭವನ ಕಾಸರಗೋಡಿನ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮತ್ತು ಕೊಡಗು ಮಳೆಗಾಲ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್, ಯುವ ಮನಸ್ಸುಗಳಲ್ಲಿ ಮಾತೃ ಭಾಷೆ ಕನ್ನಡವನ್ನು ಗಟ್ಟಿಗೊಳಿಸುವುದೇ ಸಂಘಟನೆಯ ಉದ್ದೇಶವಾಗಿದೆ. 2001ರಲ್ಲಿ ತಾವು ಸ್ಥಾಪಿಸಿದ ಸಮಿತಿ ಕಳೆದ 24 ವರ್ಷಗಳಿಂದ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದರು.ಲೇಖಕಿ ಸ್ಮಿತಾ ಅಮೃತರಾಜ್ ಮಾತನಾಡಿ, ಸಮಾಜದಲ್ಲಿನ ನ್ಯೂನತೆಗಳನ್ನು ಪ್ರತಿಬಿಂಬಿಸುವ ದೊಡ್ಡ ಶಕ್ತಿ ಚುಟುಕು ಸಾಹಿತ್ಯಕ್ಕಿದೆ. ಸಣ್ಣ ಸಣ್ಣ ಬರಹಗಳು ಬರಹಗಾರರಿಗೆ ಅಡಿಪಾಯವನ್ನು ಹಾಕಿ ಕೊಡುತ್ತವೆ. ನಮ್ಮನ್ನು ಒತ್ತಡದಿಂದ ಬಿಡುಗಡೆಗೊಳಿಸಲು ಮತ್ತು ಮನಸ್ಸನ್ನು ಹಗುರವಾಗಿಸಲು ಕಾವ್ಯ ಉತ್ತಮ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಲು ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಅವರು ನೀಡುತ್ತಿರುವ ಕೊಡುಗೆ ಅಪಾರ. ಇವರ ಪ್ರಯತ್ನಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದರು.ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಎ.ರುಬೀನಾ ಮಾತನಾಡಿದರು. ಕೊಡಗು ಕನ್ನಡ ಭವನ ಕೋಶಾಧಿಕಾರಿ ವಿನೋದ್ ಕುಡ್ತೇಕರ್, ಕಾರ್ಯದರ್ಶಿ ವಸಂತ್ ಕೆರೆಮನೆ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ರಂಜಿತ್ ಜಯರಾಂ, ನಿವ್ಯ ದೇವಯ್ಯ ಪ್ರಾರ್ಥಿಸಿ, ಅರುಣ್ ಕುಮಾರ್ ಸ್ವಾಗತಿಸಿ, ಹರ್ಷಿತಾ ಶೆಟ್ಟಿ, ವಿನೋದ್ ಮೂಡಗದ್ದೆ ನಿರೂಪಿಸಿ, ಚಂದನ್ ನಂದರಬೆಟ್ಟು ವಂದಿಸಿದರು.ಸೋಮವಾರಪೇಟೆಯ ತೆರೇಸಾ ಲೋಬೊ ಹಾಡಿದರು ಹಾಗೂ ಎಸ್.ಎ.ರಿಶಾ ನೃತ್ಯ ಪ್ರದರ್ಶನ ಮಾಡಿದರು.ಕಾವ್ಯಶ್ರೀ ಪ್ರಶಸ್ತಿ ಪ್ರದಾನಕಾರ್ಯಕ್ರಮದಲ್ಲಿ ಕಿಗ್ಗಾಲು ಎನ್.ಗಿರೀಶ್ ಮೂರ್ನಾಡು, ಮೂಕಳೇರ ಟೈನಿ ಪೂಣಚ್ಚ ಪೊನ್ನಂಪೇಟೆ, ಪಂದ್ಯಂಡ ರೇಣುಕಾ ಸೋಮಯ್ಯ ಹೊಸೂರು ಅಮ್ಮತ್ತಿ, ಅಪರ್ಣಾ ಹುಲಿತಾಳ, ಅಯ್ಯನೆರವಂಡ ಪ್ರಿತುನ್ ಪೂವಣ್ಣ ಅವರಿಗೆ ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಪಯಸ್ವಿನಿ ಪ್ರಶಸ್ತಿ:ಕನ್ನಡ ಭವನ ಕಾಸರಗೋಡಿನ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಕವಯತ್ರಿ, ಲೇಖಕಿ ಸ್ಮಿತಾ ಅಮೃತರಾಜ್, ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಸ್ವೀಚ್ ಹಾಗೂ ಇಂಪ್ಲಾಂಟ್ ಕ್ಲಿನಿಕ್ ಇಂಡಿಯಾ ಹಾಗೂ ಮರ್ಕರಾ ಪೋಸ್ಟ್ ಎಂ.ಡಿ, ಪಿ.ಆರ್.ಮ್ಯಾನೇಜರ್ ಜೈರಸ್ ಥಾಮಸ್ ಅಲೆಗ್ಸಾಂಡರ್ ಅವರಿಗೆ ನೀಡಿ ಗೌರವಿಸಲಾಯಿತು.ಪುಸ್ತಕ ಬಿಡುಗಡೆ
ಕೊಡವ ಮಕ್ಕಡ ಕೂಟದ 116ನೇ ಪುಸ್ತಕ ಲೇಖಕಿ ಟಿ.ವೈಶಾಲಿನಿ ಅವರು ರಚಿಸಿರುವ ಮುಖವಾಡ ಕವನ ಸಂಕಲನ ಕೃತಿಯನ್ನು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಬಿಡುಗಡೆ ಮಾಡಿದರು.ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕೊಡಗು ಮಳೆಗಾಲದ ಕವಿಗೋಷ್ಠಿ’ ಯಲ್ಲಿ 35ಕ್ಕೂ ಹೆಚ್ಚು ಬರಹಗಾರರು ಕವನ ವಾಚಿಸಿ ಗಮನ ಸೆಳೆದರು.